ಕ್ರಿಕೆಟ್: ಭಾರತ ಎ ತಂಡಕ್ಕೆ ಆಸರೆಯಾದ ಅಂಕಿತ್ ಭಾವ್ನೆ

6

ಕ್ರಿಕೆಟ್: ಭಾರತ ಎ ತಂಡಕ್ಕೆ ಆಸರೆಯಾದ ಅಂಕಿತ್ ಭಾವ್ನೆ

Published:
Updated:

ಬೆಂಗಳೂರು: ಶುಕ್ರವಾರ ಬೆಳಿಗ್ಗೆ ಆಲೂರು ಕ್ರೀಡಾಂಗಣದಲ್ಲಿ ಶುಭಾರಂಭ ಮಾಡಿದ್ದು ದಕ್ಷಿಣ ಆಫ್ರಿಕಾ ‘ಎ’ ಬಳಗದವರು. ಆದರೆ ಸಂಜೆಯ ಹೊತ್ತಿಗೆ ಸಂಭ್ರಮ ಮನೆ ಮಾಡಿದ್ದು ಭಾರತ ‘ಎ’ ತಂಡದಲ್ಲಿ.

ಅದಕ್ಕೆ ಕಾರಣವಾಗಿದ್ದು ಜಿ. ಹನುಮವಿಹಾರಿ (ಬ್ಯಾಟಿಂಗ್ 138; 273 ಎಸೆತ, 13ಬೌಂಡರಿ) ಮತ್ತು ಅಂಕಿತ್ ಭಾವ್ನೆ (80; 146ಎಸೆತ, 199ನಿಮಿಷ, 10ಬೌಂಡರಿ, 1ಸಿಕ್ಸರ್) ಅವರಿಬ್ಬರ ಶತಕದ ಜೊತೆಯಾಟ. 

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಅಫ್ರಿಕಾ ಬಳಗವು  ಆತಿಥೇಯರಿಗೆ ಆರಂಭದಲ್ಲಿಯೇ ಪೆಟ್ಟು ನೀಡಿತು. 80 ರನ್‌ಗಳು ಸೇರುವಷ್ಟರಲ್ಲಿ ತಂಡದ ಮೂರು ವಿಕೆಟ್‌ ಕಬಳಿಸಿತ್ತು. ನಂತರ ಜೊತೆಗೂಡಿದ ಹನುಮವಿಹಾರಿ ಅಂಕಿತ್ ತಂಡವು 90 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 322 ರನ್‌ಗಳ ಉತ್ತಮ ಮೊತ್ತ ಗಳಿಸಲು ಕಾರಣರಾದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈಚೆಗೆ ನಡೆದಿದ್ದ ಮೊದಲ ಪಂದ್ಯದಲ್ಲಿಯೂ ಹನುಮವಿಹಾರಿ ಅರ್ಧಶತಕ ದಾಖಲಿಸಿದ್ದರು. ಆರ್. ಸಮರ್ಥ್ ಬದಲಿಗೆ  ತಂಡದಲ್ಲಿ ಸ್ಥಾನ ಪಡೆದಿದ್ದ ಅಂಕಿತ್ ಅವರು ಹನುಮವಿಹಾರಿಯೊಂದಿಗೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 177 ರನ್‌ ಸೇರಿಸಿದರು.

ಆರಂಭಿಕ ಆಘಾತ: ಬೆಳಿಗ್ಗೆ ಮೊದಲ ಓವರ್‌ನಲ್ಲಿ ಮಧ್ಯಮವೇಗಿ ಒಲಿವರ್ ಎಸೆತದಲ್ಲಿ ಮಯಂಕ್ ಅಗರವಾಲ್ ಅವರು ಜುಬೇರ್ ಹಮ್ಜಾ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರು. ಮೊದಲ ಪಂದ್ಯದಲ್ಲಿ ಅವರು ದ್ವಿಶತಕ ಗಳಿಸಿದ್ದರು.  ಇಲ್ಲಿ ಸೊನ್ನೆ ಸುತ್ತಿದರು.

ಆಗ ಕ್ರೀಸ್‌ಗೆ ಬಂದ ಹನುಮವಿಹಾರಿ ತಾಳ್ಮೆಯಿಂದ ಆಡಿದರು. ಇನ್ನೊಂದು ಬದಿಯಲ್ಲಿ ಪೃಥ್ವಿ ಶಾ 16 ರನ್‌ ಗಳಿಸಿ ಔಟಾದರು. ಕ್ರೀಸ್‌ಗೆ ಬಂದ ನಾಯಕ ಶ್ರೇಯಸ್ ಅಯ್ಯರ್ (39 ರನ್) ಅವರೊಂದಿಗೆ ನಿಧಾನಗತಿಯಲ್ಲಿ ಆಡಿದ ಹನುಮವಿಹಾರಿ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 62 ರನ್‌ ಪೇರಿಸಿದರು. ಆದರೆ 24ನೇ ಓವರ್‌ನಲ್ಲಿ ಅಯ್ಯರ್ ಕೆಟ್ಟ ಹೊಡೆತವಾಡಿ ವಿಕೆಟ್ ಚೆಲ್ಲಿದರು. ಆಗ ತಂಡದ ಮೊತ್ತ ಕೇವಲ 80 ರನ್‌ಗಳಾಗಿದ್ದವು. ಇದರಿಂದಾಗಿ ಪ್ರವಾಸಿ ಬಳಗವು ಉತ್ಸಾಹದಿಂದ ಕುಣಿದಾಡಿತು. ಊಟದ ವಿರಾಮದ ವೇಳೆಗೆ ಮೇಲುಗೈ ಸಾಧಿಸಿತ್ತು.

ಆದರೆ ನಂತರದ ಅವಧಿಯಲ್ಲಿ ಬೌಲರ್‌ಗಳ ಆಟ ನಡೆಯಲಿಲ್ಲ. ಹನುಮವಿಹಾರಿ ಮತ್ತು ಅಂಕಿತ್ ಅವರ ಸಮಚಿತ್ತ ಮತ್ತು ತಾಳ್ಮೆಯ ಅಟದಿಂದಾಗಿ ರನ್‌ಗಳು ಸೇರತೊಡಗಿದವು. ಚಹಾ ವಿರಾಮದ ಹೊತ್ತಿಗೆ ತಂಡದ ಮೊತ್ತವು 182ಕ್ಕೆ ಏರಿತ್ತು. ಇದರಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಇಬ್ಬರೂ ಬ್ಯಾಟ್ಸ್‌ಮನ್‌ಗಳು ವಿರಾಮದ ನಂತರ ರನ್ ಗಳಿಕೆಯ ವೇಗ ಹೆಚ್ಚಿಸಿದರು.

74ನೇ ಓವರ್‌ನಲ್ಲಿ ಅಂಕಿತ್ ಔಟಾದರು. ಕ್ರೀಸ್‌ಗೆ ಬಂದ ಕೆ.ಎಸ್. ಭರತ್ (ಬ್ಯಾಟಿಂಗ್ 30) ಅವರೊಂದಿಗೆ ಹನುಮವಿಹಾರಿ ಮುರಿಯದ 5ನೇ ವಿಕೆಟ್‌ ಜೊತೆಯಾಟದಲ್ಲಿ 75 ರನ್‌ಗಳನ್ನು ಸೇರಿಸಿದ್ದಾರೆ.

24 ವರ್ಷದ ಹನುಮವಿಹಾರಿ ಆಂಧ್ರಪ್ರದೇಶದ ಕಾಕಿನಾಡದವರು. ಹೋದ ರಣಜಿ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ್ದರು. 62 ಪ್ರಥಮ ದರ್ಜೆ ಮತ್ತು 56 ಲೀಸ್ಟ್‌ ’ಎ’ ಪಂದ್ಯಗಳನ್ನು ಆಡಿರುವ ಅನುಭವ ಅವರಿಗೆ ಇದೆ. ಪ್ರಥಮ ದರ್ಜೆ ವಿಭಾಗದಲ್ಲಿ ಅವರು ಒಂದು ತ್ರಿಶತಕ ಗಳಿಸಿದ್ದಾರೆ. 

ಸಂಕ್ಷಿಪ್ತ ಸ್ಕೋರು:
ಭಾರತ ‘ಎ’ : 90 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 322 (ಪೃಥ್ವಿ ಶಾ 16, ಜಿ. ಹನುಮವಿಹಾರಿ ಬ್ಯಾಟಿಂಗ್ 138, ಶ್ರೇಯಸ್ ಅಯ್ಯರ್ 39, ಅಂಕಿತ್ ಭಾವ್ನೆ 80, ಕೆ.ಎಸ್. ಭರತ್ ಬ್ಯಾಟಿಂಗ್ 30, ಡನ್ ಒಲಿವರ್ 54ಕ್ಕೆ1, ನಾರ್ಜಿ 56ಕ್ಕೆ1, ಮುತುಸಾಮಿ 51ಕ್ಕೆ1, ಡೆನ್ ಪೀಡ್ತ್ 46ಕ್ಕೆ1)


ಭಾರತ ‘ಎ’ ತಂಡದ ಅಂಕಿತ್ ಭಾವ್ನೆ ಬ್ಯಾಟಿಂಗ್ ವೈಖರಿ –ಪ್ರಜಾವಾಣಿ ಚಿತ್ರ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !