ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022| ಲಖನೌ ಸೂಪರ್ ಜೈಂಟ್–ಗುಜರಾತ್ ಟೈಟನ್ಸ್ ಪದಾರ್ಪಣೆ ಇಂದು

ಕೆ.ಎಲ್. ರಾಹುಲ್–ಹಾರ್ದಿಕ್ ಪಾಂಡ್ಯ ಮುಖಾಮುಖಿ
Last Updated 28 ಮಾರ್ಚ್ 2022, 5:11 IST
ಅಕ್ಷರ ಗಾತ್ರ

ಮುಂಬೈ: ಎರಡು ಹೊಸ ತಂಡಗಳಾದ ಲಖನೌ ಸೂಪರ್ ಜೈಂಟ್ಸ್‌ ಮತ್ತು ಗುಜರಾತ್ ಟೈಟನ್ಸ್ ಸೋಮವಾರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪದಾರ್ಪಣೆ ಮಾಡಲಿವೆ.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಲಖನೌಗೆ ಮತ್ತು ಬರೋಡಾದ ಹಾರ್ದಿಕ್ ಗುಜರಾತ್‌ಗೆ ನಾಯಕತ್ವ ವಹಿಸುವರು. ಕಳೆದ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿದ ಮತ್ತು ಭಾರತ ತಂಡದ ಹಂಗಾಮಿ ನಾಯಕನಾಗಿ ಆಡಿದ ಅನುಭವ ರಾಹುಲ್‌ಗೆ ಇದೆ. ಆದರೆ ಹಾರ್ದಿಕ್‌ಗೆ ಇದು ನಾಯಕತ್ವದ ಮೊದಲ ಪಂದ್ಯ.

ಕ್ರಿಕೆಟ್‌ ವಲಯದಲ್ಲಿ ಆಪ್ತಮಿತ್ರರೆಂದೇ ಗುರುತಿಸಿಕೊಳ್ಳುವ ರಾಹುಲ್ ಮತ್ತು ಹಾರ್ದಿಕ್ ಪ್ರತಿಸ್ಪರ್ಧಿಗಳಾಗಿ ಕಣಕ್ಕಿಳಿಯುತ್ತಿರುವುದು ಕುತೂಹಲ ಕೆರಳಿಸಿದೆ.

ಪಂಜಾಬ್ ತಂಡದಲ್ಲಿದ್ದಾಗ ರಾಹುಲ್ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ರನ್‌ಗಳ ಹೊಳೆ ಹರಿಸಿದ್ದರು. ಹೋದ ವರ್ಷ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿರಲಿಲ್ಲ. ಬೆನ್ನುನೋವಿನ ಕಾರಣಕ್ಕೆ ಬೌಲಿಂಗ್ ಕೂಡ ಮಾಡಿರಲಿಲ್ಲ. ಭಾರತ ತಂಡದಲ್ಲಿಯೂ ಅವರ ಆಟ ಮಂಕಾಗಿತ್ತು. ಆದ್ದರಿಂದ ಈಗ ಅವರ ಮುಂದೆ ತಮ್ಮ ಆಲ್‌ರೌಂಡ್ ಆಟ ಮತ್ತು ನಾಯಕತ್ವವನ್ನು ತೋರಿಸುವ ಸವಾಲು ಇದೆ.

ಲಖನೌ ತಂಡದಲ್ಲಿ ರಾಹುಲ್ ಜೊತೆಗೆ ಕರ್ನಾಟಕದ ಮನೀಷ್ ಪಾಂಡ್ಯ, ಕೃಷ್ಣಪ್ಪ ಗೌತಮ್ ಇದ್ದಾರೆ. ಕೃಣಾಲ್ ಪಾಂಡ್ಯ, ದೀಪಕ್ ಹೂಡಾ ಮತ್ತು ಜೇಸನ್ ಹೋಲ್ಡರ್‌ ಗಳಂತಹ ಉತ್ತಮ ಆಲ್‌ರೌಂಡರ್‌ಗಳೂ ಇದ್ದಾಋಎ. ಕ್ವಿಂಟನ್ ಡಿಕಾಕ್ ಅವರ ಅನುಭವವೂ ತಂಡದ ಸಾಮರ್ಥ್ಯ ಹೆಚ್ಚಿಸಿದೆ.

ಗುಜರಾತ್‌ ತಂಡದಲ್ಲಿ ಕನ್ನಡಿಗ ಅಭಿನವ್ ಮನೋಹರ್‌ಗೆ ಕಣಕ್ಕಿಳಿಯುವ ಅವಕಾಶ ಸಿಗುವ ಸಾಧ್ಯತೆ ಇದೆ. ಶುಭಮನ್ ಗಿಲ್, ವಿಜಯಶಂಕರ್, ರಾಹುಲ್ ತೆವಾಟಿಯಾ, ಜಯಂತ್ ಯಾದವ್ ಮತ್ತು ಅಫ್ಗಾನಿಸ್ತಾನದ ಆಟಗಾರ ರಶೀದ್ ಖಾನ್ ತಂಡದಲ್ಲಿದ್ದಾರೆ. ಕಳೆದ ಋತುಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡದಲ್ಲಿ ಆಡಿದ್ದ ರಶೀದ್ ಯಶಸ್ವಿ ಸ್ಪಿನ್ನರ್ ಆಗಿ ಮಿಂಚಿದ್ದರು. ಇಲ್ಲಿಯೂ ಅದೇ ಲಯ ಮುಂದುವರಿಸಿದರೆ ಹಾರ್ದಿಕ್‌ ಕಾರ್ಯ ಹಗುರವಾಗುವುದು ಖಚಿತ.

ತಂಡಗಳು

ಲಖನೌ ಸೂಪರ್ ಜೈಂಟ್ಸ್: ಕೆ.ಎಲ್. ರಾಹುಲ್ (ನಾಯಕ), ಮನನ್ ವೊಹ್ರಾ, ಎವಿನ್ ಲೂಯಿಸ್, ಮನೀಷ್ ಪಾಂಡೆ, ಕ್ವಿಂಟನ್ ಡಿಕಾಕ್, ರವಿ ಬಿಷ್ಣೋಯಿ, ದುಷ್ಮಂತಾ ಚಾಮೀರಾ, ಶಾಬಾಜ್ ನದೀಮ್, ಮೊಹಸಿನ್ ಖಾನ್, ಮಯಂಕ್ ಯಾದವ್, ಅಂಕಿತ್ ರಜಪೂತ್, ಆವೇಶ್ ಖಾನ್, ಆ್ಯಂಡ್ರ್ಯೂ ಟೈ, ಮಾರ್ಕಸ್ ಸ್ಟೊಯಿನಿಸ್, ಕೈಲ್ ಮೇಯರ್ಸ್, ಕರಣ್ ಶರ್ಮಾ, ಕೃಷ್ಣಪ್ಪ ಗೌತಮ್, ಆಯುಷ್ ಬದೋನಿ, ದೀಪಕ್ ಹೂಡಾ, ಕೃಣಾಲ್ ಪಾಂಡ್ಯ, ಜೇಸನ್ ಹೋಲ್ಡರ್

ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ಗುರುಕೀರತ್ ಸಿಂಗ್, ಸಾಯಿ ಸುದರ್ಶನ್, ಶುಭಮನ್ ಗಿಲ್, ರಾಹುಲ್ ತೆವಾಟಿಯಾ, ವಿಜಯಶಂಕರ್, ಮ್ಯಾಥ್ಯೂ ವೇಡ್, ರೆಹಮಾನುಲ್ಲಾ ಗುರ್ಬಾಜ್, ವೃದ್ಧಿಮಾನ್ ಸಹಾ, ಅಲ್ಜರಿ ಜೋಸೆಫ್, ದರ್ಶನ್ ನಾಲ್ಕಂಡೆ, ಡಾಮ್ನಿಕ್ ಡ್ರೇಕ್ಸ್, ಜಯಂತ್ ಯಾದವ್, ಲಾಕಿ ಫರ್ಗ್ಯುಸನ್, ಮೊಹಮ್ಮದ್ ಶಮಿ, ನೂರ್ ಅಹಮದ್, ಪ್ರದೀಪ್ ಸಂಗ್ವಾನ್, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ, ವರುಣ್ ಆ್ಯರನ್, ಯಶ್ ದಯಾಳ್.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್‌ ನೆಟ್‌ವರ್ಕ್

ಡಿಸ್ನಿ ಹಾಟ್‌ಸ್ಟಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT