ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣಪ್ರಮಾಣದ ಮಹಿಳಾ ಐಪಿಎಲ್‌ನಿಂದ ಭಾರತಕ್ಕೆ ಒಳ್ಳೆಯ ಹೆಸರು: ಜೂಲನ್ ಗೋಸ್ವಾಮಿ

Last Updated 9 ಸೆಪ್ಟೆಂಬರ್ 2020, 14:54 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯರಿಗಾಗಿ ಪೂರ್ಣಪ್ರಮಾಣದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ನಡೆದರೆ ಭಾರತದ ವರ್ಚಸ್ಸು ಉತ್ತಮವಾಗುತ್ತದೆ ಎಂದು ಭಾರತ ತಂಡದ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

‘ಯುವ ಕ್ರಿಕೆಟ್ ಆಟಗಾರ್ತಿಯರಿಗೆ ಮತ್ತು ದೇಶದ ಕ್ರಿಕೆಟ್‌ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಮಹಿಳೆಯರ ಐಪಿಎಲ್ ಟೂರ್ನಿ ಇರಬೇಕು. ಬೇರೆ ಬೇರೆ ದೇಶಗಳ ಆಟಗಾರ್ತಿಯರೊಂದಿಗೆ ಇಲ್ಲಿಯವರು ಬೆರೆಯುವ ಅವಕಾಶ ದೊರೆಯುತ್ತದೆ. ಅದರಿಂದಾಗಿ ನಮ್ಮ ಆಟಗಾರ್ತಿಯ ಮನೋಭಾವ ಯೋಚನಾಲಹರಿ ಮತ್ತು ಕೌಶಲಗಳ ಸುಧಾರಣೆಯಾಗುತ್ತದೆ’ ಎಂದು ‘ಸ್ಪೋರ್ಟ್ಸ್‌ಟೈಗರ್ ಆಫ್‌ ದಿ ಫೀಲ್ಡ್’ ಕಾರ್ಯಕ್ರಮದಲ್ಲಿ ಜೂಲನ್ ಹೇಳಿದರು.

‘ವೃತ್ತಿಪರ ಕ್ರೀಡಾಪಟುವು ತಮ್ಮ ವಯಸ್ಸಿನ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆಸಕ್ತಿ, ಆಟದ ಮೇಲಿನ ಪ್ರೀತಿ ಮತ್ತು ಪರಿಶ್ರಮದ ಅಭ್ಯಾಸಕ್ಕೆ ಒತ್ತು ನೀಡುತ್ತಾರೆ. ಎಷ್ಟು ಸಾಧ್ಯವೋ ಅಷ್ಟು ಆಟದಂಗಳದಲ್ಲಿ ಇರುವ ಗುರಿ ಇರುತ್ತದೆ. ಹೆಚ್ಚು ಕಾಲ ಆಡುವ ಸಾಮರ್ಥ್ಯ ಬೆಳೆಸಿಕೊಂಡಷ್ಟು ಸಂತೃಪ್ತಿ ಸಿಗುತ್ತದೆ’ ಎಂದು 37 ವರ್ಷದ ಜೂನಲ್ ಹೇಳಿದರು. ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಅವರ ಹೆಸರಿನಲ್ಲಿದೆ.

ಭಾರತ ಮಹಿಳಾ ತಂಡವು 2017ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಸೋತಿತ್ತು.

ಆ ಪಂದ್ಯದ ಕುರಿತು ಮಾತನಾಡಿದ ಜೂಲನ್, ‘ಫೈನಲ್ ತಲುಪಿದ್ದು ಸಾಧನೆ. ಅಂದು ಕೊನೆಯ ಹತ್ತು ಓವರ್‌ಗಳಲ್ಲಿ ಫಲಿತಾಂಶ ನಿರ್ಧಾರವಾಯಿತು. ನಮ್ಮ ಪ್ರಯತ್ನವೂ ಉತ್ತಮವಾಗಿತ್ತು. ಆದರೆ ಇಂಗ್ಲೆಂಡ್ ತಂಡದ ಬೌಲರ್‌ಗಳು ಕೊನೆಯ ಹಂತದ ಓವರ್‌ಗಳಲ್ಲಿ ಹಾಕಿದ ಒತ್ತಡವನ್ನು ನಿಭಾಯಿಸುವಲ್ಲಿ ನಾವು ಎಡವಿದೆವು’ ಎಂದರು.

‘2017ರಲ್ಲಿ ನಾವು ಪ್ರಶಸ್ತಿ ಗೆಲ್ಲದೇ ಇರಬಹುದು. ಆದರೆ, ಭಾರತದ ಮಹಿಳಾ ಕ್ರಿಕೆಟ್‌ನಲ್ಲಿ ಕ್ರಾಂತಿ ಮೂಡಲು ಕಾರಣವಾದ ಟೂರ್ನಿ ಅದು. ದೇಶದಲ್ಲಿ ಬಾಲಕಿಯರೂ ಕ್ರಿಕೆಟ್‌ನತ್ತ ಹೆಚ್ಚು ಒಲವು ತೋರಲು ಚಾಲನೆ ಸಿಕ್ಕಿತು. ಕಳೆದ ಮೂರು ವರ್ಷಗಳಲ್ಲಿ ನಮ್ಮ ತಂಡದ ಸಾಧನೆಯನ್ನು ಅವಲೋಕಿಸಿರಿ. ಸ್ಥಿರಪ್ರದರ್ಶನ ನೀಡುತ್ತ ಬಂದಿದೆ. ಏಕದಿನ ಮತ್ತು ಟಿ20 ವಿಶ್ವಕಪ್ ಟೂರ್ನಿಗಳ ಫೈನಲ್‌ಗಳಲ್ಲಿ ಮಾತ್ರ ಸೋತಿದ್ದೇವೆ’ ಎಂದು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT