ಟೀಕೆಗಳ ಸರಪಣಿ ಕಳಚುವ ಸವಾಲು

7
ಕ್ರಿಕೆಟ್: ಭಾರತ–ಇಂಗ್ಲೆಂಡ್ ಮೂರನೇ ಟೆಸ್ಟ್ ಇಂದಿನಿಂದ

ಟೀಕೆಗಳ ಸರಪಣಿ ಕಳಚುವ ಸವಾಲು

Published:
Updated:
Deccan Herald

ನಾಟಿಂಗಂ: ವಿರಾಟ್ ಕೊಹ್ಲಿ ಬಳಗವು ತಾವು ಕಾಫಿ ಕುಡಿಯಲು ಇಂಗ್ಲೆಂಡ್‌ಗೆ ಹೋಗಿಲ್ಲ ಎಂದು ಸಾಬೀತು ಮಾಡಲು ಶನಿವಾರ  ಆರಂಭವಾಗಲಿರುವ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಜಯ ಸಾಧಿಸಲೇಬೇಕಿದೆ.

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿ ರುವ ಭಾರತ ತಂಡ ಬಹಳಷ್ಟು ಟೀಕೆಗಳಿಗೆ ಗುರಿಯಾಗಿದೆ. ಬಿಸಿಸಿಐ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ಸಂದೀಪ್ ಪಾಟೀಲ ಅವರು, ‘ವಿರಾಟ್ ಬಳಗವು ಇಂಗ್ಲೆಂಡ್‌ಗೆ ಕಾಫಿ ಕುಡಿಯಲು ತೆರಳಿರಬಹುದು’ ಎಂದು ಕುಟುಕಿದ್ದರು. ‘ಸೋತಿದ್ದೇವೆಂದು ಕೈಬಿಡಬೇಡಿ, ನಮ್ಮನ್ನು ಬೆಂಬಲಿಸಿ ಜಯದ ಲಯಕ್ಕೆ ಮರಳುತ್ತೇವೆ’ ಎಂದು ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.  ಆ ಮಾತನ್ನು ಉಳಿಸಿಕೊಳ್ಳುವ ಸವಾಲು ಅವರ ಮುಂದಿದೆ.

ಆದರೆ, ಆತ್ಮವಿಶ್ವಾಸದ ಉತ್ತುಂಗ ದಲ್ಲಿರುವ ಆತಿಥೇಯ ತಂಡವನ್ನು ಮಣಿಸುವುದು ಸುಲಭವಲ್ಲ. ಇದೊಂದು ಪಂದ್ಯ ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳುವತ್ತ ಜೋ ರೂಟ್ ನಾಯಕತ್ವದ ಇಂಗ್ಲೆಂಡ್ ಚಿತ್ತ ನೆಟ್ಟಿದೆ. ಹೊಡೆದಾಟದ ಪ್ರಕರಣವೊಂದ
ರಲ್ಲಿ ವಿಚಾರಣೆ ಎದುರಿಸಿರುವ  ಆಲ್‌ ರೌಂಡರ್‌ ಬೆನ್‌  ಸ್ಟೋಕ್ಸ್‌ಗೆ ಈ ಪಂದ್ಯದಲ್ಲಿ ಸ್ಥಾನ ಸಿಕ್ಕಿಲ್ಲ. ಅವರ ಬದಲಿಗೆ ಸ್ಯಾಮ್ ಕರನ್ ಅವಕಾಶ ಪಡೆಯುವುದು ಬಹುತೇಕ ಖಚಿತ.

ಎರಡನೇ ಪಂದ್ಯದಲ್ಲಿ ಸ್ಟುವರ್ಟ್‌ ಬ್ರಾಡ್ ಮತ್ತು ಜೇಮ್ಸ್‌ ಆ್ಯಂಡರ್ಸನ್ ಅವರು ಭಾರತದ ಬ್ಯಾಟಿಂಗ್ ಬಲವನ್ನು ದೂಳೀಪಟ ಮಾಡಿದ್ದರು. ವಿರಾಟ್ ಬಳಗವು ಮೊದಲ ಇನಿಂಗ್ಸ್‌ನಲ್ಲಿ 107 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 130 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್, ಮುರಳಿ ವಿಜಯ್ ಮತ್ತು ಕೆ.ಎಲ್. ರಾಹುಲ್ ಎರಡೂ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದರು. ಈ ಪಂದ್ಯದಲ್ಲಿ ಇನಿಂಗ್ಸ್‌  ಆರಂಭಿಸಲು ಆಡಳಿತ ಮಂಡಳಿಯು ಯಾರಿಗೆ ಹೊಣೆ ನೀಡಲಿದೆ ಕಾದು ನೋಡಬೇಕು.

ಮಧ್ಯಮ ಕ್ರಮಾಂಕದಲ್ಲಿಯೂ ಸಮಸ್ಯೆ ಇದೆ. ಹೋದ ಪಂದ್ಯದಲ್ಲಿ ಟೆಸ್ಟ್‌ ಪರಿಣತ ಚೇತೇಶ್ವರ್ ಪೂಜಾರ ಕೂಡ ವೈಫಲ್ಯ ಅನುಭವಿಸಿದ್ದರು. ಅಜಿಂಕ್ಯ ರಹಾನೆ ಬ್ಯಾಟ್‌ನಿಂದಲೂ ರನ್‌ಗಳು ಹರಿಯುತ್ತಿಲ್ಲ.

ಕೆಳಕ್ರಮಾಂಕದಲ್ಲಿ ಅಶ್ವಿನ್ ಮಾತ್ರ ಹೋರಾಟದ ಮನೋಭಾವ ತೋರಿದ್ದರು.   ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ ಕೂಡ ಹಿನ್ನಡೆ ಅನುಭವಿಸಿದ್ದರು. ಬೆನ್ನುನೋವಿನಿಂದ ಚೇತರಿಸಿಕೊಂಡಿರುವ ಅವರು ಕಣಕ್ಕಿಳಿಯುವ ನಿರೀಕ್ಷೆ ಇದೆ. ವಿಕೆಟ್‌ ಕೀಪರ್–ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಸ್ಥಾನ ಕಳೆದುಕೊಳ್ಳಬಹುದು. ಇದರಿಂದಾಗಿ ದೆಹಲಿ ಹುಡುಗ ರಿಷಭ್ ಪಂತ್ ಟೆಸ್ಟ್‌ ಪದಾರ್ಪಣೆ ಮಾಡಬಹುದು.

ಬೌಲಿಂಗ್ ವಿಭಾಗದಲ್ಲಿಯೂ ಕೆಲವು ಬದಲಾವಣೆಗಳಾಗುವ ಸಾಧ್ಯತೆ ಇದೆ. ನಾಲ್ವರು ವೇಗಿಗಳನ್ನು ಕಣಕ್ಕಿಳಿಸಬಹುದು. ಮೊಹಮ್ಮದ್ ಶಮಿ ಬದಲಿಗೆ ಜಸ್‌ಪ್ರೀತ್ ಬೂಮ್ರಾ, ಉಮೇಶ್ ಯಾದವ್, ಹಾರ್ದಿಕ್, ಇಶಾಂತ್ ಶರ್ಮಾ ಆಡಬಹುದು. ವೇಗಿಗಳಿಗೆ ಹೆಚ್ಚು ನೆರವು ನೀಡುವ ಪಿಚ್‌ನಲ್ಲಿ ಇವರ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ.

ತಂಡಗಳು ಇಂತಿವೆ
ಭಾರತ:
ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಕೆ.ಎಲ್. ರಾಹುಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್), ರಿಷಭ್ ಪಂತ್ (ವಿಕೆಟ್‌ಕೀಪರ್), ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಕುಲದೀಪ್ ಯಾದವ್. ರವಿಶಾಸ್ತ್ರಿ (ಮುಖ್ಯ ಕೋಚ್).

ಇಂಗ್ಲೆಂಡ್: ಜೋ ರೂಟ್ (ನಾಯಕ), ಅಲಸ್ಟೇರ್ ಕುಕ್. ಕೀಟನ್ ಜೆನ್ನಿಂಗ್ಸ್, ಒಲೀ ಪೋಪ್, ಜಾನಿ ಬೆಸ್ಟೋ (ವಿಕೆಟ್‌ ಕೀಪರ್), ಬೆನ್ ಸ್ಟೋಕ್ಸ್‌, ಜೋಸ್ ಬಟ್ಲರ್, ಕ್ರಿಸ್ ವೋಕ್ಸ್‌, ಆದಿಲ್ ರಶೀದ್, ಸ್ಟುವರ್ಟ್ ಬ್ರಾಡ್, ಜೇಮ್ಸ್‌ ಆ್ಯಂಡರ್ಸನ್, ಸ್ಯಾಮ್ ಕರನ್.
ಪಂದ್ಯದ ಆರಂಭ: ಮಧ್ಯಾಹ್ನ 3.30; ನೇರಪ್ರಸಾರ: ಸೋನಿ ನೆಟ್‌ವರ್ಕ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !