ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ ಸರಣಿ: ಜೋ ರೂಟ್ ‘ಶತಕ‘ದ ಹ್ಯಾಟ್ರಿಕ್

ಬೃಹತ್‌ ಮೊತ್ತದತ್ತ ಇಂಗ್ಲೆಂಡ್; ಮೂವರು ಬ್ಯಾಟ್ಸ್‌ಮನ್‌ಗಳ ಅರ್ಥಶತಕ
Last Updated 26 ಆಗಸ್ಟ್ 2021, 16:53 IST
ಅಕ್ಷರ ಗಾತ್ರ

ಲೀಡ್ಸ್‌ (ಪಿಟಿಐ): ಭಾರತದ ಎದುರಿನ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಶತಕದ ‘ಹ್ಯಾಟ್ರಿಕ್‌’ ಸಾಧನೆ ಮಾಡಿದರು.

ನಾಯಕನ ಆಟ ಮತ್ತು ಉಳಿದ ಮೂವರು ಬ್ಯಾಟ್ಸ್‌ಮನ್‌ಗಳ ಅರ್ಧಶತಕಗಳ ಆಟಕ್ಕೆ ಇಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಭಾರತ ತಂಡವು ಬಸವಳಿಯಿತು. 107 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 349 ರನ್‌ ಗಳಿಸಿರುವ ಇಂಗ್ಲೆಂಡ್ 271 ರನ್‌ಗಳ ಮುನ್ನಡೆ ಸಾಧಿಸಿತು. ರೂಟ್ (103; 132ಎಸೆತ) ಮತ್ತು ಜಾನಿ ಬೆಸ್ಟೊ (29; 42ಎ) ಕ್ರೀಸ್‌ನಲ್ಲಿದ್ದಾರೆ.

ಬುಧವಾರ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ವಿರಾಟ್ ಕೊಹ್ಲಿ ಬಳಗವು 78 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ್ದ ಆತಿಥೇಯ ತಂಡವು ದಿನದಾಟದ ಕೊನೆಗೆ ವಿಕೆಟ್ ನಷ್ಟವಿಲ್ಲದೇ 120 ರನ್‌ ಗಳಿಸಿತ್ತು.

ಗುರುವಾರ ಆಟ ಮುಂದುವರಿಸಿದ ಆರಂಭಿಕ ಜೋಡಿಯು ಭಾರತದ ಬೌಲರ್‌ಗಳನ್ನು ಕಾಡಿದರು. ಅರ್ಧಶತಕ ಗಳಿಸಿದ್ದ ರೋರಿ ಬರ್ನ್ಸ್‌ (61 ರನ್) ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿದ ಮೊಹಮ್ಮದ್ ಶಮಿ ಜೊತೆಯಾಟವನ್ನು ಮುರಿದರು. ರೊರಿ ಮತ್ತು ಹಸೀಬ್ ಹಮೀದ್ ಮೊದಲ ವಿಕೆಟ್‌ ಜೊತೆಯಾಟದಲ್ಲಿ 135 ರನ್ ಸೇರಿಸಿದರು. 63ನೇ ಓವರ್‌ನಲ್ಲಿ ಹಮೀದ್ (68 ರನ್) ವಿಕೆಟ್ ಗಳಿಸುವಲ್ಲಿ ರವೀಂದ್ರ ಜಡೇಜ ಯಶಸ್ವಿಯಾದರು.

ಆದರೆ, ಕ್ರೀಸ್‌ನಲ್ಲಿದ್ದ ಡೇವಿಡ್ ಮಲಾನ್ ಜೊತೆ ಸೇರಿದ ರೂಟ್ ಭಾರತದ ಬೌಲರ್‌ಗಳಿಗೆ ಮತ್ತೊಮ್ಮೆ ಕಬ್ಬಿಣದ ಕಡಲೆಯಾದರು. ಮಲಾನ್ ತಮ್ಮ ಆಕ್ರಮಣಕಾರಿ ಶೈಲಿಗೆ ತುಸು ಕಡಿವಾಣ ಹಾಕಿ ಬ್ಯಾಟಿಂಗ್ ಮಾಡಿದರು. 11 ಬೌಂಡರಿಗಳನ್ನು ಹೊಡೆದರು.

ನಾಯಕ ರೂಟ್ ಕೂಡ ಬೌಲರ್‌ಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದರು. ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿಯೂ ರೂಟ್ ಶತಕ ಗಳಿಸಿದ್ದರು. ಇಲ್ಲಿಯೂ ಪಟಪಟನೇ ರನ್‌ ಗಳಿಸಿದರು.132 ಎಸೆತಗಳಲ್ಲಿ ಶತಕ ಪೂರೈಸಿದರು. ಮಲಾನ್ ಜೊತೆಗೆ ಮೂರನೇ ವಿಕೆಟ್‌ಗೆ 139 ರನ್‌ಗಳನ್ನೂ ಪೇರಿಸಿದರು.

ಸಿರಾಜ್ ಎಸೆತದಲ್ಲಿ ಮಲಾನ್ ಔಟಾದ ನಂತರವೂ ರೂಟ್ ಆಟ ಮುಂದುವರಿಯಿತು. ಜಾನಿ ಬೆಸ್ಟೊ ಜೊತೆಗೆ 51 ರನ್‌ಗಳ ಜೊತೆಯಾಟವಾಡಿದರು.

ಎರಡನೇ ಇನಿಂಗ್ಸ್‌ನಲ್ಲಿ ಭಾರತಕ್ಕೆ ಬೃಹತ್ ಮೊತ್ತದ ಸವಾಲೊಡ್ಡಲು ಇಂಗ್ಲೆಂಡ್ ವೇದಿಕೆ ಸಿದ್ಧಗೊಳಿಸಿಕೊಂಡಿದೆ. ಮೊದಲ ಇನಿಂಗ್ಸ್‌ನ ಬ್ಯಾಟಿಂಗ್ ವೈಫಲ್ಯವು ವಿರಾಟ್ ಬಳಗಕ್ಕೆ ಆತಂಕ ತಂದೊಡ್ಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT