ಶನಿವಾರ, ಸೆಪ್ಟೆಂಬರ್ 26, 2020
22 °C
ಸನ್‌ರೈಸರ್ಸ್ ಹೈದರಾಬಾದ್ ತಂಡದ ಎದುರು ಸೋತ ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಅಭಿಮತ

ಸಿಎಸ್‌ಕೆಯ ಅತ್ಯಂತ ಕಳಪೆ ಆಟವಿದು: ಕೋಚ್‌ ಫ್ಲೆಮಿಂಗ್

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌ (ಪಿಟಿಐ): ‘ಸೋಲು ಸೋಲೇ. ಅದರ ಪರಾಮರ್ಶೆ ಮಾಡುತ್ತ ಕೂರುವುದಿಲ್ಲ. ದೌರ್ಬಲ್ಯಗಳನ್ನು ಗುರುತಿಸಿ ಮುಂದಿನ ಹಾದಿಯಲ್ಲಿ ಸುಗಮವಾಗಿ ಹೆಜ್ಜೆ ಹಾಕಲು ಪ್ರಯತ್ನಿಸುತ್ತೇವೆ...’

ಬುಧವಾರ ರಾತ್ರಿಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಮಣಿದ ಚೆನ್ನೈ ಸೂಪರ್ ಕಿಂಗ್ಸ್‌ನ ಕೋಚ್‌ ಸ್ಟೀಫನ್ ಫ್ಲೆಮಿಂಗ್ ಆಡಿದ ಮಾತುಗಳು ಇವು.

ಇಲ್ಲಿನ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಸೂಪರ್‌ ಕಿಂಗ್ಸ್ ಆರು ವಿಕೆಟ್‌ಗಳಿಂದ ಸೋತಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಸೂಪರ್ ಕಿಂಗ್ಸ್‌ ಐದು ವಿಕೆಟ್‌ಗಳಿಗೆ ಕೇವಲ 132 ರನ್‌ ಗಳಿಸಿತ್ತು. ಫಾಫ್ ಡು ಪ್ಲೆಸಿ (45 ರನ್‌) ಹೊರತುಪಡಿಸಿದರೆ ಇತರ ಯಾರಿಗೂ ನಿರೀಕ್ಷಿತ ಸಾಮರ್ಥ್ಯ ತೋರಲು ಆಗಲಿಲ್ಲ.

ಸುಲಭ ಗುರಿ ಬೆನ್ನತ್ತಿದ ಸನ್‌ರೈಸರ್ಸ್ 16.5 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತ್ತು. ಡೇವಿಡ್ ವಾರ್ನರ್‌ 25 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 50 ರನ್‌ ಗಳಿಸಿದ್ದರು. ಜಾನಿ ಬೇಸ್ಟೊ 44 ಎಸೆತಗಳಲ್ಲಿ 61 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದರು. ಅವರ ಇನಿಂಗ್ಸ್‌ನಲ್ಲಿ ತಲಾ ಮೂರು ಸಿಕ್ಸರ್ ಮತ್ತು ಬೌಂಡರಿಗಳು ಇದ್ದವು.

‘ಇದೇ ಮೊದಲ ಬಾರಿ ತಂಡ ಇಷ್ಟು ಕಳಪೆ ಆಟ ಆಡಿತ್ತು. ಇದರಿಂದ ಬೇಸರಗೊಂಡಿರುವ ಆಟಗಾರರು ಮುಂದಿನ ಪಂದ್ಯದಲ್ಲಿ ಹೇಗೆ ಸ್ಪಂದಿಸುತ್ತಾರೆ ಎಂಬುದು ಕುತೂಹಲಕಾರಿ ಅಂಶವಾಗಿದೆ. ಕೆಲವು ವಿಭಾಗಗಳಲ್ಲಿ ತಂಡ ಸುಧಾರಣೆ ಕಾಣಬೇಕಾಗಿದೆ. ಆದರೆ ತರಬೇತಿ ವಿಧಾನದಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ’ ಎಂದು ಫ್ಲೆಮಿಂಗ್ ಹೇಳಿದರು.

‘ಆರ್‌ಸಿಬಿ ವಿರುದ್ಧ ಇದೇ 21ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಹೆಚ್ಚು ಜಾಗರೂಕತೆಯಿಂದ ಕಣಕ್ಕೆ ಇಳಿಯಬೇಕಾಗಿದೆ. ಎದುರಾಳಿ ತಂಡದ ಫಲಿತಾಂಶಗಳನ್ನು ನೋಡಿ ತಂತ್ರಗಳನ್ನು ರೂಪಿಸಲು ಸಾಧ್ಯವಿಲ್ಲ. ಪ್ಲೇ ಆಫ್ ಹಾದಿಯಲ್ಲಿ ಎಲ್ಲ ಪಂದ್ಯಗಳೂ ಮುಖ್ಯ ಆಗಿರುವುದರಿಂದ ಎಚ್ಚರಿಕೆಯ ಹೆಜ್ಜೆ ಇರಿಸಬೇಕಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು