ಸೋಮವಾರ, ಜೂನ್ 1, 2020
27 °C

ವಿಶ್ವಶ್ರೇಷ್ಠ ನಾಯಕ ಧೋನಿಗೆ ಹೆಚ್ಚು ಸಭೆ ನಡೆಸುವುದರಲ್ಲಿ ನಂಬಿಕೆಯಿಲ್ಲ: ಪ್ಲೆಸಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಐಸಿಸಿಯ ಮೂರು ಪ್ರಮುಖ ಪ್ರಶಸ್ತಿಗಳನ್ನು (ಏಕದಿನ ವಿಶ್ವಕಪ್‌, ಟಿ20 ವಿಶ್ವಕಪ್‌, ಚಾಂಪಿಯನ್ಸ್‌ ಟ್ರೋಫಿ) ಗೆದ್ದ ವಿಶ್ವದ ಏಕೈಕ ನಾಯಕ ಎನಿಸಿರುವ ಟೀಂ ಇಂಡಿಯಾದ ಹಿರಿಯ ಆಟಗಾರ ಎಂ.ಎಸ್‌.ಧೋನಿ ಅವರಿಗೆ ತಂಡದ ಇತರ ಆಟಗಾರರೊಂದಿಗೆ ಹೆಚ್ಚುಹೆಚ್ಚು ಸಭೆಗಳನ್ನು ನಡೆಸುವುದರಲ್ಲಿ ನಂಬಿಕೆಯೇ ಇಲ್ಲ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಫಾಫ್‌ ಡು ಪ್ಲೆಸಿ ಹೇಳಿದ್ದಾರೆ.

ಬಾಂಗ್ಲಾದೇಶದ ತಂಡದ ಆಟಗಾರ ತಮೀಮ್‌ ಇಕ್ಬಾಲ್‌ ಅವರೊಂದಿಗೆ ಫೇಸ್‌ಬುಕ್‌ ಮೂಲಕ ಮಾತುಕತೆ ನಡೆಸಿದ ಪ್ಲೆಸಿ, ಐಪಿಎಲ್‌ನಲ್ಲಿ 2011 ರಿಂದ 2015 ರವರೆಗೆ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡಿದ್ದರು. 2018ರಲ್ಲಿ ಮತ್ತೆ ಸಿಎಸ್‌ಕೆ ಕೂಡಿಕೊಂಡಿರುವ ಅವರು, ‘ನಾಯಕನಾಗಿ ಧೋನಿ ಅಚ್ಚರಿ ಎನಿಸುವಷ್ಟು ಭಿನ್ನ. ನಾಯಕನಾದವನು ತಂಡದ ಸಭೆಗಳು ಹಾಗೂ ಬೇರೆ ಸಂದರ್ಭಗಳಲ್ಲಿ ಮಾತನಾಡಬೇಕು ಎಂದು ನಾನು ಅಂದುಕೊಳ್ಳುತ್ತೇನೆ. ಆದರೆ, ಈ ವಿಚಾರದಲ್ಲಿ ಧೋನಿ ಸಂಪೂರ್ಣ ವಿಭಿನ್ನ. ಧೋನಿಗೆ ಹೆಚ್ಚೆಚ್ಚು ಸಭೆ ನಡೆಸುವುದರಲ್ಲಿ ನಂಬಿಕೆಯೇ ಇಲ್ಲ. ಆತ ಸಹಜ ಸ್ವಭಾವದ ನಾಯಕ. ಕ್ರಿಕೆಟ್‌ ಬಗ್ಗೆ ಉತ್ತಮ ಜ್ಞಾನ ಹೊಂದಿರುವುದರಿಂದ ಅವರು ಮೈದಾನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಧೋನಿ ತಂಡ ಮುನ್ನಡೆಸುವ ರೀತಿಯ ಬಗ್ಗೆ ಮಾತನಾಡಿರುವ ಪ್ಲೆಸಿ, ನಾಯಕತ್ವದ ಬಗೆಗಿನ ತಮ್ಮ ನಿಲುವು ಬದಲಾಗಲು ಧೋನಿಯೇ ಕಾರಣ ಎಂದಿದ್ದಾರೆ. ‘ಧೋನಿ ಆಟಗಾರರನ್ನು ಚೆನ್ನಾಗಿ ಆರ್ಥ ಮಾಡಿಕೊಳ್ಳುತ್ತಾರೆ. ಅದರಿಂದಾಗಿ ಸಹಜ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಕ್ರೀಡೆಯ ಬಗ್ಗೆ ನಂಬಲಾಗದಷ್ಟು ಆಪ್ತ ಭಾವ ಹೊಂದಿದ್ದಾರೆ. ಅದೇ ಅವರ ದೊಡ್ಡ ಶಕ್ತಿ’ ಎಂದು ಹೇಳಿದ್ದಾರೆ.

‘ಧೋನಿ ಅತ್ಯಂತ ಶಾಂತ ಸ್ವಭಾವದವರು. ಅವರಿಗಿಂತ ಉತ್ತಮ ಫಿನಿಶರ್‌ ಜೊತೆ ನಾನು ಈವರೆಗೆ ಆಡಿಲ್ಲ. ಮೈದಾನದಲ್ಲಿದ್ದು ಅವರನ್ನು ಗಮನಿಸುವುದೇ ಸ್ಮರಣೀಯ. ಬೇರೆ ಯಾರಾದರು ಅವರನ್ನು ಅನುಸರಿಸಲು ಪ್ರಯತ್ನಿಸಿದರೂ ಯಶಸ್ವಿಯಾಗಲಾರರು. ಧೋನಿ ಸಾಟಿಯಿಲ್ಲದ ಪ್ರತಿಭೆ. ಅವರಿಗೆ ಅಸಾಧಾರಣ ತಾಳ್ಮೆ ಇದೆ. ತನ್ನ ಆಟದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ’ ಎಂದಿದ್ದಾರೆ.

36 ಟೆಸ್ಟ್‌, 39 ಏಕದಿನ ಮತ್ತು 40 ಟಿ20 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿರುವ ಪ್ಲೆಸಿ, ಕ್ರಮವಾಗಿ 18, 28 ಮತ್ತು 25 ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಧೋನಿ ಮತ್ತು ಸ್ಟೀಫನ್‌ ಪ್ಲೆಮಿಂಗ್‌ ಇರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ನನ್ನನ್ನು ಆಯ್ಕೆ ಮಾಡಿರುವುದೇ ನನ್ನ ಅದೃಷ್ಟ ಎಂದೂ ಅಭಿಪ್ರಾಯಪಟ್ಟಿದ್ದಾರೆ.

‘ಸಿಎಸ್‌ಕೆ ತಂಡದೊಂದಿಗೆ ಪಯಣ ಶುರುಮಾಡಿರುವುದೇ ನನ್ನ ಅದೃಷ್ಟ. ನಾಯಕತ್ವದ ದೃಷ್ಟಿಯಿಂದ ಧೋನಿ ಮತ್ತು ಫ್ಲೆಮಿಂಗ್‌ ಅವರಿಂದ ಸಾಧ್ಯವಾದಷ್ಟು ಕಲಿಯಲು ಪ್ರಯತ್ನಿಸುತ್ತಿದ್ದೇನೆ. ಏಕೆಂದರೆ ಈ ಇಬ್ಬರೂ ಶ್ರೇಷ್ಠ ನಾಯಕರು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು