ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿಯಲ್ಲಿ ಮಹಿಳಾ ಅಂಪೈರ್‌ಗಳ ಕಾರ್ಯನಿರ್ವಹಣೆ: ವೃಂದಾ, ಜನನಿ ಕಣಕ್ಕೆ

Last Updated 6 ಡಿಸೆಂಬರ್ 2022, 13:48 IST
ಅಕ್ಷರ ಗಾತ್ರ

ನವದೆಹಲಿ: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಮಹಿಳಾ ಅಂಪೈರ್‌ಗಳು ಕಾರ್ಯನಿರ್ವಹಿಸಲಿದ್ದಾರೆ.

ವೃಂದಾ ರಾಠಿ, ಜನನಿ ನಾರಾಯಣ ಮತ್ತು ಗಾಯತ್ರಿ ವೇಣುಗೋಪಾಲನ್ ಅವರು ಕಾರ್ಯನಿರ್ವಹಿಸುವರು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮಂಗಳವಾರ ತಿಳಿಸಿದೆ.

ಚೆನ್ನೈನ ಜನನಿ ಹಾಗೂ ಮುಂಬೈನ ವೃಂದಾ ಅವರು 2018ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಡೆವಲಪ್‌ಮೆಂಟ್‌ ಅಂಪೈರ್ ಪ್ಯಾನೆಲ್‌ಗೆ ಸೇರ್ಪಡೆಯಾಗಿದ್ದರು. ದೆಹಲಿಯ ಗಾಯತ್ರಿ ಅವರು ಬಿಸಿಸಿಐ ಪ್ಯಾನೆಲ್‌ನಲ್ಲಿದ್ದಾರೆ.

32 ವರ್ಷದ ವೃಂದಾ ಮುಂಬೈನಲ್ಲಿ ಕ್ರಿಕೆಟ್ ಆಡುತ್ತ ಬೆಳೆದವರು. ಅಲ್ಲಿಯ ಪಂದ್ಯಗಳಲ್ಲಿಯೇ ಅಂಪೈರಿಂಗ್ ಆರಂಭಿಸಿದರು. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ 36 ವರ್ಷದ ಜನನಿ ಅವರು ಅಂಪೈರಿಂಗ್‌ಗಾಗಿ ಉತ್ತಮ ಸಂಬಳ ಪಡೆಯುತ್ತಿದ್ದ ಉದ್ಯೋಗವನ್ನು ಬಿಟ್ಟಿದ್ದಾರೆ. 43 ವರ್ಷದ ಗಾಯತ್ರಿ ಅವರು 2019ರಲ್ಲಿ ಬಿಸಿಸಿಐ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಂಪೈರಿಂಗ್‌ ಮಾಡುತ್ತಿದ್ದಾರೆ.

ಟೂರ್ನಿಯ ಕೆಲವು ಪಂದ್ಯಗಳಲ್ಲಿ ಅವರಿಗೆ ಕಾರ್ಯನಿರ್ವಹಿಸುವ ಅವಕಾಶ ಸಿಗುವ ಸಾಧ್ಯತೆ ಇದೆ.

‘ಪುರುಷರ ಕ್ರಿಕೆಟ್ ಪಂದ್ಯಗಳಲ್ಲಿ ಮಹಿಳೆಯರು ಅಂಪೈರಿಂಗ್ ಮಾಡುವುದು ಸ್ವಲ್ಪ ಕಠಿಣ ಸವಾಲಾಗಲಿದೆ. ರಣಜಿ ಪಂದ್ಯಗಳಲ್ಲಿ ಸ್ಪರ್ಧೆ ಉನ್ನತಮಟ್ಟದ್ದಾಗಿರುತ್ತದೆ. ಅಲ್ಲದೇ ಪ್ರತಿಯೊಂದು ನಿರ್ಣಯವೂ ಮಹತ್ವದ್ದಾಗಿರುತ್ತದೆ. ಆದ್ದರಿಂದ ಮೃದು ಧೋರಣೆ ಸಲ್ಲದು. ಆಟಗಾರರೊಂದಿಗೆ ಸಮರ್ಥವಾಗಿ ಸಂವಹನ ನಡೆಸುವ ಕಲೆ ಮುಖ್ಯ. ಮೂವರು ಮಹಿಳಾ ಅಂಪೈರ್‌ಗಳೂ ಇಲ್ಲಿಯವರೆಗೆ ತಮಗೆ ಸಿಕ್ಕ ಅವಕಾಶಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಅನುಭವ ಇದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಪುರುಷರ ಪಂದ್ಯಗಳಲ್ಲಿ ಮಹಿಳಾ ಅಂಪೈರ್‌ಗಳು ಕಾರ್ಯನಿರ್ವಹಿಸಿದ್ದಾರೆ. ಬಿಸಿಸಿಐನಲ್ಲಿ 150 ನೋಂದಾಯಿತ ಅಂಪೈರ್‌ಗಳಲ್ಲಿ ಮೂವರು ಮಹಿಳೆಯರಿದ್ದಾರೆ.

‘ಅಂಪೈರಿಂಗ್‌ನಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿಸುವ ಗುರಿ ಇದೆ. ಅದರಲ್ಲೂ ಪುರುಷರ ಕ್ರಿಕೆಟ್‌ನಲ್ಲಿಯೂ ಮಹಿಳಾ ಅಂಪೈರ್‌ಗಳು ಕಾರ್ಯನಿರ್ವಹಿಸುವ ಅವಕಾಶಗಳನ್ನು ಹೆಚ್ಚಿಸುವುದು ನಮ್ಮ ಉದ್ದೇಶ’ ಎಂದೂ ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

ಈ ಬಾರಿಯ ಟೂರ್ನಿಯು ಡಿಸೆಂಬರ್ 13ರಿಂದ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT