ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ದಿಕ್‌ ಯಶಸ್ವಿ ನಾಯಕರಾಗಬಲ್ಲರು: ಗೌತಮ್‌ ಗಂಭೀರ್‌

ರೋಹಿತ್‌ ನೇತೃತ್ವದಲ್ಲಿ ವಿಶ್ವಕಪ್‌ ಆಡಲಿ: ಗಂಭೀರ್‌
Last Updated 1 ಜನವರಿ 2023, 21:54 IST
ಅಕ್ಷರ ಗಾತ್ರ

ಬೆಂಗಳೂರು: ‘ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರು ಯಶಸ್ವಿ ನಾಯಕರಾಗಿ ಬೆಳೆಯಬಲ್ಲ ಎಲ್ಲ ಗುಣಗಳನ್ನೂ ಹೊಂದಿದ್ದಾರೆ’ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಗೌತಮ್‌ ಗಂಭೀರ್‌ ಅಭಿಪ್ರಾಯಪಟ್ಟರು.

ಮುಂಬರುವ ಭಾರತ– ಶ್ರೀಲಂಕಾ ಕ್ರಿಕೆಟ್‌ ಸರಣಿಯ ನೇರ ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್‌ ಸ್ಪೋರ್ಟ್ಸ್‌ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಾರ್ದಿಕ್‌ ಅವರಲ್ಲಿ ನಾಯಕತ್ವದ ಗುಣಗಳಿವೆ. ಅದನ್ನು ಅವರು ಐಪಿಎಲ್‌ ಟೂರ್ನಿಯಲ್ಲಿ ಗುಜರಾತ್‌ ಟೈಟನ್ಸ್ ತಂಡದ ನಾಯಕರಾಗಿ ತೋರಿಸಿಕೊಟ್ಟಿದ್ದಾರೆ. ಈ ಹಿಂದೆ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ಲಭಿಸಿದ್ದಾಗಲೂ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು’ ಎಂದರು.

‘ಕೇವಲ ಒಂದು ಐಸಿಸಿ ಟೂರ್ನಿಯಲ್ಲಿ ತಂಡದ ಪ್ರದರ್ಶನ ನೋಡಿಕೊಂಡು ರೋಹಿತ್‌ ಶರ್ಮ ನಾಯಕತ್ವದ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ನಾಯಕರಾಗಿ ಅವರ ಒಟ್ಟಾರೆ ಸಾಧನೆ ಅತ್ಯುತ್ತಮವಾಗಿದೆ. ಮುಂಬರುವ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತವು ಅವರ ನಾಯಕತ್ವದಲ್ಲೇ ಆಡಬೇಕು’ ಎಂದು ತಿಳಿಸಿದರು.

‘ಟಿ20 ಮತ್ತು ಏಕದಿನ ಮಾದರಿಗಳಿಗೆ ಪ್ರತ್ಯೇಕ ನಾಯಕರನ್ನು ನೇಮಿಸುವ ಬದಲು, ಒಬ್ಬರೇ ನಾಯಕ ಇರಬೇಕು. ಟೆಸ್ಟ್‌ ಮಾದರಿಗೆ ಪ್ರತ್ಯೇಕ ನಾಯಕ ಬೇಕು. ಮೂರು ಮಾದರಿಗಳಿಗೆ ಮೂವರು
ನಾಯಕರನ್ನು ನೇಮಿಸುವುದು ಸರಿಯಲ್ಲ’ ಎಂದರು.

ಶ್ರೀಲಂಕಾ ವಿರುದ್ದದ ಟಿ20 ಸರಣಿಗೆ ಹಿರಿಯ ಆಟಗಾರರನ್ನು ಕೈಬಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿ, ‘ತಂಡದ ಭವಿಷ್ಯವನ್ನು ಮುಂದಿಟ್ಟುಕೊಂಡು ಆಯ್ಕೆಗಾರರಿಗೆ ಕೆಲವೊಮ್ಮೆ ಕಠಿಣ ನಿರ್ಧಾರ ತೆಗೆದುಕೊಳ್ಳಬೆಕಾಗುತ್ತದೆ’ ಎಂದು ಉತ್ತರಿಸಿದರು.

‘ಶಿಖರ್‌ ಧವನ್‌ಗೆ ಏಕದಿನ ತಂಡದ ಬಾಗಿಲು ಸಂಪೂರ್ಣವಾಗಿ ಮುಚ್ಚಿಲ್ಲ. ಆದರೆ ಇಶಾನ್‌ ಕಿಶನ್‌ ಮತ್ತು ಶುಭಮನ್‌ ಗಿಲ್‌ ಅವರು ಉತ್ತಮವಾಗಿ ಆಡುತ್ತಿರುವುದರಿಂದ ಧವನ್‌, ತಂಡದಲ್ಲಿ ಮತ್ತೆ ಸ್ಥಾನ ಪಡೆಯುವುದು ತುಂಬಾ ಕಷ್ಟ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT