ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ದಿನಗಳ ಟೆಸ್ಟ್‌ | ಪ್ರತಿಕ್ರಿಯಿಸಲು ಇದು ಸಕಾಲವಲ್ಲ: ಸೌರವ್‌ ಗಂಗೂಲಿ

ಬಿಸಿಸಿಐ ಅಧ್ಯಕ್ಷ ಹೇಳಿಕೆ
Last Updated 31 ಡಿಸೆಂಬರ್ 2019, 17:00 IST
ಅಕ್ಷರ ಗಾತ್ರ

ಕೋಲ್ಕತ್ತ: ‘ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಜಾರಿಗೆ ತರಲು ಉದ್ದೇಶಿಸಿರುವ ನಾಲ್ಕು ದಿನಗಳ ಟೆಸ್ಟ್‌ ಯೋಜನೆ ಬಗ್ಗೆ ಪ್ರತಿಕ್ರಿಯಿಸಲು ಇದು ಸಕಾಲವಲ್ಲ’ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ.

ಇಲ್ಲಿನ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಸೋಮವಾರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಐಸಿಸಿಯ ಪ್ರಸ್ತಾವನೆಯ ಬಗ್ಗೆ ಮಾಹಿತಿ ಇಲ್ಲ. ಅದರ ಬಗ್ಗೆ ಸರಿಯಾಗಿ ತಿಳಿದುಕೊಂಡು ನಂತರ ಮಾತನಾಡುತ್ತೇನೆ’ ಎಂದರು.

ಟೆಸ್ಟ್‌ ಚಾಂಪಿಯನ್‌ಷಿಪ್‌ನ ಭಾಗವಾಗಿ 2023ರಿಂದ 2031ರ ಅವಧಿಯಲ್ಲಿ ನಾಲ್ಕು ದಿನಗಳ ಟೆಸ್ಟ್‌ ಪಂದ್ಯಗಳನ್ನು ಆಯೋಜಿಸಲು ಚಿಂತಿನೆ ನಡೆಸುತ್ತಿರುವುದಾಗಿ ಭಾನುವಾರ ಐಸಿಸಿ ಹೇಳಿತ್ತು.

ಪಂದ್ಯಗಳ ಆಯೋಜನೆಯ ವೆಚ್ಚ, ಆಟಗಾರರ ಮೇಲಿನ ಹೊರೆ ಕಡಿಮೆ ಮಾಡುವುದು ಹಾಗೂ ಟೆಸ್ಟ್‌ನತ್ತ ಹೆಚ್ಚು ಅಭಿಮಾನಿಗಳನ್ನು ಸೆಳೆಯುವ ಉದ್ದೇಶಗಳಿಂದ ಈ ತೀರ್ಮಾನ ಕೈಗೊಳ್ಳಲು ನಿರ್ಧರಿಸಿರುವುದಾಗಿಯೂ ಐಸಿಸಿ ತಿಳಿಸಿತ್ತು.

ಹೊಸ ಪ್ರಸ್ತಾವನೆಗೆ ಈ ವರ್ಷ ಐಸಿಸಿ ಕ್ರಿಕೆಟ್‌ ಸಮಿತಿ ಅನುಮೋದನೆ ನೀಡುವ ನಿರೀಕ್ಷೆ ಇದೆ. ಐಸಿಸಿಯನ್ನು ಪ್ರತಿನಿಧಿಸುವ ವಿವಿಧ ಕ್ರಿಕೆಟ್‌ ಮಂಡಳಿಗಳ ಪ್ರತಿನಿಧಿಗಳು ಯೋಜನೆಯ ಪರ ಮತ ಚಲಾಯಿಸುವ ಸಾಧ್ಯತೆ ಇದೆ.

ಭಾರತದಲ್ಲಿ ಟೆಸ್ಟ್‌ ಪಂದ್ಯಕ್ಕೆ ಆತಿಥ್ಯ ವಹಿಸುವ ರಾಜ್ಯ ಸಂಸ್ಥೆಗಳಿಗೆ ಬಿಸಿಸಿಐ ದಿನದ ಲೆಕ್ಕದಲ್ಲಿ ಪಂದ್ಯದ ವೆಚ್ಚವನ್ನು ಸಂದಾಯ ಮಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಈ ವೆಚ್ಚ ಅಧಿಕವಾಗಿದೆ ಎಂದು ಹೇಳಲಾಗಿದೆ.

2015ರಿಂದ 2023ರ ಅವಧಿಯಲ್ಲಿ ಒಟ್ಟು 335 ಟೆಸ್ಟ್‌ ಪಂದ್ಯಗಳು ನಡೆದಿವೆ. ಒಂದೊಮ್ಮೆ ಪಂದ್ಯಗಳ ಅವಧಿ ಕಡಿತಗೊಳಿಸಿದ್ದರೆ 335 ದಿನಗಳನ್ನು ಉಳಿಕೆಯಾಗುತ್ತಿತ್ತು ಎನ್ನಲಾಗಿದೆ.

ಇದು ಮೊದಲಲ್ಲ: ನಾಲ್ಕು ದಿನಗಳ ಟೆಸ್ಟ್‌, ಹೊಸ ಚಿಂತನೆಯೇನಲ್ಲ. 2019ರ ಆರಂಭದಲ್ಲಿ ಇಂಗ್ಲೆಂಡ್‌ ಮತ್ತು ಐರ್ಲೆಂಡ್‌ ತಂಡಗಳು ನಾಲ್ಕು ದಿನಗಳ ಟೆಸ್ಟ್‌ ಆಡಿದ್ದವು. 2017ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ನಡುವೆಯೂ ಪಂದ್ಯ ಆಯೋಜನೆಯಾಗಿತ್ತು.

ಗಂಭೀರ ಚಿಂತನೆ ನಡೆಯಲಿ: ನಾಲ್ಕು ದಿನಗಳ ಟೆಸ್ಟ್‌ ಆಯೋಜಿಸುವ ಬಗ್ಗೆ ಗಂಭೀರ ಚಿಂತನೆ ನಡೆಯಬೇಕಿದೆ. ಈ ಯೋಜನೆ ಜಾರಿಯಾದರೆ ಏನೆಲ್ಲಾ ಅನುಕೂಲಗಳು ಆಗಲಿವೆ ಎಂಬುದನ್ನೂ ಎಲ್ಲರೂ ಮನಗಾಣಬೇಕಿದೆ’ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ (ಸಿಎ) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೆವಿನ್‌ ರಾಬರ್ಟ್ಸ್‌ ಹೇಳಿದ್ದಾರೆ.

‘ಇದು ಸುಲಭದ ಕಾರ್ಯವಂತೂ ಅಲ್ಲ. ಐಸಿಸಿಯ ಎಲ್ಲಾ ಸದಸ್ಯ ರಾಷ್ಟ್ರಗಳು ಈ ವಿಚಾರದಲ್ಲಿ ಕೈಜೋಡಿಸಿ ಒಮ್ಮತದ ನಿರ್ಧಾರಕ್ಕೆ ಬರಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಎಲ್ಲಾ ಟೆಸ್ಟ್‌ ಪಂದ್ಯಗಳ ಫಲಿತಾಂಶಗಳು ಐದನೆ ದಿನವೇ ನಿರ್ಧರಿತವಾಗುತ್ತವೆ. ಹೀಗಾಗಿ ಈಗಿರುವ ಮಾದರಿಯನ್ನೇ ಮುಂದುವರಿಸುವುದು ಸೂಕ್ತ’ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಟಿಮ್‌ ಪೇನ್‌ ಅಭಿಪ್ರಾಯಪಟ್ಟಿದ್ದಾರೆ.

‘ಆಟಗಾರರ ದೈಹಿಕ ಮತ್ತು ಮಾನಸಿಕ ಕ್ಷಮತೆಯನ್ನು ಒರೆಗೆ ಹಚ್ಚಲು ಟೆಸ್ಟ್‌ ಅತ್ಯುತ್ತಮ ವೇದಿಕೆ. ಆಟಗಾರರಿಗೆ ತಾಳ್ಮೆಯ ಪಾಠ ಹೇಳಿಕೊಡುವ ಟೆಸ್ಟ್‌, ಇತರ ಮಾದರಿಗಳಿಗಿಂತಲೂ ಭಿನ್ನ. ಅದನ್ನು ಹಾಗೇ ಇರಲು ಬಿಡಬೇಕು’ ಎಂದಿದ್ದಾರೆ.

ಇಸಿಬಿ ಬೆಂಬಲ
ಲಂಡನ್‌ (ಪಿಟಿಐ):
ಟೆಸ್ಟ್‌ ಪಂದ್ಯವನ್ನು ನಾಲ್ಕು ದಿನಗಳಿಗೆ ಕಡಿತಗೊಳಿಸುವ ಐಸಿಸಿಯ ಪ್ರಸ್ತಾವವನ್ನು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಸ್ವಾಗತಿಸಿದೆ.

‘ಐಸಿಸಿಯ ಈ ಯೋಜನೆಯಿಂದ ಆಟಗಾರರ ಮೇಲಿನ ಹೊರೆ ಕಡಿಮೆಯಾಗಲಿದೆ. ಟೆಸ್ಟ್‌ನತ್ತ ಪ್ರೇಕ್ಷಕರನ್ನು ಸೆಳೆಯಲೂ ಇದು ನೆರವಾಗಲಿದೆ’ ಎಂದು ಇಸಿಬಿ ವಕ್ತಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT