ಗುರುವಾರ , ಫೆಬ್ರವರಿ 25, 2021
18 °C
ದೊಡ್ಡ ಅಂತರದ ಸೋಲು ಅನುಭವಿಸಿದ ನ್ಯೂಜಿಲೆಂಡ್

ವಿಶ್ವಕಪ್ ಕ್ರಿಕೆಟ್: ನಾಲ್ಕರ ಹಂತಕ್ಕೆ ಇಂಗ್ಲೆಂಡ್

ಪಿಟಿಐ Updated:

ಅಕ್ಷರ ಗಾತ್ರ : | |

ಚೆಸ್ಟರ್ ಲೀ ಸ್ಟ್ರೀಟ್: ಆತಿಥೇಯ ಇಂಗ್ಲೆಂಡ್ ತಂಡವು ಸೆಮಿಫೈನಲ್ ಪ್ರವೇಶಿಸಿತು. ಆದರೆ ಟೂರ್ನಿಯ ಆರಂಭದಿಂದಲೂ ಉತ್ತಮವಾಗಿ ಆಡುತ್ತ ಬಂದಿದ್ದ ನ್ಯೂಜಿಲೆಂಡ್ ತಂಡವು ಸಂಕಷ್ಟಕ್ಕೆ ಒಳಗಾಯಿತು. ಅತ್ತ ಪಾಕಿಸ್ತಾನ ತಂಡಕ್ಕೆ ತನ್ನ ಕೊನೆಯ ಪಂದ್ಯದಲ್ಲಿ ದೊಡ್ಡ ರನ್‌ ರೇಟ್ ನೊಂದಿಗೆ ಗೆದ್ದು ನಾಲ್ಕರ ಘಟ್ಟಕ್ಕೆ ಸಾಗುವ ಸಣ್ಣ ಅವಕಾಶವೊಂದು ಸೃಷ್ಟಿಯಾಯಿತು.

ಬುಧವಾರ ಟಾಸ್ ಗೆದ್ದು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್ ತಂಡಕ್ಕೆ  ಜಾನಿ ಬೆಸ್ಟೊ (106; 99ಎಸೆತ, 15ಬೌಂಡರಿ, 1ಸಿಕ್ಸರ್) ಮತ್ತು ಜೇಸನ್ ರಾಯ್ (60; 61ಎಸೆತ, 8ಬೌಂಡರಿ) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 123 ರನ್‌ಗಳ ಅಡಿಪಾಯ ಹಾಕಿದರು. ಅದರಿಂದಾಗಿ  ಇಂಗ್ಲೆಂಡ್ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 305 ರನ್‌ಗಳ ಒಳ್ಳೆಯ ಮೊತ್ತ ಗಳಿಸಿತು. ಗುರಿ ಬೆನ್ನತ್ತಿದ ಕಿವೀಸ್ ತಂಡವು 45 ಓವರ್‌ಗಳಲ್ಲಿ 186 ರನ್ ಗಳಿಸಲಷ್ಟೇ ಶಕ್ತವಾಗಿ 119 ರನ್‌ಗಳ ಭಾರೀ ಅಂತರದಿಂದ ಸೋತಿತು.

ಟೂರ್ನಿಯ ಆರಂಭದಿಂದ ಬಹಳಷ್ಟು ಸಮಯ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿ ಮೆರೆದಿದ್ದ ಕಿವೀಸ್ ತಂಡವು ಈಗ ನಾಲ್ಕನೇ ಸ್ಥಾನಕ್ಕೆ ಜಾರಿದೆ. ಒಟ್ಟು 11 ಪಾಯಿಂಟ್ಸ್‌ ತಂಡದ ಖಾತೆಯಲ್ಲಿವೆ. ಒಂಬತ್ತು ಅಂಕ ಪಡೆದಿರುವ ಪಾಕ್ ತಂಡವು ಐದನೇ ಸ್ಥಾನದಲ್ಲಿದೆ. ಜುಲೈ ಐದರಂದು ಪಾಕ್ ತಂಡವು (ರನ್‌ರೇಟ್; –0.792) ಬಾಂಗ್ಲಾದೇಶವನ್ನು ಎದುರಿಸಲಿದೆ. ಆ ಪಂದ್ಯದಲ್ಲಿ ಜಯಿಸುವುದಷ್ಟೇ ಅಲ್ಲ; ನೆಟ್‌ ರನ್‌ರೇಟ್‌ನಲ್ಲಿ ಕಿವೀಸ್ (+0.175.)ತಂಡವನ್ನು ಹಿಂದಿಕ್ಕಬೇಕು. ಈಗಾಗಲೇ ಆಸ್ಟ್ರೇಲಿಯಾ, ಭಾರತ ಮತ್ತು ಇಂಗ್ಲೆಂಡ್ ನಾಲ್ಕರ ಹಂತ ಪ್ರವೇಶಿಸಿವೆ. ನಾಲ್ಕನೇ ಸ್ಥಾನವಷ್ಟೇ ನಿರ್ಧಾರವಾಗಬೇಕು.

ಜಾನಿ–ಜೇಸನ್ ಮಿಂಚು: ಹೋದ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಅಬ್ಬರಿಸಿದ್ದ ಜಾನಿ ಬೆಸ್ಟೊ–ಜೇಸನ್ ಜೋಡಿಯು ಇಲ್ಲಿಯೂ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿತು.

ಕಿವೀಸ್ ತಂಡದ ಆರು ಬೌಲರ್‌ಗಳು ಇಂಗ್ಲೆಂಡ್ ತಂಡದ ಆತಿಥೇಯ ಜೋಡಿಯನ್ನು ಕಟ್ಟಿಹಾಕಲು ಮಾಡಿದ ಯಾವ ಪ್ರಯತ್ನವೂ ಕೈಗೂಡಲಿಲ್ಲ. ಈ ಜೊತೆಯಾಟವನ್ನು 19ನೇ ಓವರ್‌ನಲ್ಲಿ ಜೇಮ್ಸ್ ನಿಶಾಮ್ ಮುರಿದರು. ಜೇಸನ್ ಡ್ರೈವ್ ಮಾಡಿದ ಚೆಂಡನ್ನು ಮಿಷೆಲ್ ಸ್ಯಾಂಟನರ್ ಕ್ಯಾಚ್ ಪಡೆದರು. 123 ರನ್‌ಗಳ ಅಮೋಘ ಜೊತೆಯಾಟ ಅಂತ್ಯವಾಯಿತು. ಆದರೆ ಬೆಸ್ಟೊ ಮಾತ್ರ ತಮ್ಮ ಆಟಕ್ಕೆ ವಿರಾಮ ನೀಡಲಿಲ್ಲ. ಅವರು ಜೋ ರೂಟ್ ಜೊತೆಗೆ ಎರಡನೇ ವಿಕೆಟ್‌ ಜೊತೆಯಾಟದಲ್ಲಿ 71 ರನ್ ಸೇರಿಸಿದರು. ಇನಿಂಗ್ಸ್‌ನ ಏಕೈಕ ಸಿಕ್ಸರ್‌ ಕೂಡ ಅವರಿಂದಲೇ ದಾಖಲಾಯಿತು.

ಈ ಹಂತದಲ್ಲಿ ಶಿಸ್ತಿನ ದಾಳಿ ನಡೆಸಿದ ವೇಗಿ ಟ್ರೆಂಟ್ ಬೌಲ್ಟ್‌ ಎಸೆತದಲ್ಲಿ ರೂಟ್ ಔಟಾದರು. ಸ್ವಲ್ಪ ಹೊತ್ತಿನ ನಂತರ ಜಾನಿಯನ್ನು ಮ್ಯಾಟ್ ಹೆನ್ರಿ ಕ್ಲೀನ್‌ ಬೌಲ್ಡ್‌ ಮಾಡಿದರು. 35ನೇ ಓವರ್‌ನಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್‌ಗೆ ಬೌಲ್ಟ್‌ ಪೆವಿಲಿಯನ್ ದಾರಿ ತೋರಿಸಿದರು. ಆದರೆ ಇನ್ನೊಂದು ಬದಿಯಲ್ಲಿ ನಾಯಕ ಇಯಾನ್ ಮಾರ್ಗನ್ (42; 40ಎಸೆತ, 5ಬೌಂಡರಿ) ಅವರೊಬ್ಬರೇ ಸ್ವಲ್ಪ ಹೋರಾಟ ಮಾಡಿದರು. ತಂಡದ ರನ್‌ ಗಳಿಕೆಗೆ ವೇಗ ನೀಡುವ ಪ್ರಯತ್ನ ಮಾಡಿದರು.

ಇಂಗ್ಲೆಂಡ್‌ನ ವೇಗಿ  ಮಾರ್ಕ್ ವುಡ್ ಅವರು ಮೂರು ವಿಕೆಟ್ ಪಡೆದರು. ಜೋಫ್ರಾ ಆರ್ಚರ್ ಮತ್ತು ಕ್ರಿಸ್ ವೋಕ್ಸ್‌ ಉತ್ತಮ ಬೌಲಿಂಗ್ ಮಾಡಿ ಕಿವೀಸ್ ತಂಡದ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಕಟ್ಟಿಹಾಕಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು