ಭಾನುವಾರ, ಡಿಸೆಂಬರ್ 5, 2021
27 °C
ಗ್ಲೆನ್ ಮ್ಯಾಕ್ಸ್‌ವೆಲ್, ಯಜುವೇಂದ್ರ ಚಾಹಲ್ ಮಿಂಚು

DNP ಮ್ಯಾಕ್ಸ್‌ವೆಲ್ ‘ಹ್ಯಾಟ್ರಿಕ್‘: ಪ್ಲೇಆಫ್‌ಗೆ ಬೆಂಗಳೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಾರ್ಜಾ (ಪಿಟಿಐ): ಸತತ ಮೂರು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಯಜುವೇಂದ್ರ ಚಾಹಲ್ ಸ್ಪಿನ್ ಮೋಡಿಯಿಂದಾಗಿ  ಜಯಭೇರಿ ಬಾರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು  ಪ್ಲೇ ಆಫ್‌ಗೆ ಲಗ್ಗೆ ಹಾಕಿತು.

ಭಾನುವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 6 ರನ್‌ಗಳಿಂದ ಪಂಜಾಬ್ ಕಿಂಗ್ಸ್ ಎದುರು ಗೆದ್ದಿತು. ಇದರಿಂದಾಗಿ ಕೆ.ಎಲ್. ರಾಹುಲ್ ನಾಯಕತ್ವದ ತಂಡದ ಪ್ಲೇ ಆಫ್ ಪ್ರವೇಶದ ಕನಸು ಬಹುತೇಕ ಕಮರಿದಂತಾಗಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 164 ರನ್ ಗಳಿಸಿತು. ನಾಯಕ ವಿರಾಟ್ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ ಜೋಡಿ ಉತ್ತಮ ಆರಂಭ ನೀಡಿದರು. ಅದರ ಮೇಲೆ ಮ್ಯಾಕ್ಸ್‌ವೆಲ್  (57; 33ಎ) ಹೋರಾಟದ ಮೊತ್ತ ಪೇರಿಸಲು ನೆರವಾದರು.  ಅವರು ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಎದುರಿನ ಪಂದ್ಯಗಳಲ್ಲಿಯೂ ಅರ್ಧಶತಕ ಗಳಿಸಿದ್ದರು. ಈ ಬಾರಿ ಆರ್‌ಸಿಬಿಯು ಅತಿ ಹೆಚ್ಚು ಮೌಲ್ಯ ನೀಡಿ ಮ್ಯಾಕ್ಸ್‌ವೆಲ್ ಅವರನ್ನು ಖರೀದಿಸಿತ್ತು.

ಗುರಿ ಬೆನ್ನಟಿದ್ದ ಪಂಜಾಬ್ ತಂಡಕ್ಕೆ ರಾಹುಲ್ (39 ರನ್) ಮತ್ತು ಅರ್ಧಶತಕ ಬಾರಿಸಿದ ಮಯಂಕ್ ಅಗರವಾಲ್ (57; 42 ಎಸೆತ) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟಲದ್ಲಿ ಅವರು 91 ರನ್ ಸೇರಿಸಿದರು.

ಆದರೂ ಪಂಜಾಬ್  ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 158 ರನ್ ಗಳಿಸಲಷ್ಟೇ ಶಕ್ತವಾಯಿತು. ಅದಕ್ಕೆ ಕಾರಣವಾಗಿದ್ದು ಯಜುವೇಂದ್ರ ಚಾಹಲ್ (29ಕ್ಕೆ3) ಸ್ಪಿನ್ ಮೋಡಿ.

ನಿಕೋಲಸ್ ಪೂರನ್ (3)ಮತ್ತು ಸರ್ಫರಾಜ್ ಖಾನ್ ಅವರಿಬ್ಬರಿಗೂ ಪೆವಿಲಿಯನ್ ದಾರಿ ತೋರಿಸಿದ ಚಾಹಲ್, ಅರ್ಧಶತಕ ಗಳಿಸಿದ್ದ ಮಯಂಕ್ ಅಗರವಾಲ್ ಅವರ ವಿಕೆಟ್‌ ಅನ್ನೂ ಕಬಳಿಸಿದರು. ಇದರಿಂದಾಗಿ ತಂಡದ ಗೆಲುವು ಕೈಗೂಡಲಿಲ್ಲ. ಪಂಜಾಬ್ ತಂಡದ ಬೌಲಿಂಗ್ ಚೆನ್ನಾಗಿತ್ತು. ಮೊಹಮ್ಮದ್ ಶಮಿ ಮತ್ತು ಮೊಯಿಸೆಸ್ ಹೆನ್ರಿಕ್ಸ್ ತಲಾ ಮೂರು ವಿಕೆಟ್ ಗಳಿಸಿದರು.  ಆದರೆ, ಮಧ್ಯಮಕ್ರಮಾಂಕದ ಬ್ಯಾಟಿಂಗ್  ವೈಫಲ್ಯ ತಂಡವನ್ನು ಕಾಡಿತು.

12 ಪಂದ್ಯಗಳನ್ನಾಡಿರುವ ಆರ್‌ಸಿಬಿಯು 16 ಅಂಕಗಳನ್ನು ಗಳಿಸಿದೆ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಇನ್ನೂ ಎರಡು ಪಂದ್ಯಗಳನ್ನು ಆಡಲಿದೆ. 10 ಅಂಕ ಗಳಿಸಿರುವ ಪಂಜಾಬ್ ತಂಡವು ಇನ್ನೊಂದು ಪಂದ್ಯವನ್ನು ಆಡಬೇಕಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.