ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟಿಂಗ್‌ ನಿಯಮ ಬದ್ಧಗೊಳಿಸುವುದು ಬೇಡ: ಬಿಸಿಸಿಐ ಎಸಿಯು ಮುಖ್ಯಸ್ಥ ಶಬೀರ್

ಮ್ಯಾಚ್ ಫಿಕ್ಸಿಂಗ್‌ಗೆ ದಾರಿಯಾಗುವ ಆತಂಕ: ಬಿಸಿಸಿಐ ಎಸಿಯು ಮುಖ್ಯಸ್ಥ ಶಬೀರ್‌
Last Updated 5 ಏಪ್ರಿಲ್ 2021, 12:22 IST
ಅಕ್ಷರ ಗಾತ್ರ

ನವದೆಹಲಿ: ಬೆಟ್ಟಿಂಗ್‌ಗೆ ಕಾನೂನಿನಲ್ಲಿ ಅವಕಾಶ ನೀಡಬಾರದು ಎಂದು ಹೇಳಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಭ್ರಷ್ಟಾಚಾರ ತಡೆ ಘಟಕದ (ಎಸಿಯು) ಮುಖ್ಯಸ್ಥ ಶಬೀರ್ ಹುಸೇನ್ ಖಂಡ್ವಾವಾಲ ಬೆಟ್ಟಿಂಗ್ ನಿಯಮಬದ್ದವಾದರೆ ಮ್ಯಾಚ್ ಫಿಕ್ಸಿಂಗ್‌ಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಗುಜರಾತ್‌ನ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಹುಸೇನ್ ಅವರನ್ನು ಬಿಸಿಸಿಐ ಸೋಮವಾರ ಎಸಿಯು ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ಈ ವರೆಗೆ ರಾಜಸ್ಥಾನದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಅಜಿತ್‌ ಸಿಂಗ್ ಅವರು ಎಸಿಯು ಮುಖ್ಯಸ್ಥರಾಗಿದ್ದರು. ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಶಬೀರ್ ‘ದೇಶದ ಸಣ್ಣ ಲೀಗ್‌ಗಳಲ್ಲಿ ನಡೆಯುವ ಅಕ್ರಮಗಳನ್ನು ಪತ್ತೆಹಚ್ಚುವುದಕ್ಕೆ ಆದ್ಯತೆ ನೀಡಲಾಗುವುದು’ ಎಂದು ತಿಳಿಸಿದರು.

’ಬೆಟ್ಟಿಂಗ್ ನಿಯಮಬದ್ಧಗೊಳಿಸಿದರೆ ಸರ್ಕಾರದ ಖಜಾನೆಗೆ ಸಾಕಷ್ಟ ಹಣ ಹರಿದುಬರುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಅದಕ್ಕೆ ನಕಾರಾತ್ಮಕವಾದ ಅನೇಕ ಮುಖಗಳು ಇವೆ. ಎಸಿಯು ಈಗ ಇರುವ ನಿಯಮಗಳನ್ನು ಇನ್ನಷ್ಟು ಬಿಗಿಯಾಗಿಸಲು ಪ್ರಯತ್ನಿಸಲಿದೆ. ಅಂಥ ಸಮಯದಲ್ಲಿ ಬೆಟ್ಟಿಂಗ್‌ಗೆ ಕಾನೂನಿನ ರಕ್ಷಣೆ ಇರಬಾರದು’ ಎಂದು ಅವರು ಹೇಳಿದರು.

ಬೆಟ್ಟಿಂಗ್ ನಿಯಮಬದ್ಧಗೊಳಿಸುವ ಮೂಲಕ ಮ್ಯಾಚ್ ಫಿಕ್ಸಿಂಗ್‌ನಂಥ ಅಕ್ರಮಗಳನ್ನು ತಡೆಯಬಹುದು ಎಂದು ಅಜಿತ್ ಸಿಂಗ್ ಹೇಳಿದ್ದರು. ಕೇಂದ್ರ ಸಚಿವ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಕೂಡ ಬೆಟ್ಟಿಂಗ್‌ ನಿಯಮಬದ್ಧಗೊಳಿಸುವುದಕ್ಕೆ ಪೂರಕವಾದ ಮಾತುಗಳನ್ನಾಡಿದ್ದರು.

‘ಕೆಲವು ರಾಷ್ಟ್ರಗಳಲ್ಲಿ ಬೆಟ್ಟಿಂಗ್ ನಿಯಮಬದ್ಧವಾಗಿದೆ ನಿಜ. ಆದರೆ ಆಟದ ರಸ ಸವಿಯುವುದಕ್ಕೆ ಮಾತ್ರ ಕ್ರೀಡಾಂಗಣಕ್ಕೆ ತೆರಳುವವರು ಮತ್ತು ಟಿವಿ ಮುಂದೆ ಕುಳಿತುಕೊಳ್ಳುವವರು ಕ್ರೀಡಾಸ್ಫೂರ್ತಿಯಿಂದಷ್ಟೇ ಪಂದ್ಯಗಳನ್ನು ವೀಕ್ಷಿಸುತ್ತಾರೆ. ಪಂದ್ಯಗಳು ‘ಫಿಕ್ಸ್‌’ ಆಗಬೇಕು ಎಂದು ಅವರು ಬಯಸುವುದಿಲ್ಲ. ಆಟವು ಭ್ರಷ್ಟಾಚಾರದಿಂದ ಮುಕ್ತವಾಗಿರಬೇಕು ಎಂಬ ಅವರ ಆಶಯವನ್ನು ಈಡೇರಿಸಲು ನಾವು ಬದ್ಧರಾಗಿರಬೇಕು’ ಎಂದು ಶಬೀರ್ ನುಡಿದರು.

‘ಅನೇಕ ಸಂದರ್ಭಗಳಲ್ಲಿ ದೊಡ್ಡಮಟ್ಟದ ಪಂದ್ಯಗಳು ಭ್ರಷ್ಟಾಚಾರದಿಂದ ಮುಕ್ತವಾಗಿದ್ದರೂ ಸ್ಥಳೀಯ ಮತ್ತು ರಾಜ್ಯಮಟ್ಟದ ಲೀಗ್‌ಗಳಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್‌ನಂಥ ಅಕ್ರಮಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ದೊಡ್ಡ ಲೀಗ್‌ಗಳಲ್ಲಿ ಪಾಲ್ಗೊಳ್ಳುವ ಆಟಗಾರರಿಗೆ ಸಮರ್ಪಕ ಮತ್ತು ಉತ್ತಮ ಸಂಭಾವನೆ ಸಿಗುತ್ತಿರುವುದರಿಂದ ಅವರು ಭ್ರಷ್ಟಾಚಾರಕ್ಕೆ ಮುಂದಾಗುತ್ತಿಲ್ಲ. ಇದು ಸಂತೋಷದ ಸಂಗತಿ’ ಎಂದು ಶಬೀರ್ ಹೇಳಿದರು.

‘ನಾನೊಬ್ಬ ಕ್ರಿಕೆಟ್‌ ಪ್ರಿಯ. ಆದ್ದರಿಂದ ಹೊಸ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಲು ಸಾಧ್ಯ ಎಂಬ ಭರವಸೆ ಇದೆ. ಪೊಲೀಸ್ ಇಲಾಖೆಯಲ್ಲಿದ್ದಾಗ ಅನೇಕ ಟೂರ್ನಿಗಳನ್ನು ಆಯೋಜಿಸಿದ್ದೇನೆ. ಬಿಸಿಸಿಐಯಲ್ಲಿ ಅನೇಕ ಒಳ್ಳೆಯ ಕೆಲಸಗಳು ಆಗಿವೆ. ಅವುಗಳನ್ನು ಮುಂದುವರಿಸಿಕೊಂಡು ಹೋಗುವುದಷ್ಟೇ ನನ್ನ ಕೆಲಸ’ ಎಂದು ಅವರು ಹೇಳಿದರು. ಏಪ್ರಿಲ್ ಒಂಬತ್ತರಂದು ಆರಂಭವಾಗಲಿರುವ ಐಪಿಎಲ್‌ ಟೂರ್ನಿಯಲ್ಲಿ ಭ್ರಷ್ಟಾಚಾರ ತಡೆಯುವುದು ಶಬೀರ್ ಅವರ ಮುಂದಿರುವ ಸದ್ಯದ ದೊಡ್ಡ ಸವಾಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT