ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಕೆಮರ್ ರೋಚ್‌ ದಾಳಿಗೆ ಕುಸಿದ ಇಂಗ್ಲೆಂಡ್

ಮ್ಯಾಂಚೆಸ್ಟರ್‌ನಲ್ಲಿ ಆರಂಭವಾದ ಮೂರನೇ ಟೆಸ್ಟ್
Last Updated 24 ಜುಲೈ 2020, 16:33 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್: ವೇಗಿ ಕೆಮರ್ ರೋಚ್ ಬಿರುಗಾಳಿ ದಾಳಿಯ ಎದುರು ಆತಿಥೇಯ ಇಂಗ್ಲೆಂಡ್ ತಂಡವು ವೆಸ್ಟ್ ಇಂಡೀಸ್ ಎದುರಿನ ಮೂರನೇ ಟೆಸ್ಟ್‌ನ ಆರಂಭದಲ್ಲಿಯೇ ಆಘಾತ ಅನುಭವಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ತಂಡದ ಬೌಲರ್‌ಗಳು ಮಿಂಚಿದರು. ಆತಿಥೆಯ ತಂಡವು ನೂರು ರನ್‌ಗಳ ಗಡಿ ದಾಟುವುದರೊಳಗೆ ಪ್ರಮುಖ ಮೂವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದರು.

ರೋಚ್ (44ಕ್ಕೆ2) ಡಾಮ್ ಸಿಬ್ಲಿ ಮತ್ತು ಬೆನ್ ಸ್ಟೋಕ್ಸ್‌ ಅವರ ವಿಕೆಟ್‌ಗಳನ್ನು ಗಳಿಸಿದ್ದು ಇಂಗ್ಲೆಂಡ್‌ಗೆ ದೊಡ್ಡ ಪೆಟ್ಟಾಯಿತು. ಇವರಿಬ್ಬರೂ ಹೋದ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದರು. ಆದರೆ, ಆರಂಭಿಕ ಬ್ಯಾಟ್ಸ್‌ಮನ್ ರೋರಿ ಬರ್ನ್ಸ್‌ (57; 147ಎ) ಮತ್ತು ಓಲಿ ಪೋಪ್ (ಬ್ಯಾಟಿಂಗ್‌ 51) ಅವರಿಬ್ಬರ ತಾಳ್ಮೆಯ ಅರ್ಧಶತಕಗಳಿಂದಾಗಿ ಇಂಗ್ಲೆಂಡ್ ತಂಡವು 63 ಓವರ್‌ಗಳಲ್ಲಿ 4ವಿಕೆಟ್‌ಗಳಿಗೆ 173 ರನ್‌ ಗಳಿಸಿತು.

ಇನಿಂಗ್ಸ್‌ನ ಮೊದಲ ಓವರ್‌ನಲ್ಲಿಯೇ ಸಿಬ್ಲಿ ಎಡವಿದರು. ರೋಚ್ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಖಾತೆ ತೆರೆಯದೇ ಮರಳಿದರು. ಆಗ ರೋರಿ ಜೊತೆಗೂಡಿದ ನಾಯಕ ಜೋ ರೂಟ್ (17; 59ಎ) ನಿಧಾನವಾಗಿ ಇನಿಂಗ್ಸ್‌ ಕಟ್ಟುವ ಪ್ರಯತ್ನ ಮಾಡಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 47 ರನ್‌ಗಳು ಸೇರಿದ್ದಾಗ ರಾಸ್ಟನ್ ಚೇಸ್ ತಮ್ಮ ಮಿಂಚಿನ ವೇಗದ ಫೀಲ್ಡಿಂಗ್ ಮೂಲಕ ಮುರಿದರು. ಅವರ ನಿಖರ ಥ್ರೋದಿಂದಾಗಿ ಜೋ ರೂಟ್ ಆಟಕ್ಕೆ ತೆರೆಬಿತ್ತು.

ಕ್ರೀಸ್‌ಗೆ ಬೆನ್ ಸ್ಟೋಕ್ಸ್‌ ತಮ್ಮ ಲಯಕ್ಕೆ ತಕ್ಕಂತೆ ಆಟಕ್ಕೆ ಕುದುರಿಕೊಂಡರು. ಇನ್ನೊಂದೆಡೆ ರೋರಿ ತಾಳ್ಮೆಯಿಂದ ಬ್ಯಾಟ್‌ ಬೀಸುತ್ತಿದ್ದರು. ಊಟದ ವಿರಾಮದವರೆಗೆ ಇವರಿಬ್ಬರ ಜೊತೆಯಾಟ ಸಾಗಿತು. ಮೂರನೇ ವಿಕೆಟ್‌ಗೆ 45 ರನ್‌ ಸೇರಿಸಿದ್ದ ಈ ಜೋಡಿಯನ್ನು ರೋಚ್ ಬೇರ್ಪಡಿಸಿದರು. ಏಕಾಗ್ರತೆ ಕಳೆದುಕೊಂಡ ಸ್ಟೋಕ್ಸ್‌ ಕ್ಲೀನ್‌ಬೌಲ್ಡ್ ಆದರು.

ಇದಾಗಿ 12 ಓವರ್‌ಗಳ ನಂತರ ರೋರಿ ತಪ್ಪು ಹೊಡೆತ ಪ್ರಯೋಗಿಸಿ ರಾಸ್ಟನ್ ಚೇಸ್‌ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ಪೋಪ್ ಮತ್ತು ಜೋಸ್ ಬಟ್ಲರ್ ಇನಿಂಗ್ಸ್‌ಗೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಅದರಿಂದಾಗಿ ತಂಡದ ಮೊತ್ತವು 200ರತ್ತ ಸಾಗಿತು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 63 ಓವರ್‌ಗಳಲ್ಲಿ 4ಕ್ಕೆ173 (ರೋರಿ ಬರ್ನ್ಸ್ 57, ಜೋ ರೂಟ್ 17, ಬೆನ್ ಸ್ಟೋಕ್ಸ್20, ಓಲಿ ಪೋಪ್ ಬ್ಯಾಟಿಂಗ್ 51, ಜೋಸ್ ಬಟ್ಲರ್ ಬ್ಯಾಟಿಂಗ್ 12, ಕೆಮರ್ ರೋಚ್ 44ಕ್ಕೆ2, ರಾಸ್ಟನ್ ಚೇಸ್ 1 ಕ್ಕೆ 1) ವಿವರ ಅಪೂರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT