ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯ್ಕಾಟ್‌, ಸ್ಟ್ರಾಸ್‌ ಇನ್ನು ‘ಸರ್‌’

Last Updated 10 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಲಂಡನ್‌: ಇಂಗ್ಲೆಂಡ್‌ ತಂಡದ ಮಾಜಿ ಆರಂಭ ಆಟಗಾರರಾದ ಆ್ಯಂಡ್ರೂ ಸ್ಟ್ರಾಸ್‌ ಮತ್ತು ಜೆಫ್‌ ಬಾಯ್ಕಾಟ್‌ ಅವರನ್ನು ನೈಟ್‌ಹುಡ್‌ ಪದವಿಗೆಆಯ್ಕೆ ಮಾಡಲಾಗಿದೆ. ಅವರ ಹೆಸರಿನ ಮುಂದೆ ಇನ್ನು ‘ಸರ್‌’ ಪದವಿ ಸೇರಿಕೊಳ್ಳಲಿದೆ.‌

ಇಂಗ್ಲೆಂಡ್‌ ಪ್ರಧಾನಿಯಾಗಿದ್ದ ತೆರೇಸಾ ಮೇ ಅವರು‍ಪದತ್ಯಾಗಕ್ಕೆ ಮಾಡುವ ಮೊದಲು ಇವರಿಬ್ಬರ ಹೆಸರನ್ನು ಆಯ್ಕೆ ಮಾಡಿದ್ದರು. ಕ್ರೀಡಾ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಅವರಿಗೆ ಈ ಗೌರವ ನೀಡಲಾಗುತ್ತಿದೆ.

ಸ್ಟ್ರಾಸ್‌ ನಾಯಕರಾಗಿದ್ದಾಗ ಇಂಗ್ಲೆಂಡ್‌ ತಂಡ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿತ್ತು. ಆಸ್ಟ್ರೇಲಿಯಾದಲ್ಲಿ ನಡೆದ ಆ್ಯಷಸ್‌ ಸರಣಿಯನ್ನು ಇಂಗ್ಲೆಂಡ್‌ ತಂಡ ದೀರ್ಘ ಕಾಲದ ನಂತರ 2011–12ರಲ್ಲಿ ಅವರ ನಾಯಕತ್ವದಲ್ಲಿ ಜಯಿಸಿತ್ತು. ಪುರುಷರ ತಂಡದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರ ತಂತ್ರಗಳನ್ನು ಯೋಜಿಸಿದ್ದರ ಪರಿ ಣಾಮ ಇಂಗ್ಲೆಂಡ್‌ ಮೊದಲ ಬಾರಿ– ಎರಡು ತಿಂಗಳ ಹಿಂದೆ– ವಿಶ್ವಕಪ್‌ ಗೆದ್ದುಕೊಂಡಿತ್ತು.

ಮಿಡ್ಲ್‌ಸೆಕ್ಸ್‌ ಕೌಂಟಿಯ ಸ್ಟ್ರಾಸ್‌ ಇಂಗ್ಲೆಂಡ್‌ ಪರ 2004 ರಿಂದ 2012ರ ಅವಧಿಯಲ್ಲಿ 100 ಟೆಸ್ಟ್‌ಗಳಲ್ಲಿ ಆಡಿದ್ದು, ‌7,037 ರನ್‌ ಗಳಿಸಿದ್ದಾರೆ. ಸ್ಟ್ರಾಸ್‌ ಅವರ ಮೂಲ ದಕ್ಷಿಣ ಆಫ್ರಿಕ.

ಕಳೆದ ವರ್ಷದ ಕೊನೆಯಲ್ಲಿ ಸ್ಟ್ರಾಸ್‌ ಅವರ ಮಡದಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. 42 ವರ್ಷದ ಸ್ಟ್ರಾಸ್‌, ಪತ್ನಿಯ ನೆನಪಿನಲ್ಲಿ ರುತ್‌ ಸ್ಟ್ರಾಸ್‌ ಫೌಂಡೇಷನ್‌ ಆರಂಭಿಸಿದ್ದರು. ಶ್ವಾಸಕೋಶದ ವಿರಳ ಕ್ಯಾನ್ಸರ್‌ ವಿರುದ್ಧ ಹೋರಾಟಕ್ಕೆ ಅಪಾರ ಪ್ರಮಾಣದ ಹಣ ಸಂಗ್ರಹಿಸಿವೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಬಾಯ್ಕಾಟ್ ಅವರೂ ತೆರೇಸಾ ಮೇ ಅವರು ಮೆಚ್ಚುವ ಕ್ರೀಡಾ ತಾರೆಗಳಲ್ಲಿ ಒಬ್ಬರು. ಬ್ರೆಕ್ಸಿಟ್‌ ಮಾತುಕತೆಯ ವೇಳೆ ತಮ್ಮ ನಿಲುವನ್ನು ‘ರಕ್ಷಣಾತ್ಮಕವಾಗಿ’ ಸಮರ್ಥಿಸಿಕೊಳ್ಳುತ್ತ ಅವರು ಬಾಯ್ಕಾಟ್‌ ಹೆಸರನ್ನು ಪ್ರಸ್ತಾಪಿಸಿದ್ದರು. 78 ವರ್ಷದ ಬಾಯ್ಕಾಟ್‌ 1964 ರಿಂದ 1982ರ ಅವಧಿಯಲ್ಲಿ 108 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು. 47.22 ಸರಾಸರಿಯಲ್ಲಿ 8,114 ರನ್‌ ಬಾರಿಸಿದ್ದಾರೆ.

‘ನೈಟ್‌ಹುಡ್‌ ಪದವಿ ಪಡೆಯಬೇಕಾದರೆ ತಾವು ಕಪ್ಪು ಬಣ್ಣ ಬಳಿದುಕೊಳ್ಳಬೇಕಾಗುತ್ತದೆ’ ಎಂದು ಬಾಯ್ಕಾಟ್‌ 2017ರಲ್ಲಿ ತಮಾಷೆಯಾಗಿ ಹೇಳಿದ್ದರು. ಈ ಹಿಂದೆ, ಈ ಪದವಿ ಪಡೆದಿದ್ದ ವೆಸ್ಟ್‌ ಇಂಡೀಸ್‌ ಕ್ರಿಕೆಟಿಗರಾದ ವಿವ್‌ ರಿಚರ್ಡ್ಸ್‌, ಗ್ಯಾರಿ ಸೋಬರ್ಸ್‌ ಮತ್ತು ಕರ್ಟ್ಲಿ ಆ್ಯಂಬ್ರೋಸ್‌ ಅವರನ್ನು ಗಮನದಲ್ಲಿಟ್ಟು ಈ ಮಾತು ಹೇಳಿದ್ದರು. ಆದರೆ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಬಾಯ್ಕಾಟ್‌ ಕ್ಷಮೆ ಯಾಚಿಸಬೇಕಾಯಿತು.

ಫ್ರಾನ್ಸ್‌ನಲ್ಲಿದ್ದ ಸಂದರ್ಭದಲ್ಲಿ ಸ್ನೇಹಿತೆ ಮಾರ್ಗರೇಟ್‌ ಮೂರ್‌ ಅವರ ಮೇಲೆ ಹಲ್ಲೆ ನಡೆಸಿದ್ದು ಸಾಬೀತಾದ ಕಾರಣ 1998ರಲ್ಲಿ ಅವರಿಗೆ ದಂಡ ಮೂರು ತಿಂಗಳ ಜೈಲು ಶಿಕ್ಷೆ (ಷರತ್ತುಬದ್ಧ) ವಿಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT