ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌: ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶ

ಸಿಎ ಹಂಗಾಮಿ ಸಿಇಒ ಹಾಕ್ಲಿ ಹೇಳಿಕೆ
Last Updated 20 ಜೂನ್ 2020, 7:10 IST
ಅಕ್ಷರ ಗಾತ್ರ

ಮೆಲ್ಬರ್ನ್‌: ‘ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ ಆಯೋಜನೆಯಾದಾಗ, ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಕ್ರೀಡಾಂಗಣದೊಳಗೆ ಪ್ರವೇಶ ನೀಡುತ್ತೇವೆ’ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ (ಸಿಎ) ಹಂಗಾಮಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ನಿಕ್‌ ಹಾಕ್ಲಿ ಶನಿವಾರ ತಿಳಿಸಿದ್ದಾರೆ.

‘ವಿಶ್ವಕಪ್‌ನಲ್ಲಿ ಭಾಗವಹಿಸಲು 15 ತಂಡಗಳು ಆಸ್ಟ್ರೇಲಿಯಾಕ್ಕೆ ಬರಬಹುದಾದರೇ, ಪ್ರೇಕ್ಷಕರಿಗೆ ಏಕೆ ಮೈದಾನದೊಳಗೆ ಪ್ರವೇಶ ನೀಡಬಾರದು’ ಎಂದು ಅವರು ಪ್ರಶ್ನಿಸಿದ್ದಾರೆ.

‘15 ತಂಡಗಳನ್ನು ಆಸ್ಟ್ರೇಲಿಯಾಕ್ಕೆ ಹೇಗೆ ಬರಮಾಡಿಕೊಳ್ಳಬೇಕೆಂಬುದರ ಕುರಿತು ನಾವೀಗ ಚಿಂತಿಸುತ್ತಿದ್ದೇವೆ. ದ್ವಿಪಕ್ಷೀಯ ಸರಣಿಯ ವೇಳೆ ತಂಡವೊಂದು ನಮ್ಮ ನೆಲದಲ್ಲಿ ಪಂದ್ಯಗಳನ್ನು ಆಡಿ ಹೋಗುವುದು ಸುಲಭ. ಆದರೆ ವಿಶ್ವಕಪ್‌ ಹಾಗಲ್ಲ. 15 ತಂಡಗಳ ಆಟಗಾರರು, ನೆರವು ಸಿಬ್ಬಂದಿ ಇಲ್ಲಿಗೆ ಬರಬೇಕು. ಈ ಪೈಕಿ ಆರು ಅಥವಾ ಏಳು ತಂಡಗಳಿಗೆ ಒಂದೇ ಅವಧಿಯಲ್ಲಿ ಒಂದೇ ನಗರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು. ಇದು ಸವಾಲಿನ ಕೆಲಸ’ ಎಂದು ಅವರು ನುಡಿದಿದ್ದಾರೆ.

‘ನಾನು ಸಿಇಒ ಆಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಟ್ವೆಂಟಿ–20 ವಿಶ್ವಕಪ್‌ ಆಯೋಜನೆಯ ಕುರಿತೇ ಹೆಚ್ಚು ಆಲೋಚಿಸುತ್ತಿದ್ದೇನೆ. ವಿಶ್ವಕಪ್‌ ನಡೆಸುವುದು ನಮ್ಮ ಮೊದಲ ಆದ್ಯತೆಯಾಗಿದೆ’ ಎಂದಿದ್ದಾರೆ.

‘ಹಂಗಾಮಿ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳುವಂತೆ ಕ್ರಿಕೆಟ್‌ ಆಸ್ಟ್ರೇಲಿಯಾ ಕೇಳಿಕೊಂಡಾಗ ನನಗೆ ಅಚ್ಚರಿಯ ಜೊತೆಗೆ ಖುಷಿಯೂ ಆಯಿತು. ನಾನು ಇದನ್ನು ನಿರೀಕ್ಷಿಸಿರಲಿಲ್ಲ. ಬಹುದೊಡ್ಡ ಜವಾಬ್ದಾರಿಯೊಂದು ನನ್ನನ್ನು ಅರಸಿ ಬಂದಿದೆ. ಈ ಹುದ್ದೆಯಲ್ಲಿರುವಷ್ಟು ದಿನ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಈ ಸೂತ್ರವನ್ನು ನಾನು ಮೊದಲಿನಿಂದಲೂ ಪಾಲಿಸಿಕೊಂಡು ಬಂದಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಟ್ವೆಂಟಿ–20 ವಿಶ್ವಕಪ್‌ ಈ ವರ್ಷದ ಅಕ್ಟೋಬರ್‌ 18ರಿಂದ ನವೆಂಬರ್‌ 15ರವರೆಗೆ ಕಾಂಗರೂ ನಾಡಿನಲ್ಲಿ ನಡೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT