ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ: ಸೋಫಿಯಾ, ಹರ್ಲಿನ್ ಅಬ್ಬರ

ಡಬ್ಲ್ಯುಪಿಎಲ್: ಆರ್‌ಸಿಬಿಗೆ ಸವಾಲಿ ಗುರಿಯೊಡ್ಡಿದ ಗುಜರಾತ್ ಜೈಂಟ್ಸ್
Last Updated 9 ಮಾರ್ಚ್ 2023, 5:18 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಸೋಫಿಯಾ ಡಂಕ್ಲಿ ಮತ್ತು ಹರ್ಲಿನ್ ಡಿಯೊಲ್ ಅವರ ಅಬ್ಬರದ ಅರ್ಧಶತಕಗಳ ಬಲದಿಂದ ಗುಜರಾತ್ ಜೈಟ್ಸ್‌ ತಂಡವು ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸವಾಲಿನ ಮೊತ್ತ ದಾಖಲಿಸಿತು.

ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಡಂಕ್ಲಿ (65; 28ಎ, 11ಎ, 4X3) ಹಾಗೂ ಹರ್ಲಿನ್ (67; 45ಎ, 4X9, 6X1) ಅವರ ಬ್ಯಾಟಿಂಗ್ ಬಲದಿಂದ ಗುಜರಾತ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 201 ರನ್ ಗಳಿಸಿತು.

ಸೋಫಿಯಾ ಅವರ ರನ್‌ ಗಳಿಕೆಯು ಶರವೇಗದಲ್ಲಿತ್ತು. 232.14ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ ಅವರ ಆಟಕ್ಕೆ ಬೌಲರ್‌ಗಳು ಸುಸ್ತಾದರು. ಅವರು ಹೊಡೆದ ಮೂರು ಅಮೋಘ ಸಿಕ್ಸರ್‌ಗಳು ಮನಮೋಹಕವಾಗಿದ್ದವು.

ಆರಂಭಿಕ ಬ್ಯಾಟರ್ ಸಬ್ಬಿನೇನಿ ಮೇಘನಾ ಮೂರನೇ ಓವರ್‌ನಲ್ಲಿ ಮೇಘನ್ ಶುಟ್ ಬೌಲಿಂಗ್‌ನಲ್ಲಿ ಔಟಾದರು. ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಹರ್ಲಿನ್ ಕೂಡ ಉತ್ತಮವಾಗಿ ಆಡಿದರು. ಅವರು ಡಂಕ್ಲಿ ಅವರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 60 ರನ್‌ ಸೇರಿಸಿದರು.

ಎಂಟನೇ ಓವರ್‌ನಲ್ಲಿ ಡಂಕ್ಲಿ ಅವರು ಶ್ರೇಯಾಂಕ್ ಪಾಟೀಲ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದರು. ಆದರೆ, ಚೆಂದದ ಕ್ಯಾಚ್ ಪಡೆದ ಫೀಲ್ಡರ್ ಹೀಥರ್ ನೈಟ್ ಸಂಭ್ರಮಿಸಿದರು. ಇದರೊಂದಿಗೆ ಜೊತೆಯಾಟ ಮುರಿಯಿತು.

ನಂತರ ಬಂದ ಬ್ಯಾಟರ್‌ಗಳೂ ರನ್‌ಗಳ ಕಾಣಿಕೆ ನೀಡಿದರು. ಇದರಿಂದಾಗಿ ತಂಡದ ಮೊತ್ತವು ದ್ವಿಶತಕದ ಗಡಿ ತಲುಪಿತು. ಹೇಮಲತಾ ಕೇವಲ ಏಳು ಎಸೆತಗಳಲ್ಲಿ 16 ರನ್‌ ಗಳಿಸಿದರೆ, ಸದರ್ಲೆಂಡ್ ಎಂಟು ಎಸೆತಗಳಲ್ಲಿ 14 ರನ್‌ ಗಳಿಸಿದರು.

ಆರ್‌ಸಿಬಿಯ ಬೌಲರ್ ಪ್ರೀತಿ ಬೋಸ್ ಮೂರು ಓವರ್‌ಗಳಲ್ಲಿ 47 ರನ್‌ ಕೊಟ್ಟು ದುಬಾರಿಯಾದರು. ಶ್ರೇಯಾಂಕಾ ಮತ್ತು ನೈಟ್ ತಲಾ ಎರಡು ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಗುಜರಾತ್ ಜೈಂಟ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 201 (ಸೋಫಿಯಾ ಡಂಕ್ಲಿ 65, ಹರ್ಲೀನ್ ಡಿಯೊಲ್ 67, ಆ್ಯಷ್ಲೆ ಗಾರ್ಡನರ್ 19, ಹೇಮಲತಾ 16, ಶ್ರೇಯಾಂಕ ಪಾಟೀಲ 32ಕ್ಕೆ2, ಹೀಥರ್ ನೈಟ್ 17ಕ್ಕೆ2) ವಿರುದ್ಧ ಆರ್‌ಸಿಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT