ಗೌತಮ್ ಗಂಭೀರ್ ನನ್ನ ರೋಲ್‌ ಮಾಡೆಲ್

7
19 ವರ್ಷದೊಳಗಿನವರ ಏಷ್ಯಾಕಪ್ ವಿಜೇತ ತಂಡದಲ್ಲಿದ್ದ ಕನ್ನಡಿಗ ದೇವದತ್‌

ಗೌತಮ್ ಗಂಭೀರ್ ನನ್ನ ರೋಲ್‌ ಮಾಡೆಲ್

Published:
Updated:

ಬೆಂಗಳೂರು: ‘ಒಂಬತ್ತು ವರ್ಷದವನಿದ್ದಾಗ ಟೈಂ ಪಾಸ್‌ಗಾಗಿ ಕ್ರಿಕೆಟ್ ಆಡಲು ಆರಂಭಿಸಿದ್ದೆ.  ನಿಧಾನವಾಗಿ ಆಟವನ್ನು ಪ್ರೀತಿಸಲು ಆರಂಭಿಸಿದೆ. ಅದೊಮ್ಮೆ ಟಿವಿಯಲ್ಲಿ ಗೌತಮ್ ಗಂಭೀರ್ ಅವರ ಬ್ಯಾಟಿಂಗ್ ನೋಡಿದೆ.  ಅವರ ಶೈಲಿ, ಹೊಡೆತಗಳು ತುಂಬಾ ಇಷ್ಟವಾದವು. ಅವರೇ ಪ್ರೇರಣೆಯಾದರು’–‌

ಈಚೆಗೆ ಬಾಂಗ್ಲಾದಲ್ಲಿ ನಡೆದ 19 ವರ್ಷದೊಳಗಿನವರ ಏಷ್ಯಾಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ 19 ವರ್ಷದೊಳಗಿನವರ ಕ್ರಿಕೆಟ್ ತಂಡದ ಎಡಗೈ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟರು.

ಒಂಬತ್ತು ವರ್ಷಗಳ ಹಿಂದೆ ಮನೆಯಂಗಳದಲ್ಲಿ ಸುಮ್ಮನೆ  ಆಡಿಕೊಂಡಿದ್ದ  ಬೆಂಗಳೂರಿನ ದೇವದತ್ ಈಗ ಆಯ್ಕೆದಾರರ ಗಮನ ಸೆಳೆಯುವ ಮಟ್ಟಕ್ಕೆ ಬೆಳೆದಿದ್ದಾರೆ. ಎರಡು ದಿನಗಳ ಹಿಂದಷ್ಟೇ ಬೆಂಗಳೂರಿಗೆ ಮರಳಿರುವ ‘ಪ್ರಜಾವಾಣಿ’ಯೊಂದಿಗೆ ನಡೆಸಿದ ಮಾತುಕತೆಯ ಸಾರ ಇಲ್ಲಿದೆ. ಅವರಿಗೆ ಈಗ 18 ವರ್ಷ.

l →ಏಷ್ಯಾ ಕಪ್ ಗೆಲುವಿನ ಬಗ್ಗೆ ಹೇಳಿ

ನನ್ನ ವೃತ್ತಿಜೀವನದ ಮಹತ್ವದ ಹಂತ ಇದು. ಭವಿಷ್ಯದಲ್ಲಿ ಬೆಳೆಯಲು ಆತ್ಮವಿಶ್ವಾಸ ಹೆಚ್ಚಿಸಿದೆ. ಒಳ್ಳೆಯ ಅನುಭವ.

l →ಈ ಟೂರ್ನಿಯಲ್ಲಿ ನಿಮಗೆ ವೈಯಕ್ತಿಕವಾಗಿ ಖುಷಿಕೊಟ್ಟ ಸಂದರ್ಭಗಳು ಯಾವವು?

ಇಷ್ಟು ದೊಡ್ಡ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಾಗ ಆ ಕಪ್ ಹಿಡಿದುಕೊಂಡು ಸಂಭ್ರಮಿಸಿದ್ದು ಅವಿಸ್ಮರಣೀಯ ಅನುಭವ. ಟೂರ್ನಿಯಲ್ಲಿ ಯುಎಇ ಎದುರು ಶತಕ ಗಳಿಸಿದ್ದೂ ಸಂತಸ ಮೂಡಿಸಿತ್ತು. ತಂಡದ ಕೋಚ್ ಡಬ್ಲ್ಯು. ವಿ. ರಾಮನ್ ಮತ್ತು ಬೌಲಿಂಗ್ ಕೋಚ್ ಸನತ್‌ ಕುಮಾರ್ ಅವರ ಮಾರ್ಗದರ್ಶನವೂ ಅಮೂಲ್ಯವಾದದ್ದು. ಅವರು ಕೊಟ್ಟ ಸಲಹೆಗಳಿಂದ ನನ್ನ ಕೌಶಲಗಳಲ್ಲಿ ಉತ್ತಮ ಬದಲಾವಣೆಗಳು ಆಗಿವೆ.

l →ನಿಮಗೆ ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳೆದಿದ್ದು ಹೇಗೆ?

ನನ್ನ ತಂದೆ ಮತ್ತು ಅಂಕಲ್ ಇಬ್ಬರೂ ತಮ್ಮ ವಿದ್ಯಾರ್ಥಿ ದಿನಗಳಲ್ಲಿ ಕ್ರಿಕೆಟ್‌ ಆಡಿದವರು. ಚಿಕ್ಕಪ್ಪ ಕೇರಳ ರಾಜ್ಯ ತಂಡದಲ್ಲಿ ಆಡಿದ್ದರು. ಒಂಬತ್ತು ವರ್ಷದವನಿದ್ದಾಗ ಸುಮ್ಮನೇ ಆಡಿಕೊಂಡಿದ್ದೆ. ಆದರೆ 14 ವರ್ಷದೊಳಗಿನವರ ಕರ್ನಾಟಕ ತಂಡಕ್ಕೆ ಆಯ್ಕೆಯಾದ ನಂತರ ಸ್ವಲ್ಪ ಗಂಭೀರವಾಗಿ ಕಲಿಯಲಾರಂಭಿಸಿದೆ. ಜವಾನ್ಸ್‌ ಕ್ಲಬ್‌ನಲ್ಲಿ ತರಬೇತಿ ಪಡೆದೆ. ಕೆಎಸ್‌ಸಿಎನಲ್ಲಿ ಇರ್ಫಾನ್ ಅವರ ಮಾರ್ಗದರ್ಶನವೂ ಲಭಿಸಿತು.

l →ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್)ನಲ್ಲಿ ಆಡಿದ್ದರಿಂದ ಏನಾದರೂ ಪ್ರಯೋಜನವಾಯಿತೇ?

ಬಳ್ಳಾರಿ ಟಸ್ಕರ್ಸ್‌ ತಂಡದಲ್ಲಿ ಆಡಿದ್ದೆ. ಚುಟುಕು ಮಾದರಿಯಲ್ಲಿ ಆಡುವ ಅನುಭವವೇ ಬೇರೆ. ಒತ್ತಡವನ್ನು ನಿರ್ವಹಿಸುವ ಕಲೆ ರೂಢಿಸಿಕೊಳ್ಳಲು ಉತ್ತಮ ವೇದಿಕೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಮಾದರಿಗಳಲ್ಲಿಯೂ ಆಡುವುದನ್ನು ರೂಢಿಸಿಕೊಳ್ಳಬೇಕು.

l →ಭಾರತ ತಂಡಕ್ಕೆ ಆಯ್ಕೆಯಾಗುವ ವಿಶ್ವಾಸ ಇದೆಯೇ?

ಭಾರತ ತಂಡವನ್ನು ಪ್ರತಿನಿಧಿಸುವುದು ನನ್ನ ಗುರಿ. ಆದರೆ ಒಂದೊಂದೆ ಹಂತವನ್ನು ದಾಟಿ ಅಲ್ಲಿಗೆ ಹೋಗುತ್ತೇನೆ. ಸದ್ಯ ಕರ್ನಾಟಕದ ರಣಜಿ ತಂಡದಲ್ಲಿ ಸ್ಥಾನ ಪಡೆಯುವ ಗುರಿ ಇದೆ. ಲಭಿಸುವ ಎಲ್ಲ ಅವಕಾಶಗಳಲ್ಲಿಯೂ ಉತ್ತಮವಾಗಿ ಆಡುವುದು ನನ್ನ ಪ್ರಮುಖ ಧ್ಯೇಯ.

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !