ಭಾನುವಾರ, ನವೆಂಬರ್ 1, 2020
19 °C

ಕೇರಳದ ಮಾಜಿ ಕ್ರಿಕೆಟಿಗ ಸುರೇಶ್‌ ಕುಮಾರ್‌ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಲಪ್ಪುಳ: ಕೇರಳದ ಮಾಜಿ ಕ್ರಿಕೆಟಿಗ ಎಂ.ಸುರೇಶ್‌ ಕುಮಾರ್‌ (47) ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಸುರೇಶ್‌ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಇರುವುದನ್ನು ಮೊದಲು ನೋಡಿದ್ದು ಅವರ ಮಗ. ರಾತ್ರಿ 7.15ರ ಸುಮಾರಿಗೆ ಅವರು ನಮಗೆ ಈ ವಿಷಯವನ್ನು ತಿಳಿಸಿದರು. ಇದು ಆತ್ಮಹತ್ಯೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಕುರಿತು ತನಿಖೆ ನಡೆಸುತ್ತೇವೆ’ ಎಂದೂ ಅವರು ನುಡಿದಿದ್ದಾರೆ.

ಎಡಗೈ ಸ್ಪಿನ್ನರ್‌ ಆಗಿದ್ದ ಸುರೇಶ್‌ ಅವರು ಭಾರತ ತಂಡದ ಪರ ಆಡಿದ್ದ ಕೇರಳದ ಮೊದಲ ಕ್ರಿಕೆಟಿಗ ಎಂಬ ಹಿರಿಮೆ ಹೊಂದಿದ್ದರು. 1990ರಲ್ಲಿ ನಡೆದಿದ್ದ 19 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯ ನ್ಯೂಜಿಲೆಂಡ್‌ ಎದುರಿನ ಪಂದ್ಯದಲ್ಲಿ ಆಡುವ ಮೂಲಕ ಈ ಸಾಧನೆ ಮಾಡಿದ್ದರು. ಆಗ ಕರ್ನಾಟಕದ ರಾಹುಲ್‌ ದ್ರಾವಿಡ್‌ ಅವರು ಭಾರತ ತಂಡದ ನಾಯಕರಾಗಿದ್ದರು.   

1995–96ರ ರಣಜಿ ಟ್ರೋಫಿ ಋತುವಿನಲ್ಲಿ ಕೇರಳ ತಂಡವನ್ನು ಪ್ರತಿನಿಧಿಸಿದ್ದ ಸುರೇಶ್‌, ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ‘ಹ್ಯಾಟ್ರಿಕ್‌’ ವಿಕೆಟ್‌ ಸಾಧನೆ ಮಾಡಿದ್ದರು. 1994–95ನೇ ಋತುವಿನ ಟೂರ್ನಿಯ ತಮಿಳುನಾಡು ಎದುರಿನ ಹಣಾಹಣಿಯಲ್ಲಿ 12 ವಿಕೆಟ್‌ ಉರುಳಿಸಿ ಕೇರಳ ತಂಡದ ಗೆಲುವಿನ ರೂವಾರಿಯಾಗಿದ್ದರು.

1991–92ರಿಂದ 2005–06ರ ಅವಧಿಯಲ್ಲಿ ಒಟ್ಟು 72 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದ ಸುರೇಶ್‌, 1,657ರನ್‌ ದಾಖಲಿಸಿದ್ದರು. 196 ವಿಕೆಟ್‌ಗಳನ್ನೂ ಉರುಳಿಸಿದ್ದರು. ದುಲೀಪ್‌ ಟ್ರೋಫಿಯಲ್ಲಿ ದಕ್ಷಿಣ ಹಾಗೂ ಕೇಂದ್ರ ವಲಯ ತಂಡಗಳನ್ನೂ ಪ್ರತಿನಿಧಿಸಿದ್ದರು.  

2005ರಲ್ಲಿ ಪಾಲಕ್ಕಾಡ್‌ನಲ್ಲಿ ಆಯೋಜನೆಯಾಗಿದ್ದ ಜಾರ್ಖಂಡ್‌ ಎದುರಿನ ರಣಜಿ ಪಂದ್ಯದ ಬಳಿಕ ಸುರೇಶ್,‌ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಿದ್ದರು. ಭಾರತೀಯ ರೈಲ್ವೆಯ ಉದ್ಯೋಗಿಯಾಗಿದ್ದ ಅವರು ರೈಲ್ವೇಸ್‌ ತಂಡದ ಪರ 17 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು