ಲಂಡನ್: ಇಂಗ್ಲೆಂಡ್ ತಂಡದ ಆಕರ್ಷಕ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದ ಗ್ರಹಾಂ ಥೋರ್ಪ್ (55) ಅವರು ಗಂಭೀರ ಅನಾರೋಗ್ಯದಿಂದ ಸೋಮವಾರ ನಿಧನರಾದರು ಎಂದು ಇಂಗ್ಲೆಂಡ್ ಮತ್ತು ಕೌಂಟಿ ಮಂಡಳಿ (ಇಸಿಬಿ) ಪ್ರಕಟಿಸಿದೆ.
ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟರ್ ಆಗಿದ್ದ ಥೋರ್ಪ್ ಅವರು 2022ರಲ್ಲಿ ಅಫ್ಗಾನಿಸ್ತಾನ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ಆದರೆ ಅನಾರೋಗ್ಯದ ಪರಿಣಾಮ ಆ ಹುದ್ದೆ ವಹಿಸಲಾಗಲಿಲ್ಲ. ಅವರ ಕಾಯಿಲೆಯ ಸ್ವರೂಪವನ್ನು ಬಹಿರಂಗಪಡಿಸಲಾಗಿಲ್ಲ. ಅವರಿಗೆ ಪತ್ನಿ, ನಾಲ್ವರು ಮಕ್ಕಳಿದ್ದಾರೆ.
ಎಡಗೈ ಬ್ಯಾಟರ್ ಥೋರ್ಪ್ ಅವರು 1993ರಲ್ಲಿ ಆ್ಯಷಸ್ ಶತಕದೊಡನೆ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. 2000–01ರಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸರಣಿಗಳನ್ನು ಸತತವಾಗಿ ಗೆಲ್ಲುವಲ್ಲಿ ಥೋರ್ಪ್ ಅವರ ಪಾತ್ರ ಪ್ರಮುಖವಾಗಿತ್ತು.
1993–2005 ಅವಧಿಯಲ್ಲಿ ಬರೋಬ್ಬರಿ 100 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 6,744 ರನ್ ಗಳಿಸಿದ್ದು 44.66ರ ಸರಾಸರಿ ಹೊಂದಿದ್ದಾರೆ. ಇದರಲ್ಲಿ 16 ಶತಕ, 39 ಅರ್ಧ ಶತಕಗಳು ಒಳಗೊಂಡಿವೆ.
82 ಏಕದಿನ ಪಂದ್ಯಗಳಲ್ಲಿ 37.18 ಸರಾಸರಿಯಲ್ಲಿ 2830 ರನ್ ಕಲೆಹಾಕಿದ್ದಾರೆ. ಇದರಲ್ಲಿ 21 ಅರ್ಧಶತಕಗಳಿವೆ.
ಕೌಂಟಿ ಕ್ರಿಕೆಟ್‌ನಲ್ಲಿ ಅವರು ಸರ್ರೆ ತಂಡಕ್ಕೆ 17 ವರ್ಷ ಆಡಿದ್ದು, 20,000ಕ್ಕೂ ಅಧಿಕ ರನ್ ಗಳಿಸಿದ್ದಾರೆ.
ಕ್ರಿಕೆಟ್ ಬದುಕಿನಿಂದ ನಿವೃತ್ತರಾದ ಮೇಲೆ ಅವರು ತರಬೇತಿಗೆ ಇಳಿದರು. ನ್ಯೂಸೌತ್ ವೇಲ್ಸ್ ಕೋಚ್ ಆಗಿದ್ದರು. 2010ರಲ್ಲಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದರು. ಟ್ರೇವರ್ ಬೇಲಿಸ್ ಕೋಚ್ ಆಗಿದ್ದಾಗ ಅವರು ಅಸಿಸ್ಟೆಂಟ್ ಕೋಚ್ ಆಗಿದ್ದರು. ಆದರೆ 2021–22ರ ಆ್ಯಷಸ್ ಪ್ರವಾಸದಲ್ಲಿ 0–4 ವೈಟ್‌ವಾಷ್ ನಂತರ ಅವರನ್ನು ಕೈಬಿಡಲಾಯಿತು.
ಆಡಿದ ಪಂದ್ಯಗಳು; ರನ್‌ಗಳು; ಶತಕ; ಅರ್ಧ ಶತಕ
ಟೆಸ್ಟ್; 100; 6744; 16; 39
ಏಕದಿನ; 82; 2830; 0; 21
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.