ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದಲ್ಲಿ ಮಿನಿ ವಿಶ್ವಕಪ್‌!

Last Updated 2 ಜುಲೈ 2019, 19:45 IST
ಅಕ್ಷರ ಗಾತ್ರ

ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ ಗೆದ್ದು ತರಲಿ ಎಂಬ ಆಶಯದೊಂದಿಗೆ ನಗರದ ಯುವ ಅಕ್ಕಸಾಲಿಗರೊಬ್ಬರು ಚಿನ್ನದಲ್ಲಿ ಪುಟ್ಟದಾದ ಆಕರ್ಷಕ ವಿಶ್ವಕಪ್‌ ಪ್ರತಿಕೃತಿ ತಯಾರಿಸಿದ್ದಾರೆ.

ಶ್ರೀರಾಮಪುರಕ್ಕೆ ಹೊಂದಿಕೊಂಡಿರುವ ಲಕ್ಷ್ಮಿನಾರಾಯಣಪುರದ ಮಂಜುನಾಥ ಜುವೆಲರಿ ವರ್ಕ್ಸ್‌ ಮಾಲೀಕ ನಾಗರಾಜ್‌ ರೇವಣಕರ್‌ 0.490 ಮಿಲಿ ಗ್ರಾಂ ಶುದ್ಧ ಚಿನ್ನದಲ್ಲಿ ಮಿನಿ ವಿಶ್ವಕಪ್‌ ಪ್ರತಿಕೃತಿ ತಯಾರಿಸಿದ್ದಾರೆ. 1.5 ಸೆಂಟಿ ಮೀಟರ್‌ ಎತ್ತರದ ಪುಟ್ಟ ಕಪ್‌ನ್ನು ಕಿರು ಬೆರಳ ತುದಿಯಲ್ಲಿ ಎತ್ತಿ ಹಿಡಿಯಬಹುದು. ಕ್ರಿಕೆಟ್‌ ಅಭಿಮಾನಿಯಾಗಿರುವ ನಾಗರಾಜ್‌ ಅವರು ಭಾರತ ತಂಡ ಈ ಬಾರಿ ವಿಶ್ವಕಪ್‌ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. ಅದೇ ಹುಮ್ಮಸ್ಸಿನಲ್ಲಿ ಮೂರು ದಿನಗಳಲ್ಲಿ ಚಿನ್ನದ ಕಪ್‌ ಸಿದ್ಧಪಡಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಬರಿ ಕಣ್ಣು ಮತ್ತು ಒಂದೇ ನೋಟಕ್ಕೆ ಕಪ್‌ ನಿಜವಾದ ಅಂದ ದಕ್ಕುವುದಿಲ್ಲ. ಭೂತಕನ್ನಡಿ ಅಥವಾ ಮೊಬೈಲ್‌ ಕ್ಯಾಮೆರಾ ಜೂಮ್‌ ಮಾಡಿ ನೋಡಿದಾಗ ನಾಗರಾಜ್‌ ಕೈಚಳಕ ಎದ್ದು ಕಾಣುತ್ತದೆ. ಚಿಕ್ಕ ಕಪ್‌ ಮೇಲಿರುವ ಸೂಕ್ಷ್ಮ ಕೆತ್ತನೆ ಮತ್ತು ಕುಸುರಿ ಕೆಲಸಗಮನ ಸೆಳೆಯುತ್ತವೆ. ಒಂದು ಕಡೆ ಮೂರು ಕಂಬಿಗಳಂತೆ ಒಟ್ಟು ಒಂಬತ್ತು ಕಂಬಿಗಳ ಮೇಲೆ ನಿಂತಿರುವ ಪುಟ್ಟ ಕ್ರಿಕೆಟ್‌ ಬಾಲ್‌ನ್ನು ತಂತಿಯಿಂದ ಬಿಗಿಯಲಾಗಿದೆ. ಇದಕ್ಕಾಗಿ 22 ಕ್ಯಾರೆಟ್‌ನ ₹2,000 ಬೆಲೆಯ ಚಿನ್ನ ಬಳಸಲಾಗಿದೆ.ಟೇಬಲ್‌ ಲ್ಯಾಂಪ್‌ ಬೆಳಕು ಇಲ್ಲದೆ ಮಂದ ಬೆಳಕಿನಲ್ಲೇ ಇಂತಹ ಸೂಕ್ಷ್ಮ ಕುಸುರಿ ಕೆಲಸವನ್ನು ಅವರು ಮಾಡಿ ಮುಗಿಸಿದ್ದಾರೆ. ಎಲ್ಲೆಡೆ ವಿಶ್ವಕಪ್‌ ಕ್ರಿಕಟ್‌ ಜ್ವರ ಹರಡಿರುವ ಕಾರಣ ಕ್ರಿಕೆಟ್‌ ಕ್ರೇಜ್‌ ಇರುವವರು ಈ ಮಿನಿ ಕಪ್‌ ನೋಡಲು ಮಂಜುನಾಥ್ ಜುವೆಲರಿ ಅಂಗಡಿಗೆ ಹುಡುಕಿಕೊಂಡು ಬರುತ್ತಿದ್ದಾರೆ.

‘ವಿಶ್ವಕಪ್‌ ಪ್ರತಿಕೃತಿ ತಯಾರಿಸುವ ಯೋಚನೆ ಬಂದಿದ್ದೆ ತಡ ಗೂಗಲ್‌ನಲ್ಲಿ ಚಿತ್ರ ಹೆಕ್ಕಿ ತೆಗೆದೆ.ಚಿನ್ನದ ಅಂಗಡಿಯಲ್ಲಿ ನೆರವಿಗೆ ಯಾರೂ ಸಹಾಯಕರು ಇಲ್ಲದ ಕಾರಣ ದಿನ ಬೆಳಿಗ್ಗೆ 7ಗಂಟೆಗೆ ಕಪ್‌ ತಯಾರಿಸುವ ಕೆಲಸ ಆರಂಭಿಸುತ್ತಿದ್ದೆ. 10 ಗಂಟೆಗೆ ಯಥಾರೀತಿ ಅಂಗಡಿ ತೆರೆಯುತ್ತಿದ್ದೆ. ಆರಂಭದಲ್ಲಿ ಒಂದೇ ದಿನದಲ್ಲಿ ಮಾಡಿ ಮುಗಿಸುವ ಉಮೇದು ಇತ್ತು. ಆದರೆ, ಮೂರು ದಿನ ಬೇಕಾಯಿತು’ ಎಂದು ನಾಗರಾಜ್‌ ಅನುಭವ ಹಂಚಿಕೊಂಡರು. ‘ನಾನು ತಯಾರಿಸಿದ ಚಿನ್ನದ ವಿಶ್ವಕಪ್‌ ಕಪ್‌ ಚಿತ್ರವನ್ನು ವಾಟ್ಸ್‌ ಆ್ಯಪ್‌ ಸ್ಟೇಟಸ್‌ನಲ್ಲಿ ಹಾಕಿದ್ದೆ. ಅದನ್ನು ಮೆಚ್ಚಿಕೊಂಡ ಸ್ನೇಹಿತರು ಜುವೆಲ್ರಿ ಗ್ರೂಪ್‌ ಜತೆ ಹಂಚಿಕೊಂಡರು. ಬಳಿಕ ಚಿತ್ರ ವಾಟ್ಸ್‌ ಆ್ಯಪ್‌ ಗ್ರೂಪ್‌ ಮತ್ತು ಫೇಸ್‌ಬುಕ್‌ಗಳಲ್ಲಿ ವೈರಲ್‌ ಆಯಿತು’ ಎನ್ನುತ್ತಾರೆ.

*ಭಾರತ ತಂಡ ಗೆದ್ದರೆ ಈ ಚಿನ್ನದ ಕಪ್‌ನ್ನು ಕಾಣಿಕೆಯಾಗಿ ನೀಡಬೇಕು ಎಂದುಕೊಂಡಿರುವೆ. ಅದನ್ನು ಭಾರತ ಕ್ರಿಕೆಟ್‌ ತಂಡಕ್ಕೆ ತಲುಪಿಸುವುದು ಹೇಗೆ ಎನ್ನುವುದು ಗೊತ್ತಿಲ್ಲ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಇದನ್ನು ನನ್ನ ಬಳಿಯೇ ಇಟ್ಟುಕೊಳ್ಳುತ್ತೇನೆ.ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ನೋಡಿದ ಕೆಲವರು ಖರೀದಿಸಲು ಮುಂದೆ ಬಂದಿದ್ದಾರೆ. ಇದನ್ನು ಮಾರಾಟ ಮಾಡುವುದಿಲ್ಲ. ಬೇಕಾದರೆ ಇದೇ ರೀತಿಯ ಮತ್ತೊಂದು ಕಪ್‌ ತಯಾರಿಸಿ ಕೊಡುವುದಾಗಿ ಹೇಳಿರುವೆ
–ನಾಗರಾಜ್‌ ರೇವಣಕರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT