ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2023: ಮುಂಬೈ ನಿರ್ಗಮನ; ಗುಜರಾತ್ vs ಚೆನ್ನೈ ಫೈನಲ್

Published 26 ಮೇ 2023, 18:34 IST
Last Updated 26 ಮೇ 2023, 18:34 IST
ಅಕ್ಷರ ಗಾತ್ರ

ಅಹಮದಾಬಾದ್: ಐಪಿಎಲ್‌ ಟೂರ್ನಿಯಲ್ಲಿ ಮೂರನೇ ಶತಕ ಗಳಿಸಿದ ಶುಭಮನ್ ಗಿಲ್ ಹಾಗೂ ಐದು ವಿಕೆಟ್ ಗೊಂಚಲು ಗಳಿಸಿದ ಮೋಹಿತ್ ಶರ್ಮಾ ಅವರ ಬಲದಿಂದ ಗುಜರಾತ್ ಟೈಟನ್ಸ್‌ ಜಯಭೇರಿ ಬಾರಿಸಿತು. ಇದರೊಂದಿಗೆ ಸತತ ಎರಡನೇ ವರ್ಷ ಫೈನಲ್ ಪ್ರವೇಶಿಸಿತು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಎರಡನೇ ಕ್ವಾಲಿಫೈಯರ್‌ನಲ್ಲಿ ಗಿಲ್ (129; 60ಎ) ಅವರ ಅಮೋಘ ಶತಕದ ಬಲದಿಂದ ಗುಜರಾತ್ ಟೈಟನ್ಸ್‌ ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 233 ರನ್‌ ಗಳಿಸಿತು.

ಗುರಿ ಬೆನ್ನಟ್ಟಿದ ಮುಂಬೈ ಇಂಡಿ ಯನ್ಸ್ ತಂಡವು 18.2 ಓವರ್‌ಗಳಲ್ಲಿ 171 ರನ್‌ ಗಳಿಸಿತು. ಕೊನೆಯ ಐದು ವಿಕೆಟ್‌ಗಳು 16 ರನ್ನಿಗೆ ಬಿದ್ದವು. ಗುಜರಾತ್‌ 62 ರನ್‌ಗಳಿಂದ ಗೆದ್ದಿತು.

ಮಧ್ಯಮವೇಗಿ ಮೋಹಿತ್ ಶರ್ಮಾ (10ಕ್ಕೆ5) ಅಮೋಘ ಬೌಲಿಂಗ್ ಮಾಡಿದರು. ಇದರಿಂದಾಗಿ ಐದು ಬಾರಿಯ ಚಾಂಪಿಯನ್‌ ಮುಂಬೈ ತಂಡದ ಸೂರ್ಯಕುಮಾರ್ ಯಾದವ್ (61ರನ್), ತಿಲಕ್ ವರ್ಮಾ (43ರನ್) ಹಾಗೂ ಕ್ಯಾಮರಾನ್ ಗ್ರೀನ್ (30 ರನ್) ಅವರ ಹೋರಾಟಕ್ಕೆ ಜಯ ಒಲಿಯಲಿಲ್ಲ.

ಆದರೆ  ಟೂರ್ನಿಯುದ್ದಕ್ಕೂ ಅಮೋಘ ಲಯದಲ್ಲಿರುವ ಗಿಲ್ ಅವರ ಆಟಕ್ಕೆ ಜಯ ಒಲಿಯಿತು. ಟೂರ್ನಿಯಲ್ಲಿ ಒಟ್ಟು 851 ರನ್‌ ಗಳಿಸಿರುವ ಅವರಿಗೆ ಆರೇಂಜ್‌ ಕ್ಯಾಪ್ ಕೂಡ ಒಲಿಯಿತು. ‘ಹಾಲಿ ಚಾಂಪಿಯನ್‘ ಗುಜರಾತ್ ತಂಡವು ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬಳಗವನ್ನು ಎದುರಿಸಲಿದೆ.

ಗಿಲ್ ಅಬ್ಬರ: ಟಾಸ್ ಗೆದ್ದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಅವರ ಯೋಜನೆ ಕೈಕೊಟ್ಟಿತು.

ಕ್ರೀಸ್‌ಗೆ ಕಾಲಿಟ್ಟ ಕೆಲವೇ ನಿಮಿಷಗಳಲ್ಲಿಯೇ ಶುಭಮನ್ ಎದುರಾಳಿ ಬೌಲರ್‌ಗಳನ್ನು ದಂಡಿಸಲು ಆರಂಭಿಸಿದರು. ಇನ್ನೊಂದೆಡೆ ಅನುಭವಿ ಬ್ಯಾಟರ್ ವೃದ್ಧಿಮಾನ್ ಸಹಾ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದರು. ಮೊದಲ ವಿಕೆಟ್‌ ಜೊತೆಯಾಟದಲ್ಲಿ 54 ರನ್‌ ಕಲೆಹಾಕಿದರು. ಏಳನೇ ಓವರ್‌ನಲ್ಲಿ ಸ್ಪಿನ್ನರ್ ಪಿಯೂಷ್ ಚಾವ್ಲಾ ಎಸೆತದಲ್ಲಿ ಸಹಾ ಔಟಾದರು. 

ಇನಿಂಗ್ಸ್‌ ಹೊಣೆಯನ್ನು ತಮ್ಮ ಮೇಲೆ ಹೊತ್ತುಕೊಂಡ 23 ವರ್ಷದ ಗಿಲ್  ಕೇವಲ 48 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದರು. ಹತ್ತು ಸಿಕ್ಸರ್ ಹಾಗೂ ಏಳು ಬೌಂಡರಿ ಹೊಡೆದರು.  ಪುಲ್, ಕಟ್, ಸ್ವೀಪ್ ಮತ್ತು ಡ್ರೈವ್‌ಗಳ ಸುಂದರ ಆಟ ಅವರಿಂದ ಮೂಡಿಬಂದಿತು.

ಅವರಿಗೆ ಇಲ್ಲಿ ಅದೃಷ್ಟವೂ ಜೊತೆಯಿತ್ತು. ವೇಗಿ ಜೋರ್ಡಾನ್‌ ಹಾಕಿದ ಆರನೇ ಓವರ್‌ ಮತ್ತು ಕ್ಯಾಮರಾನ್ ಗ್ರೀನ್ ಮಾಡಿದ 11ನೇ ಓವರ್‌ನಲ್ಲಿ ಕ್ಯಾಚ್‌ ಆಗುವ ಸಾಧ್ಯತೆಗಳಿಂದ ತಪ್ಪಿಸಿಕೊಂಡರು. ಫೀಲ್ಡರ್‌ಗಳ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ಇದರ ಲಾಭ ಪಡೆದ ಗಿಲ್ 215ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ಗಳನ್ನು ಹರಿಸಿದರು. ಅವರಿಗೆ ಸಾಯಿ ಸುದರ್ಶನ್ ಉತ್ತಮ ಜೊತೆ ನೀಡಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 138 ರನ್‌ ಸೇರಿಸಿದರು.  17ನೇ ಓವರ್‌ನಲ್ಲಿ ಮತ್ತೊಂದು ಸಿಕ್ಸರ್ ಹೊಡೆಯುವ ಯತ್ನದಲ್ಲಿ ಗಿಲ್ ವಿಫಲರಾಗಿ ಟಿಮ್ ಡೇವಿಡ್ ಅವರಿಗೆ ಕ್ಯಾಚಿತ್ತರು. ಆಕಾಶ್ ಮಧ್ವಾಲ್ ವಿಕೆಟ್ ಗಳಿಸಿದರು.

ಕಳೆದ ಪಂದ್ಯದಲ್ಲಿ ಮಿಂಚಿದ್ದ ಆಕಾಶ್, ಇಲ್ಲಿ ದುಬಾರಿಯಾದರು. ಇ ನಿಂಗ್ಸ್‌ನಲ್ಲಿ ಕೊನೆಯ ಒಂದು ಓವರ್ ಬಾಕಿ ಇದ್ದಾಗ ಸಾಯಿ ಸುದರ್ಶನ ಗಾಯ ಗೊಂಡು ಪೆವಿಲಿಯನ್‌ಗೆ ಮರಳಿದರು.

ಮಳೆ, ವಿಳಂಬ: ಅಹಮದಾ ಬಾದಿನಲ್ಲಿಸಂಜೆ ಮಳೆ ಸುರಿದಿದ್ದರಿಂದ ಪಂದ್ಯವು ಅರ್ಧಗಂಟೆ ವಿಳಂಬವಾಗಿ ಆರಂಭವಾಯಿತು.  7.30ರ ಬದಲಿಗೆ ಎಂಟು ಗಂಟೆಗೆ ಪಂದ್ಯ ಆರಂಭವಾಯಿತು.

ಸತತ 2ನೇ ಬಾರಿ ಫೈನಲ್

ಮುಂಬೈ ಇಂಡಿಯನ್ಸ್ ವಿರುದ್ಧ 62 ರನ್ ಗೆಲುವು ದಾಖಲಿಸಿರುವ ಗುಜರಾತ್ ಟೈಟನ್ಸ್ ಸತತ ಎರಡನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದೆ. ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸಲಿದೆ.

ಈ ಮೂಲಕ ಕಳೆದ ಬಾರಿಯ ಚಾಂಪಿಯನ್ ಗುಜರಾತ್, ಸತತ ಎರಡನೇ ಬಾರಿಗೆ ಫೈನಲ್‌ಗೇರಿದ ಸಾಧನೆ ಮಾಡಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ಗುಜರಾತ್ ತಂಡವನ್ನೇ ಮಣಿಸಿದ ಚೆನ್ನೈ ಫೈನಲ್‌ಗೆ ಲಗ್ಗೆಯಿಟ್ಟಿತು. ಮತ್ತೊಂದೆದೆ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡದ ಪ್ರಶಸ್ತಿ ಕನಸು ಕಮರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT