ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಐಪಿಎಲ್‌ ‘ಖಾಲಿ’ ಕುರ್ಚಿಗಳ ಲಾಭ ಫ್ಯಾಂಟಸಿ ಲೋಕಕ್ಕೆ

Last Updated 15 ಸೆಪ್ಟೆಂಬರ್ 2020, 5:15 IST
ಅಕ್ಷರ ಗಾತ್ರ

ಬೆಂಗಳೂರು: 'ಮಕ್ಕಳು ಹೊರಗೆ ಹೋಗಿ ಆಡುವುದಿಲ್ಲ. ವಿಡಿಯೊ ಗೇಮ್ಸ್‌ನಲ್ಲಿಯೇ ಕಾಲ ಕಳೆಯುತ್ತಾರೆ'ಎಂದು ದೂರುತ್ತಿದ್ದ ಪಾಲಕರಲ್ಲಿ ಬಹುತೇಕರು ಈಗ ತಮ್ಮ ಮೊಬೈಲ್‌ಗಳಲ್ಲಿ ವಿಡಿಯೊ ಗೇಮ್ಸ್‌ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.

ಅಷ್ಟೇ ಅಲ್ಲ. ಆ ಗೇಮ್ಸ್‌ಗಳಿಂದ ತಾವೇ ತಾರಾ ವರ್ಚಸ್ಸಿನ ಆಟಗಾರರೇನೋ ಎಂಬಂತೆ ಸಂಭ್ರಮಿಸುತ್ತ, ಅಷ್ಟೋ ಇಷ್ಟೋ ಹಣ ಕೂಡ ಗಳಿಸುತ್ತಿದ್ದಾರೆ. ಜೊತೆಗೆ ಒಂದಷ್ಟು ಕಳೆದುಕೊಳ್ಳುತ್ತಲೂ ಇದ್ದಾರೆ. ಹೌದು; ಇದೇ ಫ್ಯಾಂಟಸಿ ಲೀಗ್ ಲೋಕ.

ಕಳೆದ ಎರಡು–ಮೂರು ವರ್ಷಗಳಿಂದ ಭಾರತದಲ್ಲಿ ಫ್ಯಾಂಟಸಿ ಕ್ರಿಕೆಟ್ ಲೀಗ್ ಭಾರತದಲ್ಲಿ ಜೋರಾಗಿ ಬೆಳೆಯುತ್ತಿದೆ. ಕೊರೊನಾದಿಂದಾಗಿ ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂದ್ಯಗಳು ಪ್ರೇಕ್ಷಕರಿಲ್ಲದ ಕ್ರೀಡಾಂಗಣಗಳಲ್ಲಿ ನಡೆಯುತ್ತಿರುವುದು ಈ ಫ್ಯಾಂಟಸಿ ಲೀಗ್‌ಗಳಿಗೆ ವರದಾನವಾಗಲಿದೆ. ಚೀನಾ ಮತ್ತು ಭಾರತದ ಗಡಿಯಲ್ಲಿ ತ್ವೇಷಮಯ ಸ್ಥಿತಿ ನಿರ್ಮಾಣವಾಗಿದ್ದರಿಂದ ಐಪಿಎಲ್ ಟೈಟಲ್ ಪ್ರಾಯೋಜಕತ್ವ ನೀಡುತ್ತಿದ್ದ ಚೀನಾದ ವಿವೊ ಮೊಬೈಲ್ ಈ ವರ್ಷದ ಮಟ್ಟಿಗೆ ಹಿಂದೆ ಸರಿದಿದೆ. ಅದರ ಬದಲಿಗೆ ಪ್ರಶಸ್ತಿ ಪ್ರಾಯೋಜಕತ್ವದ ಬಿಡ್‌ನಲ್ಲಿ ವಿಜಯಿಯಾಗಿರುವ ಡ್ರೀಮ್ ಇಲೆವನ್ ಕೂಡ ಫ್ಯಾಂಟಸಿ ಗೇಮ್ಸ್‌ನ ಪ್ರಮುಖ ವೇದಿಕೆಯಾಗಿದೆ. ಇದರಿಂದಾಗಿ ಈ ಬಾರಿಯ ಐಪಿಎಲ್‌ನಲ್ಲಿ ಫ್ಯಾಂಟಸಿ ಗೇಮ್ಸ್‌ಗಳು ಕೋಟ್ಯಂತರ ಹಣ ಬಾಚಿಕೊಳ್ಳುವ ಲೆಕ್ಕಾಚಾರ ನಡೆಯುತ್ತಿದೆ.

'ಭಾರತದಲ್ಲಿ ಹಿಂದೆಂದಿಗಿಂತಲೂ ಈ ವರ್ಷ ಆನ್‌ಲೈನ್ ಗೇಮ್‌ಗಳಿಗೆ ವಿಪರೀತ ಬೇಡಿಕೆ ಹೆಚ್ಚಿದೆ. ಮನೆಯಿಂದ ಕೆಲಸ, ಲಾಕ್‌ಡೌನ್ ಮತ್ತಿತರ ಕಾರಣಗಳಿಗಾಗಿ ಟಿವಿ ವೀಕ್ಷಕರ ಮತ್ತು ಮೊಬೈಲ್ ಆ್ಯಪ್‌ಗಳಲ್ಲಿ ಮನರಂಜನೆ, ಕ್ರೀಡೆ ಮತ್ತು ಗೇಮ್ಸ್‌ಗಳ ಆ್ಯಪ್‌ ಬಳಕೆದಾರರ ಗಣನೀಯವಾಗಿ ಹೆಚ್ಚಿದೆ. ಇದೀಗ ಐಪಿಎಲ್ ಟೂರ್ನಿಯು ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದರಿಂದಾಗಿ ಮನೆಯಲ್ಲಿ ಪಂದ್ಯ ನೋಡುವುದರ ಜೊತೆ ಜೊತೆಗೆ ಫ್ಯಾಂಟಸಿ ಆ್ಯಪ್‌ಗಳ ಮೂಲಕ ಆಡಲೂಬಹುದಾದ ಮನರಂಜನೆ ಸಿಗಲಿದೆ. ಇದು ನಮ್ಮ ವ್ಯವಹಾರ ಅಭಿವೃದ್ಧಿಗೆ ಪೂರಕವಾಗಲಿದೆ‘ ಎಂದು ಭಾರತ ಫ್ಯಾಂಟಸಿ ಸ್ಪೋರ್ಟ್ಸ್‌ ಫೆಡರೇಷನ್ (ಎಫ್‌ಐಎಫ್‌ಎಸ್) ಮುಖ್ಯಸ್ಥ ಜಾನ್ ಲಾಫ್ಸ್‌ಜೆನ್ ಹೇಳುತ್ತಾರೆ.

2017ರಲ್ಲಿ ಎಂಟು ಪ್ರಮುಖ ಫ್ಯಾಂಟಸಿ ಸ್ಪೋರ್ಟ್ಸ್‌ಗಳ ಕಂಪೆನಗಳೊಂದಿಗೆ ಈ ಫೆಡರೇಷನ್ ಕಾರ್ಯಾರಂಭ ಮಾಡಿದೆ. ಎರಡು ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ವಹಿವಾಟು ನಡೆಸುತ್ತಿದೆ.

’ಭಾರತದಲ್ಲಿ ಕ್ರಿಕೆಟ್‌ ಕ್ರೀಡೆಯ ಫ್ಯಾಂಟಸಿ ಆ್ಯಪ್‌ಗಳಿಗೆ ಅಪಾರ ಬೇಡಿಕೆ ಇದೆ. ಜನರಲ್ಲಿರುವ ಕ್ರಿಕೆಟ್ ಕ್ರೇಜ್‌ಗೆ ಹೊಸ ವೇದಿಕೆ ಕಲ್ಪಿಸಿರುವ ಈ ಆ್ಯಪ್‌ಗಳ ವ್ಯವಹಾರ ಕೂಡ ಲಾಭದಾಯಕವಾಗಿದೆ. ಆನ್‌ಲೈನ್‌ ಫ್ಯಾಂಟಸಿ ಸ್ಪೋರ್ಟ್ಸ್‌ ಬಳಕೆದಾರರಲ್ಲಿ ಶೇ 77ರಷ್ಟು ಮಂದಿ ಕ್ರಿಕೆಟ್, ಶೇ 47ರಷ್ಟು ಮಂದಿ ಫುಟ್‌ಬಾಲ್ ಮತ್ತು ಶೇ 9ರಷ್ಟು ಕಬಡ್ಡಿ ಆಡುತ್ತಾರೆ ಎಂದು ಈಚೆಗೆ ಕೆಪಿಎಂಜಿಯೊಂದಿಗೆ ಫ್ಯಾಂಟಸಿ ನಡೆಸಿರುವ ಸಮೀಕ್ಷೆಯಲ್ಲಿ ಕಂಡುಬಂದಿದೆ. ಒಟ್ಟು 750 ಜನರಿಂದ ಪಡೆದ ಪ್ರತಿಕ್ರಿಯೆಗಳ ಆಧಾರದಲ್ಲಿ ಈ ಅಂಕಿಸಂಖ್ಯೆಗಳನ್ನು ಅಂತಿಮಗೊಳಿಸಲಾಗಿದೆ. ಈ ವರದಿಯನ್ನು ಈಚೆಗಷ್ಟೇ ಬಿಡುಗಡೆ ಮಾಡಲಾಯಿತು.

ಕೊರೊನಾ ಕಾಲದಲ್ಲಿ ನಡೆದ ಲಾಲಿಗಾ, ಚಾಂಪಿಯನ್ಸ್‌ ಲೀಗ್ ಫುಟ್‌ಬಾಲ್, ಕೆರಿಬಿಯನ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಗಳು ನಡೆದಿವೆ. ಈ ಲೀಗ್‌ಗಳಲ್ಲಿ ಆ್ಯಪ್‌ಗಳ ಬಳಕೆ ವ್ಯಾಪಕವಾಗಿ ಬೆಳೆದಿರುವುದರಿಂದ ಎಫ್‌ಐಎಫ್‌ಎಸ್ ಹುರುಪುಗೊಂಡಿದೆ. ಐಪಿಎಲ್‌ನಿಂದ 900 ಕೋಟಿ ರೂಪಾಯಿಗೂ ಹೆಚ್ಚು ಆದಾಯದ ನಿರೀಕ್ಷೆ ಇದೆ.

ದೇಶದಲ್ಲಿ ಆನ್‌ಲೈನ್ ಫ್ಯಾಂಟಸಿ ಗೇಮ್‌ಗಳಿಗೆ ಅಪಾರ ಬೇಡಿಕೆಯಿದೆ. ಈ ವರ್ಷ ₹ 2470 ಕೋಟಿ ಆದಾಯ ಗಳಿಸುವ ನಿರೀಕ್ಷೆ ಇದೆ. ಆಟದೊಂದಿಗೆ ಅಭಿಮಾನಿಗಳ ನಂಟು ಬೆಸೆಯಲು ಈ ವೇದಿಕೆಗಳು ಉಪಯುಕ್ತ ಎನ್ನುತ್ತಾರೆಕೆಪಿಎಂಜಿಯ ಮಾಧ್ಯಮ–ಮನರಂಜನೆ ಮುಖ್ಯಸ್ಥಗಿರೀಶ ಮೆನನ್.

ಕೆಪಿಎಂಜಿ ಸಮೀಕ್ಷೆಯಲ್ಲಿ ಹೊರಹೊಮ್ಮಿದ ಪ್ರಮುಖ ಅಂಶಗಳು

* 750 ಜನರಿಂದ ಸಂಗ್ರಹಿಸಲಾದ ಮಾಹಿತಿಗಳು

* ಶೇ 55ರಷ್ಟು ಮಂದಿ ಫ್ಯಾಂಟಸಿ ಗೇಮ್ಸ್‌ನಲ್ಲಿ ಆಡಲು ಆರಂಭಿಸಿದ ಮೇಲೆ ಕ್ರೀಡೆಗಳ ಬಗ್ಗೆ ಆಸಕ್ತಿ ಹೆಚ್ಚಾಗಿದೆ

* ಶೇ 32ರಷ್ಟು ಜನರು ಎರಡು ಅಥವಾ ಅದಕ್ಕಿಂತ ಹೆಚ್ಚು ಗೇಮ್ಸ್‌ಗಳಲ್ಲಿ ಆಡುತ್ತಿದ್ದಾರೆ.

* ಶೇ 65ರಷ್ಟು ಜನರು ಫ್ಯಾಂಟಸಿಯಲ್ಲಿ ಭಾಗವಹಿಸಿದ ನಂತರ ಕ್ರೀಡೆಗಳ ಕುರಿತ ಓದು, ವಿಶ್ಲೇಷಣೆ ಮತ್ತು ವೀಕ್ಷಣೆಯಲ್ಲಿ ಹೆಚ್ಚು ಕಾಲ ವಿನಿಯೋಗಿಸುತ್ತಿದ್ದಾರೆ.

* ವಾರದಲ್ಲಿ ನಾಲ್ಕು ದಿನವಾದರೂ ಆನ್‌ಲೈನ್ ಗೇಮ್ಸ್‌ ಆಡುತ್ತಾರೆ. ಸರಾಸರಿ 215 ನಿಮಿಷ ವಿನಿಯೋಗಿಸುತ್ತಾರೆ. ಕ್ರೀಡೆಯ ವೀಕ್ಷಣೆಗೆ ವಾರದಲ್ಲಿ 160–180 ನಿಮಿಷ ಮೀಸಲಿಟ್ಟಿದ್ದಾರೆ

* ಫ್ಯಾಂಟಸಿ ಲೀಗ್ ವೇದಿಕೆಯಲ್ಲಿ ತಾವು ಆಯ್ಕೆ ಮಾಡಿದ ಆಟಗಾರರು ಯಾವ ರೀತಿ ಆಡುತ್ತಿದ್ದಾರೆ ಎಂದು ಗಮನಿಸಲು ಶೇ 16ರಷ್ಟು ಮಂದಿ ನೇರಪ್ರಸಾರಗಳನ್ನು ವೀಕ್ಷಿಸುತ್ತಾರೆ.

* ಶೇ 77ರಷ್ಟು ಮಂದಿ ಕ್ರಿಕೆಟ್, ಶೇ 47ರಷ್ಟು ಫುಟ್‌ಬಾಲ್ ಮತ್ತು ಶೇ 9ರಷ್ಟು ಜನರು ಕಬಡ್ಡಿ ಗೇಮ್ಸ್‌ಗಳಲ್ಲಿ ಆಸಕ್ತಿ ಹೊಂದಿದ್ದಾರೆ.

* ಶೇ 15–20ರಷ್ಟು ಮಂದಿಯು ನಿಯಮಿತವಾಗಿ ಹಣ ಪಾವತಿ ಮಾಡಿ ಆಡುತ್ತಿದ್ದಾರೆ

* ಡಿಜಿಟಲ್ ಹಣ ಪಾವತಿ ವ್ಯವಸ್ಥೆ, ಡಿಜಿಟಲ್ ಇಂಡಿಯಾ ಅಭಿಯಾನದಿಂದ ಫ್ಯಾಂಟಸಿ ಗೇಮ್ಸ್‌ ಬೆಳವಣಿಗೆಗೆ ಅನುಕೂಲವಾಗುತ್ತಿದೆ.

ಮುಂಚೂಣಿಯಲ್ಲಿರುವ ಆ್ಯಪ್‌ಗಳು

* ಡ್ರೀಮ್ ಇಲೆವನ್

* ಮೈ ಟೀಮ್ ಇಲೆವನ್

* ಮೊಬೈಲ್ ಪ್ರೀಮಿಯರ್ ಲೀಗ್ (ಎಂಪಿಎಲ್)

* ಹಲಾಪ್ಲೇ

* 11 ವಿಕೆಟ್ಸ್‌

* ಬಲ್ಲೇ ಬಾಜಿ

* ಮೈ ಇಲೆವನ್ ಸರ್ಕಲ್

* ಫ್ಯಾನ್‌ಫೈಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT