ಗುರುವಾರ , ಆಗಸ್ಟ್ 11, 2022
22 °C
ನಾಳೆಯಿಂದ ಐಪಿಎಲ್‌: 12 ವರ್ಷಗಳ ಕಾಯುವಿಕೆಗೆ ಪೂರ್ಣವಿರಾಮ ಹಾಕುವರೇ ವಿರಾಟ್ ಕೊಹ್ಲಿ

PV Web Exclusive | ಈ ಸಲ ಐಪಿಎಲ್ ಕಪ್‌ ನಮ್ದೇನಾ...?

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಸಣ್ಣ ಆಸೆ, ದೊಡ್ಡ ಭರವಸೆ, ಬೆಟ್ಟದಷ್ಟು ನಿರೀಕ್ಷೆಗಳ ಮೂಟೆ ಹೊತ್ತು ಕಾದು 12 ವರ್ಷಗಳು ಉರುಳಿ ಹೋಗಿವೆ. ಆದರೆ ಇನ್ನೂ ಕನಸು ಕೈಗೂಡಿಲ್ಲ. ಪ್ರತಿ ವರ್ಷದ ಐಪಿಎಲ್‌ ಟೂರ್ನಿ ಆರಂಭವಾದಾಗ ‘ಈ ಸಲ ಕಪ್‌ ನಮ್ದೇ’ ಎನ್ನುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಅಭಿಮಾನಿಗ‌ಳಿಗೆ ಟ್ರೋಫಿಗಾಗಿ ಮತ್ತೊಂದು ಟೂರ್ನಿವರೆಗೆ ಕಾಯುವುದು ತಪ್ಪುತ್ತಿಲ್ಲ.

ಈಗ ಇನ್ನೊಂದು ಐಪಿಎಲ್ ಟೂರ್ನಿ ಬಂದಿದೆ. ಸೆ. 19ರಿಂದ ನವೆಂಬರ್ 10ರ ವರೆಗೆ ಯುನೈಟೆಡ್ ಅರಬ್‌ ಎಮಿರೇಟ್ಸ್‌ನಲ್ಲಿ 13ನೇ ಆವೃತ್ತಿಯ ಟೂರ್ನಿ ನಡೆಯಲಿದೆ. ದುಬೈ, ಶಾರ್ಜಾ ಮತ್ತು ಅಬುದಾಬಿಯ ಮೋಹಕ ಕ್ರೀಡಾಂಗಣಗಳಲ್ಲಿ ‘ಮಿಲಿಯನ್‌ ಡಾಲರ್‌ ಬೇಬಿ’ ಖ್ಯಾತಿಯ ಚುಟುಕು ಕ್ರಿಕೆಟ್ ಸಂಭ್ರಮ ಅನಾವರಣಗೊಳ್ಳಲಿದೆ.

53 ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ 56 ಲೀಗ್‌, ನಾಲ್ಕು ಪ್ಲೇ ಆಫ್‌ ಸೇರಿ ಒಟ್ಟು 60 ಪಂದ್ಯಗಳು ಜರುಗಲಿವೆ. ಚಾಂಪಿಯನ್‌ ತಂಡಕ್ಕೆ ₹10 ಕೋಟಿ ಮತ್ತು ರನ್ನರ್ಸ್‌ ಅಪ್‌ ತಂಡಕ್ಕೆ ₹6.25 ಕೋಟಿ ಬಹುಮಾನ ಸಿಗಲಿದೆ. ಹಿಂದಿನ ಟೂರ್ನಿಗಳಿಗೆ ಹೋಲಿಸಿದರೆ ಈ ಬಹುಮಾನ ಮೊತ್ತ ಕಡಿಮೆ.

ಆರ್‌ಸಿಬಿ, ‌ಚೆನ್ನೈ ಸೂಪರ್ ಕಿಂಗ್ಸ್‌, ದೆಹಲಿ ಕ್ಯಾಪಿಟಲ್ಸ್‌, ಕಿಂಗ್ಸ್‌ ಇಲೆವನ್‌ ಪಂಜಾಬ್‌, ಕೋಲ್ಕತ್ತ ನೈಟ್‌ ರೈಡರ್ಸ್‌, ಮುಂಬೈ ಇಂಡಿಯನ್ಸ್‌, ರಾಜಸ್ಥಾನ ರಾಯಲ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಕಣದಲ್ಲಿವೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ಪೈಪೋಟಿ ನಡೆಸಲಿವೆ. 21ರಂದು ವಿರಾಟ್‌ ಕೊಹ್ಲಿ ನಾಯಕತ್ವದ ಆರ್‌ಸಿಬಿ ಪಡೆಗೆ ಸನ್‌ರೈಸರ್ಸ್‌ ಸವಾಲೊಡ್ಡಲಿದೆ.


ಐಪಿಎಲ್ ಟ್ರೋಫಿ

ಭಾರತದಲ್ಲಿ ನಡೆದ 11 ಐಪಿಎಲ್‌ ಆವೃತ್ತಿಗಳಲ್ಲಿ (2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್‌ ನಡೆದಿತ್ತು) ಆರ್‌ಸಿಬಿ ತಂಡ 2009, 2011 ಮತ್ತು 2016ರ ಟೂರ್ನಿಗಳಲ್ಲಿ ಫೈನಲ್‌ ಪ್ರವೇಶಿಸಿ ಸೋಲು ಕಂಡಿತ್ತು. 2010 ಮತ್ತು 2015ರಲ್ಲಿ ಸೆಮಿಫೈನಲ್‌ನಲ್ಲಿ ಮುಗ್ಗರಿಸಿತ್ತು. ಈ 12 ವರ್ಷಗಳ ಅವಧಿಯಲ್ಲಿ ಐದು ಬಾರಿ ಟ್ರೋಫಿ ಎತ್ತಿ ಹಿಡಿಯುವ ಅವಕಾಶ ಕಳೆದುಕೊಂಡಿರುವ ಆರ್‌ಸಿಬಿ ಹೊಸ ಅಂಗಳದಲ್ಲಿ ‘ಕಪ್‌ ಗೆಲ್ಲುತ್ತಾ’ ಎನ್ನುವ ಪ್ರಶ್ನೆ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳಿಂದ ಕೇಳಿಬರುತ್ತಿದೆ.

ಬೆಂಗಳೂರು ತಂಡದ ಆಟಗಾರರ ರನ್‌ ಹೊಳೆಯ ಅಂಕಿ ಸಂಖ್ಯೆಗಳ ಲೆಕ್ಕಾಚಾರ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಸಾಧನೆಯ ಪಟ್ಟಿ ನೋಡಿದರೆ ಆರ್‌ಸಿಬಿ ಮೊದಲ ಆವೃತ್ತಿಯಿಂದಲೂ ಬಲಿಷ್ಠ ತಂಡ. ಈಗಿನ ತಂಡದಲ್ಲಿರುವ ವಿರಾಟ್ ಕೊಹ್ಲಿ, ಎ.ಬಿ. ಡಿವಿಲಿಯರ್ಸ್‌ ದೊಡ್ಡ ಬ್ಯಾಟಿಂಗ್ ಶಕ್ತಿ. ಹಿಂದೆ ತಂಡದಲ್ಲಿದ್ದ ಕ್ರಿಸ್‌ ಗೇಲ್‌ ತಮ್ಮ ಮೋಹಕ ಬ್ಯಾಟಿಂಗ್‌ ಮೂಲಕ ಕ್ರಿಕೆಟ್‌ ಪ್ರೇಮಿಗಳು ಹುಚ್ಚೆದ್ದು ಕುಣಿಯವಂತೆ ಮಾಡುತ್ತಿದ್ದರು. ಈಗ ಅವರು ತಂಡದಲ್ಲಿ ಇರದಿದ್ದರೂ ಅವರಷ್ಟೇ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಬಲ್ಲ ತಾಕತ್ತು ಡಿವಿಲಿಯರ್ಸ್ ಮತ್ತು ಕೊಹ್ಲಿಗೆ ಇದೆ. ಸಿಮೋನ್‌ ಕ್ಯಾಟಿಚ್‌ ತರಬೇತಿಯೂ ತಂಡಕ್ಕಿದೆ.

ಮೊಯೀನ್‌ ಅಲಿ, ಯಜುವೇಂದ್ರ ಚಾಹಲ್‌, ಪಾರ್ಥಿವ್‌ ಪಟೇಲ್‌, ಮೊಹಮ್ಮದ್ ಸಿರಾಜ್‌, ಉಮೇಶ ಯಾದವ್, ಪವನ್‌ ನೇಗಿ, ದೇವದತ್‌ ಪಡಿಕ್ಕಲ್‌, ಗುರುಕೀರತ್‌ ಸಿಂಗ್‌ ಮಾನ್‌, ವಾಷಿಂಗ್ಟನ್‌ ಸುಂದರ್‌ ಹೀಗೆ ಅನೇಕ ಆಟಗಾರರು ಆರ್‌ಸಿಬಿ ತಂಡದಲ್ಲಿದ್ದಾರೆ. ಯುವಪಡೆ ಮತ್ತು ಅನುಭವಿಗಳ ಮಿಶ್ರಣ ಹೊಂದಿರುವ ತಂಡದ ಮೇಲೆ ಹಿಂದಿನ ಎಲ್ಲ ಟೂರ್ನಿಗಳಿಗಿಂತಲೂ ಈ ಬಾರಿ ಹೆಚ್ಚು ನಿರೀಕ್ಷೆಯಿದೆ.


ನವದೆಹಲಿಯಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೈದಾನಕ್ಕೆ ನುಗ್ಗಿದ ವಿರಾಟ್ ಕೊಹ್ಲಿ ಅಭಿಮಾನಿ

ಬದಲಾದ ಬಣ್ಣ ತರುವುದೇ ಅದೃಷ್ಟ

ಐಪಿಎಲ್‌ ಆರಂಭವಾದಾಗಿನಿಂದ ಬೆಂಗಳೂರಿನ ತಂಡ ನಾಲ್ಕು ಬಾರಿ ವಿವಿಧ ಬಣ್ಣಗಳ ಪೋಷಾಕುಗಳನ್ನು ಧರಿಸಿದೆ. ಪ್ರತಿ ವರ್ಷ ಒಂದೊಂದು ಪಂದ್ಯದಲ್ಲಿ ಹಸಿರು ಬಣ್ಣದ ಬಟ್ಟೆಯುಟ್ಟು ಕೊಹ್ಲಿ ಪಡೆಯ ಹುಡುಗರು ಪರಿಸರ ಪ್ರೀತಿ ತೋರಿಸಿದ್ದಾರೆ. 2020ನೇ ಟೂರ್ನಿಗೂ ಬದಲಾಗಿರುವ ಪೋಷಾಕಿನ ಬಣ್ಣ ತಂಡಕ್ಕೆ ಪ್ರಶಸ್ತಿ ತಂದುಕೊಡುತ್ತದೆಯೇ ಎಂದು ಆರ್‌ಸಿಬಿ ತಂಡದ ಅಭಿಮಾನಿಗಳು ಅದೃಷ್ಟದ ಲೆಕ್ಕಾಚಾರ ಹಾಕುತ್ತಿದ್ದಾರೆ.‌

2008ರಲ್ಲಿ ಕೆಂಪು ಮತ್ತು ಹಳದಿ ಬಣ್ಣ ಮಿಶ್ರಿತ ಪೋಷಾಕಿನೊಂದಿಗೆ ಕಣಕ್ಕಿಳಿದಿದ್ದ ಆರ್‌ಸಿಬಿ ಮರುವರ್ಷವೇ ಕೆಂಪು ಮತ್ತು ಬಂಗಾರದ ಬಣ್ಣದ ಪೋಷಾಕಿನ ಮೋರೆ ಹೋಯಿತು. 2011ರಿಂದ 2015ರ ಆವೃತ್ತಿಗಳ ತನಕ ಕೆಂಪು, ಬಂಗಾರ ಮತ್ತು ನೀಲಿ ಬಣ್ಣಗಳ ಮಿಶ್ರಿತ ಪೋಷಾಕಿಗೆ ಬದಲಾಯಿತು. 2016ರಿಂದ ಹಿಂದಿನ ಟೂರ್ನಿಗಳ ತನಕ ಕೆಂಪು, ಬಂಗಾರ ಮತ್ತು ಕಪ್ಪು ಬಣ್ಣಗಳ ಪೋಷಾಕು ಧರಿಸಿತು. ಈ ಬಾರಿ ಕೆಂಪು, ಬಂಗಾರ ಮತ್ತು ಕಪ್ಪುನೀಲಿ ಮಿಶ್ರಿತ ಪೋಷಾಕು ಧರಿಸಿ ಕಣಕ್ಕಿಳಿಯಲಿದೆ.

ಇಬ್ಬರು ಕರ್ನಾಟಕದ ಹುಡುಗರು

ಆರ್‌ಸಿಬಿ ಬೆಂಗಳೂರು ಮೂಲದ ತಂಡವಾದರೂ ಇತ್ತೀಚೆನ ಆವೃತ್ತಿಗಳಿಂದ ಕರ್ನಾಟಕದ ಆಟಗಾರರ ಸಂಖ್ಯೆ ಅಷ್ಟಕ್ಕಷ್ಟೇ. ಈ ಸಲ ಹುಬ್ಬಳ್ಳಿ ಸಮೀಪದ ನವನಗರದ ಪವನ್‌ ದೇಶಪಾಂಡೆ ಮತ್ತು ಬೆಂಗಳೂರಿನ ದೇವದತ್‌ ಪಡಿಕ್ಕಲ್‌ ತಂಡದಲ್ಲಿದ್ದಾರೆ.

ಎರಡು ವರ್ಷಗಳಿಂದ ಆರ್‌ಸಿಬಿಯಲ್ಲಿರುವ ಪವನ ದೇಶಪಾಂಡೆ ಪ್ರತಿಭಾವಂತ ಎಡಗೈ ಬ್ಯಾಟ್ಸ್‌ಮನ್‌. 2016–17ರ ರಣಜಿ ಋತುವಿನಲ್ಲಿ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 19 ವರ್ಷದ ಒಳಗಿನವರ ಭಾರತ ತಂಡದಲ್ಲಿ ಆಡಿರುವ ದೇವದತ್‌ 2019ರಿಂದ ಆರ್‌ಸಿಬಿಯಲ್ಲಿದ್ದಾರೆ. 2018–19ರಲ್ಲಿ ಇವರು ರಣಜಿಗೆ ಪದಾರ್ಪಣೆ ಮಾಡಿದ್ದರು. ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಬಳ್ಳಾರಿ ಟಸ್ಕರ್ಸ್ ತಂಡಕ್ಕೆ ಆಡಿದ್ದರು.

ಕರ್ನಾಟಕದ ಹುಡುಗರ ಬಲ, ವಿರಾಟ್‌ ಕೊಹ್ಲಿ ನಾಯಕತ್ವದ ಛಲ ಮತ್ತು ಡಿವಿಲಿಯರ್ಸ್‌ ಬ್ಯಾಟಿಂಗ್‌ ಶಕ್ತಿಯ ತಂಡವಾಗಿರುವ ಆರ್‌ಸಿಬಿ ಅದೃಷ್ಟ ವಿದೇಶಿ ನೆಲದಲ್ಲಾದರೂ ಬದಲಾಗಬೇಕು. ಇದು ಬೆಂಗಳೂರು ತಂಡದ ಹಾಗೂ ಕೊಹ್ಲಿಯ ಕೋಟ್ಯಂತರ ನೆಚ್ಚಿನ ಅಭಿಮಾನಿಗಳ ಆಶಯವೂ ಹೌದು. ಇದಕ್ಕಾಗಿ ಅನೇಕರು ಆನ್‌ಲೈನ್‌ನಲ್ಲಿ ‘ಆರ್‌ಸಿಬಿ ಗೆಲ್ಲಲಿ, ಈ ಸಲ ಕಪ್‌ ನಮ್ದೇ ಆಗಲಿ’ ಎಂದು ಪ್ರಾರ್ಥಿಸುತ್ತಿದ್ದಾರೆ. ಇಷ್ಟು ವರ್ಷಗಳ ನಿರಾಸೆಯನ್ನು ಬದಿಗಿಟ್ಟು ವಿರಾಟ್ ಕೊಹ್ಲಿ ಕೂಡ ಈ ಸಲ ಕಪ್‌ ನಮ್ದೇ ಎಂದು ಬೀಗುತ್ತಾರಾ...?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು