ಕೊಹ್ಲಿ ಬಳಗದ ಅದೇ ರಾಗ, ಅದೇ ಹಾಡು

7
ಎರಡನೇ ಟೆಸ್ಟ್ ಕ್ರಿಕೆಟ್‌: ಆ್ಯಂಡರ್ಸನ್‌, ಬ್ರಾಡ್ ದಾಳಿಗೆ ಕಡಿಮೆ ಮೊತ್ತಕ್ಕೆ ಕುಸಿದ ಭಾರತ ತಂಡ

ಕೊಹ್ಲಿ ಬಳಗದ ಅದೇ ರಾಗ, ಅದೇ ಹಾಡು

Published:
Updated:

ಲಂಡನ್: ಇಂಗ್ಲೆಂಡ್‌ ನೆಲದಲ್ಲಿ ಭಾರತದ ಕ್ರಿಕೆಟಿಗರಿಗೆ ಉತ್ತಮವಾಗಿ ಆಡಲು ಬರುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಭಾನು ವಾರ ಲಾರ್ಡ್ಸ್‌ನಲ್ಲಿ ಮುಕ್ತಾಯ ವಾದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಹೋರಾಟವನ್ನೇ ತೋರದ ಭಾರತ ತಂಡವು ಇಂಗ್ಲೆಂಡ್‌ಗೆ ಶರಣಾಯಿತು.

ಇಂಗ್ಲೆಂಡ್ ತಂಡದ ವೇಗಿಗಳಾದ ಜೇಮ್ಸ್‌ ಆ್ಯಂಡರ್ಸನ್‌ (23ಕ್ಕೆ4) ಮತ್ತು ಸ್ಟುವರ್ಟ್‌ ಬ್ರಾಡ್ (44ಕ್ಕೆ4) ಅವರ ದಾಳಿಯ ಮುಂದೆ ವಿರಾಟ್ ಕೊಹ್ಲಿ ನಾಯಕತ್ವದ ಬಳಗವು ಒಂದು ಇನಿಂಗ್ಸ್‌ ಮತ್ತು 156 ರನ್‌ಗಳ ಅಂತರದಿಂದ ಹೀನಾಯವಾಗಿ ಸೋತಿತು.

ಭಾರತವು ಮೊದಲ ಇನಿಂಗ್ಸ್‌ನಲ್ಲಿ 107 ರನ್‌ಗೆ ಆಲೌಟ್‌ ಆಗಿತ್ತು. ಅದಕ್ಕುತ್ತರವಾಗಿ ಇಂಗ್ಲೆಂಡ್ ತಂಡವು ಏಳು ವಿಕೆಟ್‌ಗಳ ನಷ್ಟಕ್ಕೆ 396 ರನ್‌ ಗಳಿಸಿತು.

ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಡಿಕ್ಲೇರ್ ಮಾಡಿಕೊಂಡಿತು. ಆದರೆ, ಭಾರತದ ಬ್ಯಾಟ್ಸ್‌ಮನ್‌ಗಳಿಂದ ಆತ್ಮವಿಶ್ವಾಸದ ಆಟ ಮೂಡಿಬರಲಿಲ್ಲ. ಜೇಮ್ಸ್‌ ಮತ್ತು ಬ್ರಾಡ್ ಎಸೆತಗಳಿಗೆ ದಿಟ್ಟ ಉತ್ತರ ನೀಡುವಲ್ಲಿ ಯಶಸ್ವಿಯಾಗ ಲಿಲ್ಲ.  ಇದರಿಂದಾಗಿ ತಂಡವು 47 ಓವರ್‌ಗಳಲ್ಲಿ 130 ರನ್‌ ಗಳಿಸಿ ಆಲೌಟ್ ಆಯಿತು.

ಇನಿಂಗ್ಸ್‌ನ ಮೂರನೇ ಓವರ್‌ ಬೌಲಿಂಗ್ ಮಾಡಿದ ಜೇಮ್ಸ್‌ ಆ್ಯಂಡರ್ಸನ್ ಎಸೆತವನ್ನು ಆಡಲು ಯತ್ನಿಸಿದ ಮುರಳಿ ವಿಜಯ್ ಅವರು ವಿಕೆಟ್‌ಕೀಪರ್ ಜಾನಿ ಬೆಸ್ಟೊಗೆ ಕ್ಯಾಚಿತ್ತರು. ಇದರೊಂದಿಗೆ ಲಾರ್ಡ್ಸ್‌ ಅಂಗಳದಲ್ಲಿ ನೂರು ವಿಕೆಟ್‌ ಪಡೆದ ಮೊಟ್ಟಮೊದಲ ವೇಗದ ಬೌಲರ್‌ ಎಂಬ ಸಾಧನೆಯನ್ನು ಆ್ಯಂಡರ್ಸನ್ ಮಾಡಿದರು. ಏಳನೇ ಓವರ್‌ನಲ್ಲಿಯೂ ಜೇಮ್ಸ್‌ ಮತ್ತೊಂದು ಆಘಾತ ನೀಡಿದರು. ಕೆ.ಎಲ್. ರಾಹುಲ್ (10: 16ಎಸೆತ, 2ಬೌಂಡರಿ) ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು.

ಇನ್ನೊಂದು ಕಡೆಯಿಂದ ಸ್ಟುವರ್ಟ್‌ ಬ್ರಾಡ್ ಕೂಡ ಬಿರುಗಾಳಿ ಎಬ್ಬಿಸಿದರು. ಎಚ್ಚರಿಕೆಯ ಆಟಕ್ಕೆ ಮೊರೆಹೋಗಿದ್ದ ಆಜಿಂಕ್ಯ ರಹಾನೆ (13; 33ಎ, 2ಬೌಂ)ಅವರನ್ನು 19ನೇ ಓವರ್‌ನಲ್ಲಿ ಬ್ರಾಡ್ ಪೆವಿಲಿಯನ್‌ಗೆ ಕಳಿಸಿದರು.

ಆದರೆ 87 ಎಸೆತಗಳನ್ನು ಎದುರಿಸಿ 17 ರನ್‌ ಮಾತ್ರ ಹೊಡೆದಿದ್ದ ಪೂಜಾರ ಅವರು ಆಟಕ್ಕೆ ಕುದುರಿಕೊಳ್ಳುವ ಪ್ರಯತ್ನದಲ್ಲಿ ವಿಫಲರಾದರು.

ಅವರನ್ನೂ ಬ್ರಾಡ್ ಕ್ಲೀನ್ ಬೌಲ್ಡ್‌ ಮಾಡಿದರು. 31ನೇ ಓವರ್‌ನ ಮೂರನೇ ಎಸೆತದಲ್ಲಿ ವಿರಾಟ್ ಕೊಹ್ಲಿ (17 ರನ್) ಮತ್ತು ನಾಲ್ಕನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಅವರ ವಿಕೆಟ್ ಕಬಳಿಸಿದ ಬ್ರಾಡ್ ಕುಣಿದಾಡಿದರು.

ನಂತರ ಜೊತೆಗೂಡಿದ ಹಾರ್ದಿಕ್ ಪಾಂಡ್ಯ (26; 43ಎ, 5ಬೌಂ) ಮತ್ತು ಆರ್. ಅಶ್ವಿನ್ (ಔಟಾಗದೆ 33; 48ಎ, 5ಬೌಂ) ಸ್ವಲ್ಪ ಜಿಗುಟುತನ ತೋರಿದರು. ಏಳನೇ ವಿಕೆಟ್ ಜೊತೆಯಾಟದಲ್ಲಿ 55ರನ್‌ಗಳನ್ನು ಸೇರಿಸಿದರು.

ಈ ಜೊತೆ ಯಾಟವನ್ನು ಕ್ರಿಸ್ ವೋಕ್ಸ್‌ ಮುರಿದರು. ಅವರ ಎಸೆತದಲ್ಲಿ ಹಾರ್ದಿಕ್ ಎಲ್‌ಬಿಡಬ್ಲ್ಯೂ ಆದರು.

ನಂತರ ಮತ್ತೆ ದಾಳಿಗಿಳಿದ ಜೇಮ್ಸ್‌, ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಶಮಿ ಅವರ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿ ಕೊಂಡರು. ಕೊನೆಯ ಬ್ಯಾಟ್ಸ್‌ಮನ್ ಇಶಾಂತ್ ಶರ್ಮಾ ಅವರು ವೋಕ್ಸ್‌ ಎಸೆತದಲ್ಲಿ ಒಲೀ ಪೋಪ್‌ಗೆ ಕ್ಯಾಚಿತ್ತರು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ  ಇಂಗ್ಲೆಂಡ್ ತಂಡವು 2–0 ಮುನ್ನಡೆ ಸಾಧಿಸಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಭಾರತ: 107, ಇಂಗ್ಲೆಂಡ್:88.1 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 396 ಡಿಕ್ಲೇರ್ಡ್, ಎರಡನೇ ಇನಿಂಗ್ಸ್: ಭಾರತ: 47 ಓವರ್‌ಗಳಲ್ಲಿ 130 (ಕೆ.ಎಲ್. ರಾಹುಲ್ 10, ಚೇತೇಶ್ವರ್ ಪೂಜಾರ 17, ಅಜಿಂಕ್ಯ ರಹಾನೆ 13, ವಿರಾಟ್ ಕೊಹ್ಲಿ 17, ಹಾರ್ದಿಕ್ ಪಾಂಡ್ಯ 26,  ಆರ್. ಅಶ್ವಿನ್ ಔಟಾಗದೆ 33, ಜೇಮ್ಸ್‌ ಆ್ಯಂಡರ್ಸನ್ 23ಕ್ಕೆ4, ಸ್ಟುವರ್ಟ್‌ ಬ್ರಾಡ್ 44ಕ್ಕೆ4, ಕ್ರಿಸ್ ವೋಕ್ಸ್‌ 24ಕ್ಕೆ2) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ ಇನಿಂಗ್ಸ್ ಮತ್ತು 159 ರನ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !