ಬುಧವಾರ, ನವೆಂಬರ್ 20, 2019
27 °C
ಅಶೋಕನಗರ ಠಾಣೆಗೆ ದೂರು

ಮಹಿಳಾ ಕ್ರಿಕೆಟ್‌ನಲ್ಲೂ ಮ್ಯಾಚ್‌ ಫಿಕ್ಸಿಂಗ್‌; ಸಿಸಿಬಿ ತನಿಖೆ

Published:
Updated:

ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದ ಮಹಿಳೆಯರ ಕ್ರಿಕೆಟ್‌ ಪಂದ್ಯಾವಳಿಯಲ್ಲೂ ಮ್ಯಾಚ್‌ ಫಿಕ್ಸಿಂಗ್ ನಡೆಸಲು ಯತ್ನಿಸಿದ್ದ ವಿಷಯವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಬಿಸಿಐ) ಭ್ರಷ್ಟಾಚಾರ ನಿಗ್ರಹ ವಿಭಾಗ ಪತ್ತೆ ಮಾಡಿದ್ದು, ಅದರ ತನಿಖೆ ಹೊಣೆಯನ್ನು ನಗರದ ಸಿಸಿಬಿ ಪೊಲೀಸರಿಗೆ ವಹಿಸಲಾಗಿದೆ.

ಈ ಸಂಬಂಧ ಅಶೋಕನಗರ ಠಾಣೆಗೆ ದೂರು ನೀಡಿರುವ ವಿಭಾಗದ ವ್ಯವಸ್ಥಾಪಕ ಹರದಯಾಳ್‌ ಸಿಂಗ್, ‘ಜಿತೇಂದ್ರ ಕುಮಾರ್, ಡೇವಿಡ್‌ ಎಂಬುವರು ಭಾರತದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಜೊತೆ ಮಾತನಾಡಿ ಮ್ಯಾಚ್‌ ಫಿಕ್ಸಿಂಗ್ ನಡೆಸಲು ಪ್ರಯತ್ನಿಸಿದ್ದರು’ ಎಂದು ಆರೋಪಿಸಿದ್ದಾರೆ.

ದೂರಿನ್ವಯ ಜಿತೇಂದ್ರ ಕುಮಾರ್, ಡೇವಿಡ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ (ಕೆಪಿಎಲ್‌) ನಡೆದಿದೆ ಎನ್ನಲಾದ ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದು, ಈಗ ಹೊಸ ಪ್ರಕರಣವನ್ನೂ ಹಸ್ತಾಂತರಿಸಲಾಗಿದೆ.

‘ಇಂಗ್ಲೆಂಡ್ ತಂಡದ ವಿರುದ್ಧದ ಟೆಸ್ಟ್ ಪಂದ್ಯಕ್ಕಾಗಿ ಆಟಗಾರ್ತಿಯರನ್ನು ಆಯ್ಕೆ ಮಾಡಲು ಸಂದರ್ಶನ ನಡೆಸಲಾಗಿತ್ತು. ಬೆಂಗಳೂರಿನ ಚಾನ್ಸರಿ ಪೆವಿಲಿಯನ್ ಹೋಟೆಲ್‌ನಲ್ಲಿ ನಡೆದ ಸಂದರ್ಶನಕ್ಕೆ ಆಟಗಾರ್ತಿಯೊಬ್ಬರು ಹಾಜರಾಗಿದ್ದರು. ಆದರೆ, ಅವರ ಮೊಣಕಾಲಿಗೆ ಗಾಯದ ಸಮಸ್ಯೆ ಇತ್ತು’ ಎಂದು ಸಿಂಗ್ ದೂರಿನಲ್ಲಿ ತಿಳಿಸಿದ್ದಾರೆ.

ಆಟಗಾರ್ತಿಯನ್ನು ಹೆಚ್ಚಿನ ಸಂದರ್ಶನಕ್ಕಾಗಿ ಜಿತೇಂದ್ರ ಕುಮಾರ್, ಡೇವಿಡ್‌ ಬಳಿ ಕಳುಹಿಸಲಾಗಿತ್ತು. ಸಂದರ್ಶನದ ವೇಳೆಯಲ್ಲೇ ಅವರಿಬ್ಬರು ಮ್ಯಾಚ್‌ ಫಿಕ್ಸಿಂಗ್ ಬಗ್ಗೆ ಆಟಗಾರ್ತಿ ಜೊತೆ ಮಾತನಾಡಿದ್ದರು. ತಮ್ಮ ಮಾತು ಕೇಳಿದರೆ ಹಣ ನೀಡುವುದಾಗಿಯೂ ಆಮಿಷವೊಡ್ಡಿದ್ದರು. ಒಪ್ಪದ ಆಟಗಾರ್ತಿ ಬಿಸಿಸಿಐಗೆ ದೂರು ನೀಡಿದ್ದರು.

‘ದೂರಿನ ತನಿಖೆ ನಡೆಸಿದಾಗ ಆರೋಪಿಗಳ ಕೃತ್ಯದ ಬಗ್ಗೆ ಪುರಾವೆಗಳು ಸಿಕ್ಕಿವೆ. ಅವುಗಳ ಸಮೇತವೇ ದೂರು ನೀಡಲಾಗುತ್ತಿದೆ. ಅವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಹರ್ದಿಯಲ್ ಸಿಂಗ್‌ ದೂರಿನಲ್ಲಿ ಹೇಳಿದ್ದಾರೆ.

ಅಧ್ಯಕ್ಷರಿಂದ ಮಾಹಿತಿ ಸಂಗ್ರಹ: ಪ್ರಕರಣದ ಸಂಬಂಧ ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಅವರು ಬಿಸಿಸಿಐ ಅಧ್ಯಕ್ಷ ಗಂಗೂಲಿ ಅವರಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ. ಕೆಲ ಆಟಗಾರರ ಪಟ್ಟಿಯನ್ನೂ ಸಿದ್ಧಪಡಿಸಿದ್ದು, ಅವರೆಲ್ಲರನ್ನೂ ಸದ್ಯದಲ್ಲೇ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 

ಕೆಪಿಎಲ್ ಪಂದ್ಯಾವಳಿಯಲ್ಲಿ ನಡೆದಿದ್ದ ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣ ಭೇದಿಸಿ ಕೋಚ್ ಹಾಗೂ ಆಟಗಾರರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಈಗ ಅಂತರರಾಷ್ಟ್ರೀಯ ಮಟ್ಟದ ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣ ಪತ್ತೆ ಮಾಡಲು ತನಿಖೆ ಮುಂದುವರಿಸಿದ್ದಾರೆ.

 

ಪ್ರತಿಕ್ರಿಯಿಸಿ (+)