ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ವಿಶ್ವಕಪ್: ಇಂಗ್ಲೆಂಡ್‌ಗೆ ರೋಚಕ ಜಯ, ಸೆಮಿ ಆಸೆ ಜೀವಂತ

ಆತಿಥೇಯ ನ್ಯೂಜಿಲೆಂಡ್‌ಗೆ ನಿರಾಶೆ
Last Updated 20 ಮಾರ್ಚ್ 2022, 19:53 IST
ಅಕ್ಷರ ಗಾತ್ರ

ಆಕ್ಲೆಂಡ್: ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಮಹಿಳಾ ವಿಶ್ವಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ನ್ಯೂಜಿಲೆಂಡ್ ಎದುರು ರೋಚಕ ಜಯ ಸಾಧಿಸಿತು. ಇದರೊಂದಿಗೆ ಸೆಮಿಫೈನಲ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.

ಈಡನ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ನಥಾಲಿ ಶೀವರ್ ಅರ್ಧಶತಕ ಮತ್ತು ವೇಗಿ ಕೇಟ್ ಕ್ರಾಸ್ ಅವರ ಚುರುಕಾದ ದಾಳಿಯ ನೆರವಿನಿಂದ ಇಂಗ್ಲೆಂಡ್ ತಂಡವು 1 ವಿಕೆಟ್‌ನಿಂದ ಕಿವೀಸ್ ಬಳಗದ ವಿರುದ್ಧ ಗೆದ್ದಿತು.

ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆತಿಥೇಯ ನ್ಯೂಜಿಲೆಂಡ್ 48.5 ಓವರ್‌ಗಳಲ್ಲಿ 203 ರನ್‌ಗಳಿಗೆ ಆಲೌಟ್ ಆಯಿತು. ಕೇಟ್ ಕ್ರಾಸ್ ಮತ್ತು ಸೋಫಿ ಎಕ್ಸೆಲ್ಸೆಟನ್ ತಲಾ ಮೂರು ವಿಕೆಟ್ ಗಳಿಸಿ ಕಿವೀಸ್ ಬ್ಯಾಟಿಂಗ್‌ ಪಡೆಗೆ ಕಡಿವಾಣ ಹಾಕಿದರು. ಆದರೂ ಮಧ್ಯಮಕ್ರಮಾಂಕದ ಬ್ಯಾಟರ್ ಮ್ಯಾಡಿ ಗ್ರೀನ್ (52; 75ಎ) ಅಜೇಯ ಅರ್ಧಶತಕ ಗಳಿಸಿದರು. ನಾಯಕಿ ಸೋಫಿ ಡಿವೈನ್ 48 ಎಸೆತಗಳಲ್ಲಿ 41 ರನ್ ಗಳಿಸಿದರು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳೇ ಗೆಲುವಿನ ರೂವಾರಿಗಳಾದರು. ನಾಯಕಿ ಹೀಥರ್ ನೈಟ್ (42 ರನ್) ಮತ್ತು ನಥಾಲಿಯಾ ಶೀವರ್ (61 ರನ್) ಹಾಗೂ ಸೋಫಿಯಾ ಡಂಕ್ಲಿ (33) ಮಹತ್ವದ ಕಾಣಿಕೆ ನೀಡಿದರು. ಆದರೆ ನ್ಯೂಜಿಲೆಂಡ್ ಬೌಲರ್ ಫ್ರಾನ್ಸಿಸ್ ಮೆಕೆ (34ಕ್ಕೆ4) ಅವರ ಪರಿಣಾಮಕಾರಿ ದಾಳಿಯಿಂದಾಗಿ ಇಂಗ್ಲೆಂಡ್ ತಂಡವು ಸೋಲಿನ ಆತಂಕ ಎದುರಿಸಿತು.

ಕೊನೆಯ ಕ್ರಮಾಂಕದ ಬ್ಯಾಟರ್ ಅನ್ಯಾ ಶ್ರಭ್‌ಸೋಲ್ (ಅಜೇಯ 7) ದಿಟ್ಟತನ ತೋರಿದ್ದರಿಂದ ಇಂಗ್ಲೆಂಡ್‌ಗೆ ಜಯ ಸಾಧ್ಯವಾಯಿತು.ಇಂಗ್ಲೆಂಡ್ ಇದುವರೆಗೆ ಐದು ಪಂದ್ಯಗಳನ್ನು ಆಡಿದೆ. ಎರಡರಲ್ಲಿ ಗೆದ್ದು, ಮೂರರಲ್ಲಿ ಸೋತಿತು. ಅಂಕಪಟ್ಟಿಯಲ್ಲ ಐದನೇ ಸ್ಥಾನದಲ್ಲಿದೆ. ಇನ್ನುಳಿದಿರುವ ಎರಡೂ ಪಂದ್ಯಗಳಲ್ಲಿ ಗೆದ್ದರೆ ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆ ಹೆಚ್ಚಲಿವೆ.

ಕಿವೀಸ್ ಬಳಗಕ್ಕೆ ಸೆಮಿ ಹಾದಿ ಬಹುತೇಕ ಮುಚ್ಚಿದಂತಾಗಿದೆ. ಆರು ಪಂದ್ಯಗಳಲ್ಲಿ ನಾಲ್ಕು ಸೋತು, ಎರಡರಲ್ಲಿ ಜಯಿಸಿದೆ.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 48.5 ಓವರ್‌ಗಳಲ್ಲಿ 203 (ಸೂಝಿ ಬೇಟ್ಸ್‌ 22, ಸೋಫಿ ಡಿವೈನ್ 41, ಅಮೆಲಿಯಾ ಕೇರ್ 24, ಮ್ಯಾಡಿ ಗ್ರೀನ್ ಔಟಾಗದೆ 52, ಕೇಟ್ ಕ್ರಾಸ್ 35ಕ್ಕೆ3, ಚಾರ್ಲೆಟ್ ಡೀನ್ 36ಕ್ಕೆ2, ಸೋಫಿ ಎಕ್ಸೆಲ್ಸೆಟನ್ 41ಕ್ಕೆ3) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 1 ವಿಕೆಟ್ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT