ರಾಹುಲ್‌ಗೆ ಇದು ಸುವರ್ಣಾವಕಾಶ: ಅಜರ್

7
ಬಿಜಾಪುರ ಬುಲ್ಸ್‌ ಕ್ರಿಕೆಟ್ ತಂಡಕ್ಕೆ ಮೊಹಮ್ಮದ್ ಅಜರುದ್ದೀನ್ ಪ್ರಚಾರ ರಾಯಭಾರಿ

ರಾಹುಲ್‌ಗೆ ಇದು ಸುವರ್ಣಾವಕಾಶ: ಅಜರ್

Published:
Updated:
Deccan Herald

ಬೆಂಗಳೂರು: ಎಜ್‌ಬಾಸ್ಟನ್‌ನಲ್ಲಿ  ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದಲ್ಲಿ  ಸ್ಥಾನ ಪಡೆದಿರುವ ಕೆ.ಎಲ್. ರಾಹುಲ್ ಅವರಿಗೆ ಇದು ಸುವರ್ಣಾವಕಾಶ. ತಂಡದಲ್ಲಿ  ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದು ಹಿರಿಯ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಹೇಳಿದರು.

ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿರುವ ಬಿಜಾಪುರ ಬುಲ್ಸ್‌ ತಂಡಕ್ಕೆ ಪ್ರಚಾರ ರಾಯಭಾರಿಯಾಗಿರುವ ಅವರು ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಚೇತೇಶ್ವರ್ ಪೂಜಾರ ಉತ್ತಮ ಆಟಗಾರ. ಆದರೆ ಇಂಗ್ಲೆಂಡ್‌ನಲ್ಲಿ ಅವರು ಲಯದಲ್ಲಿ ಇರಲಿಲ್ಲ. ಆದ್ದರಿಂದ ಅವರಿಗೆ ಈ ಪಂದ್ಯದಲ್ಲಿ ಅವಕಾಶ ಕೊಟ್ಟಿರಲಿಕ್ಕಿಲ್ಲ.  ಟೂರ್ನಿ ಆರಂಭಕ್ಕೂ ಬಹಳ ದಿನಗಳೇ ಮೊದಲೇ ಅವರು  ಇಂಗ್ಲೆಂಡ್‌ಗೆ ಹೋಗಿ ಅಭ್ಯಾಸ ಮಾಡಿದ್ದರು. ಕೌಂಟಿ ಕ್ರಿಕೆಟ್‌ನಲ್ಲಿಯೂ ಆಡಿದ್ದರು.  ಆದರೆ ಅಭ್ಯಾಸ ಪಂದ್ಯದಲ್ಲಿ ಚೆನ್ನಾಗಿ ಆಡಿರಲಿಲ್ಲ. ಅವರಿಗೆ ಹೋಲಿಕೆ ಮಾಡಿದರೆ ರಾಹುಲ್ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಪ್ರಸ್ತುತ ಉತ್ತಮ ಲಯದಲ್ಲಿರುವ ಆಟಗಾರರನ್ನು ಆಡುವ ಹನ್ನೊಂದರ ಪಟ್ಟಿಯಲ್ಲಿ ಸ್ಥಾನ ನೀಡುವುದು ಸಹಜ’ ಎಂದು ವಿಶ್ಲೇಷಿಸಿದರು.

‘ನನಗೆ ಫೀಲ್ಡಿಂಗ್‌ ಮಾಡುವುದೆಂದರೆ ಹೆಚ್ಚು ಪ್ರಿಯವಾಗಿತ್ತು. ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ಒತ್ತಡಕ್ಕೆ ಸಿಲುಕಿಸಬೇಕಾದರೆ ಬಿಗಿಯಾದ ಫೀಲ್ಡಿಂಗ್‌ ಮುಖ್ಯ. ಇವತ್ತು ಕ್ರಿಕೆಟ್‌ನಲ್ಲಿ ಕ್ಷೇತ್ರರಕ್ಷಣೆಗೆ ಹೆಚ್ಚು ಮಹತ್ವ ಇದೆ. ಮೂರು ಮಾದರಿಗಳಲ್ಲಿಯೂ ಫೀಲ್ಡಿಂಗ್ ಕೌಶಲಗಳು ಸುಧಾರಣೆಯಾಗಿವೆ. ಟ್ವೆಂಟಿ–20 ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಬೌಂಡರಿ ಲೈನ್‌ಗಳಲ್ಲಿ ಸಾಹಸಮಯ ರೀತಿಯಲ್ಲಿ ಕ್ಯಾಚ್ ಪಡೆಯುತ್ತಿದ್ದಾರೆ’ ಎಂದು ಅಜರ್ ಸಂತಸ ವ್ಯಕ್ತಪಡಿಸಿದರು.

‘ಟೆಸ್ಟ್‌ ಕ್ರಿಕೆಟ್‌ನಲ್ಲಿ ಸ್ಲಿಪ್‌ ಪೊಸಿಷನ್‌ನಲ್ಲಿ ಫೀಲ್ಡಿಂಗ್ ಮಾಡುವುದು ಕಷ್ಟದ ಕೆಲಸ. ಅದಕ್ಕೆ ಪ್ರತಿದಿನವೂ ಅಭ್ಯಾಸ ಮಾಡಬೇಕು. ನೂರಕ್ಕೂ ಹೆಚ್ಚು ಕ್ಯಾಚ್‌ಗಳನ್ನು ಪಡೆಯುವ ಅಭ್ಯಾಸವನ್ನು ಸ್ಲಿಪ್‌ ಫೀಲ್ಡರ್‌ಗಳು ಮಾಡಬೇಕು. ಇಂಗ್ಲೆಂಡ್, ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ವೇಗದ ಬೌಲರ್‌ಗಳು ಯಶಸ್ಸು ಸಾಧಿಸುವುದರ ಹಿಂದಿನ ಗುಟ್ಟು ಸ್ಲಿಪ್‌ ಫೀಲ್ಡರ್‌ಗಳ ಆಟವೇ ಆಗಿದೆ. ಭಾರತ ತಂಡವು ಈ ವಿಷಯದಲ್ಲಿ  ಇನ್ನಷ್ಟು ಹೆಚ್ಚು ಕಾಳಜಿ ವಹಿಸಬೇಕು. ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುವವರನ್ನು ಗುರುತಿಸಿ ನಿರಂತರ ತರಬೇತಿ ನೀಡಬೇಕು. ವಿಕೆಟ್‌ಕೀಪರ್‌ ಕೌಶಲಗಳನ್ನು ಸ್ಲಿಪ್ ಫೀಲ್ಡರ್‌ಗಳು ನೋಡಿ ಕಲಿಯಬೇಕು’ ಎಂದು ಸಲಹೆ ನೀಡಿದರು.

‘ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಶುರುವಾದ ನಂತರ ವಿಶ್ವದ ಕ್ರಿಕೆಟ್‌ ಕ್ಷೇತ್ರವು ಹೊಸ ರೂಪ ಪಡೆದುಕೊಂಡಿದೆ. ಬಹುತೇಕ ಎಲ್ಲ ದೇಶಗಳಲ್ಲಿಯೂ ಲೀಗ್ ಟೂರ್ನಿಗಳು ನಡೆಯುತ್ತಿವೆ. ಐಪಿಎಲ್, ಕೆಪಿಎಲ್‌ನಂತಹ ಟೂರ್ನಿಗಳಿಂದ ಉತ್ತಮ ಪ್ರತಿಭೆಗಳು ಬೆಳಕಿಗೆ ಬಂದಿವೆ’ ಎಂದು ಅಜರ್ ಹೇಳಿದರು.

 ಈ ಸಂದರ್ಭದಲ್ಲಿ ಬಿಜಾಪುರ ಬುಲ್ಸ್‌ ಫ್ರಾಂಚೈಸ್‌ ಮಾಲೀಕ ಕಿರಣ್ ಕಟ್ಟಿಮನಿ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ತಂಡದ ನಾಯಕ ಭರತ್ ಚಿಪ್ಲಿ, ಕೋಚ್ ದೀಪಕ್ ಚೌಗಲೆ ಇದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !