ಬುಧವಾರ, ಅಕ್ಟೋಬರ್ 23, 2019
23 °C

ಭಾರತ ಕ್ರಿಕೆಟ್ ತಂಡದಲ್ಲಿ ಫಿಟ್ ನೆಸ್‌ಗೆ ಪ್ರಾಮುಖ್ಯತೆ

Published:
Updated:
Prajavani

ಮೂವತ್ತೇಳು ದಿನಗಳ ಹಿಂದಿನ ಮಾತು. ವೆಸ್ಟ್‌ ಇಂಡೀಸ್‌ನ ಸಬೀನಾ ಪಾರ್ಕ್‌ನಲ್ಲಿ ರಾಹುಲ್ ಮತ್ತು ಮಯಂಕ್ ಅಗರವಾಲ್ ಮೊದಲ ಇನಿಂಗ್ಸ್‌ನಲ್ಲಿ ಕ್ರೀಸ್‌ಗೆ ಬಂದಿದ್ದರು. ಅಂದು ಮಯಂಕ್ ತಮ್ಮ ಎಂದಿನ ಏಕಾಗ್ರತೆ, ಶಾಂತಚಿತ್ತತೆಯಿಂದ ಅರ್ಧಶತಕ ಬಾರಿಸಿದ್ದರು. ಆದರೆ ರಾಹುಲ್ ಮತ್ತೊಮ್ಮೆ ಏಕಾಗ್ರತೆ ಕೊರತೆ ಅನುಭವಿಸಿ ಕೇವಲ 13 ರನ್‌ಗಳಿಗೆ ಔಟಾಗಿದ್ದರು. ಎರಡನೇ ಇನಿಂಗ್ಸ್‌ನಲ್ಲಿಯೂ ಆರು ರನ್ ಮಾತ್ರ ಗಳಿಸಿದ್ದರು. ಅಲ್ಲಿಗೆ ಅವರ ಟೆಸ್ಟ್ ತಂಡದ ಸ್ಥಾನಕ್ಕೆ ಕುತ್ತು ಬಂದಿತು.

ಅದಕ್ಕೂ ಮುನ್ನ ಅವರು ತಮಗೆ ಲಭಿಸಿದ ಅವಕಾಶಗಳಲ್ಲಿ ಫಾರ್ಮ್‌ ಕೊರತೆ ಅನುಭವಿಸಿದ್ದರು. ಅವರ ಹಳೆಯ ದಾಖಲೆ ಗಳಿಂದಾಗಿ ಆ ಅವಕಾಶಗಳು ಸಿಕ್ಕಿದ್ದವು. ಆದರೆ, ನಿರೀಕ್ಷೆಗೆ ತಕ್ಕಂತೆ ಆಡದೇ ಸ್ಥಾನ ಕಳೆದುಕೊಂಡರು. ತವರಿನಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ನಲ್ಲಿ ಮಯಂಕ್ ಜೊತೆಗೆ ಇನಿಂಗ್ಸ್‌ ಆರಂಭಿಸುವವರು ಯಾರು ಎಂಬ ಪ್ರಶ್ನೆ ಕಾಡುವ ಕ್ಲಿಷ್ಟ ಸಮಯದಲ್ಲೂ ಆಯ್ಕೆ ಸಮಿತಿ ರಾಹುಲ್‌ಗೆ ಅರ್ಧಚಂದ್ರ ನೀಡಿತ್ತು.

ಅನುಭವಿ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರನ್ನೂ ಪರಿಗಣಿಸಲಿಲ್ಲ. ದೇಶಿ ಕ್ರಿಕೆಟ್‌ನಲ್ಲಿ ರನ್‌ ಪೇರಿಸಿ ಮತ್ತೆ ಭಾರತ ತಂಡದ ಕದ ತಟ್ಟುವ ಸವಾಲು ಶಿಖರ್ ಮತ್ತು ರಾಹುಲ್ ಅವರ ಮುಂದಿದೆ. ಇನ್ನೊಂದೆಡೆ ಪೃಥ್ವಿ ಶಾ ಎಂಬ ಪ್ರತಿಭಾವಂತ ಹುಡುಗ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಅಮಾನತು ಶಿಕ್ಷೆ ಅನುಭವಿಸುತ್ತಿರುವುದು ಕೂಡ ತೊಡಕಾಯಿತು. ಆದ್ದರಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಅಷ್ಟೇನೂ ಉತ್ತಮ ದಾಖಲೆಗಳು ಇಲ್ಲದ ರೋಹಿತ್ ಶರ್ಮಾ ಅವರನ್ನು ಇನಿಂಗ್ಸ್‌ ಆರಂಭಿಸಲು ಆಯ್ಕೆ ಮಾಡಲಾಯಿತು. ಮುಂಬೈಕರ್ ಈ ಟೆಸ್ಟ್‌ನಲ್ಲಿ ಪಾಸ್ ಆಗಿದ್ದಾರೆ. ಇದರಿಂದಾಗಿ ಉಳಿದವರು ತಂಡಕ್ಕೆ ಮರಳುವುದು ಮತ್ತಷ್ಟು ಜಟೀಲವಾಗಿದೆ. ಆದರೆ, ರೋಹಿತ್ ಮತ್ತು ಮಯಂಕ್ ಕೂಡ ಅಲ್ಪತೃಪ್ತರಾಗಿ ‘ಇನ್ನು ನಾವು ಸುರಕ್ಷಿತ. ಬಹಳಷ್ಟು ಅವಕಾಶ ಸಿಗಬಹುದು’ ಎಂಬ ಭಾವನೆ ತಾಳುವಂತೆಯೇ ಇಲ್ಲ. ಏಕೆಂದರೆ, ಇವತ್ತಿನ ಭಾರತ ಕ್ರಿಕೆಟ್‌ ತಂಡದಲ್ಲಿ ನಿರಂತರ ಸಾಧಕರಿಗೆ ಮಾತ್ರ ಸ್ಥಳ ಎಂಬ ಪರಿಸ್ಥಿತಿ ಇದೆ. ಸೀನಿಯರ್ ಇರಲಿ; ಜೂನಿಯರ್ ಇರಲಿ ಪೈಪೋಟಿ ಎಲ್ಲರಿಗೂ ಸರಿಸಮಾನವಾಗಿಯೇ ಇದೆ. ಆದ್ದರಿಂದ  ಇವತ್ತು ಶತಕ, ದ್ವಿಶತಕ ಹೊಡೆದವರು ಮುಂದಿನ ಪಂದ್ಯಗಳಲ್ಲಿಯೂ ಉತ್ತಮವಾಗಿ ಆಡುವ ಒತ್ತಡ ಇದ್ದೇ ಇದೆ.

ಇದಕ್ಕೆ ಕಾರಣ; ಜೂನಿಯರ್ ಕ್ರಿಕೆಟ್‌ನಿಂದ ಬರುತ್ತಿರುವ ಪ್ರತಿಭಾವಂತ  ಆಟಗಾರರ ದಂಡು. ಇದು ಕೇವಲ ಆರಂಭಿಕ ಬ್ಯಾಟ್ಸ್‌ಮನ್, ವಿಕೆಟ್‌ಕೀಪರ್ ಅಥವಾ ಬೌಲರ್‌ಗಳಿಗೆ ಸೀಮಿತ ವಾಗಿಲ್ಲ. ನಾಯಕತ್ವ ವಹಿಸಿದವರಿಗೂ ಅದು ಅನ್ವಯಿಸುತ್ತದೆ.

ಟ್ವೆಂಟಿ–20 ವಿಶ್ವಕಪ್‌ಗೆ ಇನ್ನೊಂದು ವರ್ಷ ಬಾಕಿಯಿರುವಾಗ ತಂಡ ಕಟ್ಟುವ ಕಾರ್ಯವೂ ಆರಂಭವಾಗಿದೆ. ಅದಕ್ಕಾಗಿ ಯುವ ವಿಕೆಟ್‌ಕೀಪರ್‌ಗಳನ್ನು ಸಿದ್ಧಗೊಳಿಸಲು ಮಹೇಂದ್ರಸಿಂಗ್ ಧೋನಿ ಅವರಂತಹ ಅನುಭವಿಯನ್ನೇ ತಂಡದಿಂದ ಕೈಬಿಡಲಾಗಿದೆ. ರಿಷಭ್ ಪಂತ್ ಅವರಿಗೆ ಅವಕಾಶ ನೀಡಲಾಯಿತು. ಅವರು ಕೂಡ ನಿರೀಕ್ಷೆ ಈಡೇರಿಸಲಿಲ್ಲ. ಹೋದ ವರ್ಷ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿಗಳಲ್ಲಿ ಅವರು ಮಿಂಚಿದ್ದರು. ಆದರೆ, ಅದು ಅವರಿಗೆ ದೀರ್ಘಕಾಲದ ರಕ್ಷಾಕವಚವಾಗಿ ಉಳಿಯಲಿಲ್ಲ. ಈ ಸರಣಿಯಲ್ಲಿ ಅವರು ತಂಡದಲ್ಲಿದ್ದಾರೆ. ಆದರೆ ಹನ್ನೊಂದರ ಬಳಗದಲ್ಲಿ ಕಣಕ್ಕಿಳಿಯಲು ಅವಕಾಶ ಪಡೆದಿಲ್ಲ. ಬಂಗಾಳದ ವೃದ್ಧಿಮಾನ್ ಸಹಾ ಅವಕಾಶ ಗಿಟ್ಟಿಸಿದ್ದಾರೆ.

ಆದರೆ ಸಹಾ ಕೂಡ ನಿರುಮ್ಮಳರಾಗುವಂತಿಲ್ಲ. ಏಕೆಂದರೆ  ಈ ಹಿಂದೆ ಅವರು ಗಾಯಗೊಂಡು ಹೊರಗುಳಿದ ಸಂದರ್ಭದಲ್ಲಿಯೇ ರಿಷಬ್ ಸ್ಥಾನ ಪಡೆದಿದ್ದು. ದೆಹಲಿ ಆಟಗಾರ ಉತ್ತಮವಾಗಿ ಆಡಿದ್ದರಿಂದ ಸಹಾ ಅವರು ಗಾಯದಿಂದ ಚೇತರಿಸಿಕೊಂಡರೂ ಇಲ್ಲಿಯವರೆಗೂ ಕಾಯಬೇಕಾಯಿತು. ಒಂದೊಮ್ಮೆ ಇವರಿಬ್ಬರೂ ವಿಫಲರಾದರೆ, ಹಿರಿಯ ಆಟಗಾರ ಪಾರ್ಥಿವ್ ಪಟೇಲ್ ಮತ್ತು ಯುವ ಆಟಗಾರ ಇಶಾನ್ ಕಿಶನ್ ಸರದಿಯಲ್ಲಿದ್ದಾರೆ. ಇವರೂ ಹೊಂದಾಣಿಕೆಯಾಗದಿದ್ದರೆ ಮತ್ತೆ ಮಹೇಂದ್ರಸಿಂಗ್ ಧೋನಿಯೇ ಮೊದಲ ಆಯ್ಕೆಯಾಗುವುದರಲ್ಲಿ ಅನುಮಾನವೇ ಇಲ್ಲ.

ದಶಕದಲ್ಲಾದ ಮಹತ್ವದ ಬದಲಾವಣೆ

ಭಾರತ ತಂಡದಲ್ಲಿ ಹಿಂದೆಂದೂ ಇಂತಹ ಪರಿಸ್ಥಿತಿ ಇರಲಿಲ್ಲ. ಬಹಳಷ್ಟು ಆಟಗಾರರು ಒಂದೆರಡು ಪಂದ್ಯದಲ್ಲಿ ಉತ್ತಮವಾಗಿ ಆಡಿದ ಆಧಾರದಲ್ಲಿಯೇ ಬಹಳಷ್ಟು ಅವಕಾಶಗಳನ್ನು ಉಳಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಆದರೆ ಕಳೆದ ಒಂದು ದಶಕದಲ್ಲಿ ನಿಧಾನವಾಗಿ ಬೆಳೆದು ಬಂದ ಟ್ರೆಂಡ್‌ ಈಗ ರಭಸ ಪಡೆದಿದೆ.

ಮಹೇಂದ್ರಸಿಂ‌ಗ್ ಧೋನಿ ನಾಯಕತ್ವ ವಹಿಸಿಕೊಂಡ ಮೇಲೆ ಈ ಟ್ರೆಂಡ್ ಆರಂಭವಾಯಿತು. ಬ್ಯಾಟಿಂಗ್ ಮತ್ತು ಬೌಲಿಂಗ್‌ ಅಷ್ಟೇ ಅಲ್ಲ ಫೀಲ್ಡಿಂಗ್‌ನಲ್ಲಿಯೂ ಫಿಟ್ ಆಗಿದ್ದರೆ ಮಾತ್ರ ತಂಡದಲ್ಲಿ ಸ್ಥಾನ ಎಂಬ ಅಲಿಖಿತ ನಿಯಮ ಜಾರಿಯಾಯಿತು. ಅದರೊಂದಿಗೆ ಫಿಟ್‌ನೆಸ್‌ಗೆ ಹೆಚ್ಚು ಆದ್ಯತೆ ದೊರೆಯತೊಡಗಿತು.

90ರ ದಶಕದಲ್ಲಿ ಕೆಲವು ಖ್ಯಾತನಾಮ ಆಟಗಾರರು ಫಿಟ್‌ನೆಸ್‌ ಮತ್ತು ಫೀಲ್ಡಿಂಗ್ ತಾಲೀಮಿಗೆ ಬರುತ್ತಿರಲಿಲ್ಲ ಎಂಬ ಮಾತು ಕೇಳಿಬಂದಿತ್ತು. ಆಗಿನ ಕೋಚ್ ಗ್ರೆಗ್ ಚಾಪೆಲ್ ಮತ್ತು ಜಾನ್‌ ರೈಟ್ ಕೂಡ ಈ ವಿಷಯದ ಕುರಿತು ಗಮನ ಸೆಳೆದಿದ್ದರು.  ಆದರೆ ಧೋನಿ ಮತ್ತು ವಿರಾಟ್ ಕೊಹ್ಲಿ ಅವರ ಕಾಲದಲ್ಲಿ ಫಿಟ್‌ನೆಸ್‌ಗೆ ಆದ್ಯತೆ ಲಭಿಸಿದೆ. ಸ್ವತಃ ಧೋನಿ ಮತ್ತು ಕೊಹ್ಲಿಯೇ ತಮ್ಮ ಜೂನಿಯರ್‌ ಆಟಗಾರರೊಂದಿಗೆ ಪೈಪೋಟಿ ಮಾಡಬೇಕಾದ ಕಾಲ ಇದಾಗಿದೆ!

ಅಷ್ಟಾಗಿಯೂ ಸ್ಥಾನ ಉಳಿಸಿಕೊಳ್ಳುವುದು ಸುಲಭವಲ್ಲ.  ಕಳೆದ ಒಂದು ವರ್ಷದ ಪುಟಗಳನ್ನೇ ತಿರುವಿ ಹಾಕಿ ನೋಡಿ. ಮುರಳಿ ವಿಜಯ್, ಕರುಣ್ ನಾಯರ್, ಉಮೇಶ್ ಯಾದವ್,  ಮನೀಷ್ ಪಾಂಡೆ, ಆರ್. ಅಶ್ವಿನ್, ದಿನೇಶ್ ಕಾರ್ತಿಕ್ ಸೇರಿದಂತೆ ಹಲವು ಆಟಗಾರರು ಸ್ಥಾನಕ್ಕಾಗಿ ಹೋರಾಟ ಮಾಡುವಂತಾಗಿದೆ.

‘ಟಿ–20 ವಿಶ್ವಕಪ್ ಟೂರ್ನಿಗೆ ಇನ್ನೊಂದು ವರ್ಷ ಉಳಿದಿದೆ. ಅಷ್ಟರಲ್ಲಿ ಯುವ ಆಟಗಾರರು ತಮ್ಮ ಸಾಮರ್ಥ್ಯ ಸಾಬೀತು ಮಾಡಬೇಕು. ಆದರೆ ಅದಕ್ಕಾಗಿ ಅವರಿಗೆ ಸಿಗಲಿರುವುದು 4–5 ಪಂದ್ಯಗಳಷ್ಟೇ’ ಎಂದು ವಿರಾಟ್ ಕೊಹ್ಲಿ ಈಗಾಗಲೇ ಹೇಳಿದ್ದಾರೆ. 

ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಗೂ ಈ ಮಾತು ಅನ್ವಯಿಸಿದರೆ ಅಚ್ಚರಿಯೇನಿಲ್ಲ. ಇದೀಗ ದೇಶಿ ಕ್ರಿಕೆಟ್ ಋತು ಆರಂಭವಾಗಿರುವುದರಿಂದ ಹತ್ತಾರು ಆಟಗಾರರು ಅಬ್ಬರಿಸುತ್ತಿದ್ದಾರೆ.

ಕರ್ನಾಟಕ ತಂಡದಲ್ಲಿಯೇ ರಾಹುಲ್, ಪಾಂಡೆ  ಮತ್ತು ವಿಕೆಟ್‌ಕೀಪಿಂಗ್‌ನಲ್ಲಿ ಬಿ.ಆರ್. ಶರತ್ ಅವರು ಆಯ್ಕೆ ಸಮಿತಿಯ ಗಮನ ಸೆಳೆಯಲು ತಮ್ಮ ಸಾಮರ್ಥ್ಯವನ್ನು ಪಣಕ್ಕೊಡ್ಡಿದ್ದಾರೆ. ಬೇರೆ ಬೇರೆ ತಂಡಗಳಲ್ಲಿಯೂ ಆಟಗಾರರು ಮಿಂಚುತ್ತಿದ್ದಾರೆ. ಇದರಿಂದಾಗಿ ಆಯ್ಕೆ ಸಮಿತಿಯ ಮುಂದೆ ಅವಕಾಶಗಳು ಹೆಚ್ಚಿವೆ. ಉತ್ತಮರಲ್ಲಿಯೇ ಉತ್ತಮರನ್ನು ಆಯ್ಕೆ ಮಾಡುವ ಸವಾಲು ಅವರ ಮುಂದಿದೆ. ಅದರಿಂದಾಗಿ ಅರೆಕ್ಷಣವೂ ಅಲಕ್ಷ್ಯ ತೋರುವ ಸ್ಥಿತಿಯಲ್ಲಿ ಯಾವ ಆಟಗಾರನೂ ಇವತ್ತಿಲ್ಲ. ಯಾಕೆಂದರೆ ಈಗ ಆಡುತ್ತಿರುವಷ್ಟು ಕಾಲ ತಂಡದಲ್ಲಿ ಸ್ಥಾನ. ಇಲ್ಲದಿದ್ದರೆ ಮತ್ತೆ ತವರು ರಾಜ್ಯಕ್ಕೆ ಬಂದು ಆಡಬೇಕು. ಅಲ್ಲಿಯೂ ದೀರ್ಘ ಕಾಲದ ಅವಕಾಶ ಸಿಗುವುದಿಲ್ಲ. ಏಕೆಂದರೆ, ರಾಜ್ಯ ತಂಡಗಳ ಬೆಂಚ್ ಶಕ್ತಿ ಕೂಡ ಈಗ ಅಗಾಧವಾಗಿದೆ.

ಇದನ್ನೂ ಓದಿ: ಭಾರತದ ಕ್ರಿಕೆಟ್ ಚಹರೆ ಬದಲಿಸಿದ ಧೋನಿ: ಐಸಿಸಿ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)