ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಕ್ರಿಕೆಟ್‌ ಇತಿಹಾಸ ಎಂದೂ ಮರೆಯಲಾಗದ ಮಹಾಗೋಡೆ ದ್ರಾವಿಡ್‌ಗೆ 47ರ ಸಂಭ್ರಮ

Last Updated 11 ಜನವರಿ 2020, 6:51 IST
ಅಕ್ಷರ ಗಾತ್ರ

ಬೆಂಗಳೂರು:ಕ್ರಿಕೆಟ್‌ ಜಗತ್ತಿನ 'ಗೋಡೆ' ಎಂದೇ ಖ್ಯಾತರಾದ ಭಾರತ ಕಿಕ್ರೆಟ್‌ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಅವರಿಗೆ ಶನಿವಾರ 47ನೇ ಜನ್ಮದಿನದ ಸಂಭ್ರಮ. ಕ್ರಿಕೆಟ್‌ ದಿಗ್ಗಜರು ದ್ರಾವಿಡ್‌ ಜತೆಗಿನ ಒಡನಾಟದ ಫೋಟೊಗಳೊಂದಿಗೆ ಶುಭಾಶಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

2018ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ 19 ವರ್ಷ ವಯಸ್ಸಿನೊಳಗಿನವರ ಕ್ರಿಕೆಟ್‌ ವಿಶ್ವ ಕಪ್‌ನಲ್ಲಿ ಪ್ರಶಸ್ತಿ ಗಳಿಸಿದ ಭಾರತ ತಂಡಕ್ಕೆ ದ್ರಾವಿಡ್‌ ತರಬೇತುದಾರರಾಗಿದ್ದರು. ಪ್ರಸ್ತುತ ಬೆಂಗಳೂರಿನರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಅಧ್ಯಕ್ಷರಾಗಿದ್ದಾರೆ.

ಕ್ರಿಕೆಟಿಗರಿಗೆ ವಿಶೇಷವಾಗಿ ಶುಭಕೋರುವ ವೀರೇಂದ್ರ ಸೆಹ್ವಾಗ್‌, 'ಅಡುಗೆ ಮನೆಯಲ್ಲಿ ಮಾತ್ರವೇ ರುಬ್ಬುವುದು ನಡೆಯುತ್ತದೆ ಅಂದುಕೊಂಡಿದ್ದೆ, ಆದರೆ ಕ್ರಿಕೆಟ್‌ ಪಿಚ್‌ನಲ್ಲೂ ರುಬ್ಬಬಹುದು ಎಂದು ದ್ರಾವಿಡ್‌ ಹೇಳಿಕೊಟ್ಟರು...' ಎಂದು ಟ್ವೀಟಿಸಿದ್ದಾರೆ.

ಭಾರತ ಕ್ರಿಕೆಟ್‌ ತಂಡದ ಪಾಲಿಗೆ ಮೂರನೇ ಕ್ರಮಾಂಕದಲ್ಲಿ ಅತಿ ದೊಡ್ಡ ಬಲವಾಗಿ, ಗೋಡೆಯಾಗಿ ನಿಂತು ಆಡುತ್ತಿದ್ದ ರಾಹುಲ್‌ ಇಂದಿಗೂ ಕ್ರಿಕೆಟ್‌ ಅಭಿಮಾನಿಗಳ ಮನದಲ್ಲಿ ಹಸಿರಾಗಿದ್ದಾರೆ. 1996ರಲ್ಲಿ ಲಾರ್ಡ್‌ನಲ್ಲಿ ಭಾರತದ ಪರ ಮೊದಲ ಪಂದ್ಯ ಆಡಿದ ರಾಹುಲ್‌ ದ್ರಾವಿಡ್‌, ಜಗತ್ತಿನ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು.

ಹದಿನಾರು ವರ್ಷಗಳ ವೃತ್ತಿ ಕ್ರಿಕೆಟ್‌ನಲ್ಲಿ 164 ಟೆಸ್ಟ್‌, 334 ಏಕದಿನ ಹಾಗೂ 1 ಟಿ20 ಪಂದ್ಯ ಆಡಿದ್ದಾರೆ. ಟೆಸ್ಟ್‌ ಮತ್ತು ಏಕದಿನ ಎರಡೂ ಮಾದರಿಯ ಕ್ರಿಕೆಟ್‌ನಲ್ಲಿ 10,000 ರನ್‌ ಪೂರೈಸಿರುವ ಎರಡನೇ ಭಾರತೀಯ ಆಟಗಾರ ದ್ರಾವಿಡ್‌. ಸಚಿನ್‌ ಮತ್ತು ದ್ರಾವಿಡ್‌ ಇಬ್ಬರು ಮಾತ್ರ ಈ ದಾಖಲೆ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 52.31 ಸರಾಸರಿಯಲ್ಲಿ 36 ಶತಕಗಳನ್ನು ಒಳಗೊಂಡಂತೆ 13,288 ರನ್‌ ಗಳಿಸಿದ್ದಾರೆ.

ನ್ಯೂಜಿಲೆಂಡ್‌ ಎದುರು ಏಕದಿನ ಪಂದ್ಯದಲ್ಲಿ 153 ರನ್‌ ಸಿಡಿದ ವಿಡಿಯೊನ್ನು ಬಿಸಿಸಿಐ ಪ್ರಕಟಿಸಿ ಶುಭಕೋರಿದೆ. 1999ರಲ್ಲಿ ಹೈದರಾಬಾದ್‌ನಲ್ಲಿ ಕಿವೀಸ್‌ ಎದುರು ನಡೆದಿದ್ದ ಪಂದ್ಯದಲ್ಲಿ ಸಚಿನ್‌ ಮತ್ತು ದ್ರಾವಿಡ್‌ 331 ರನ್‌ಗಳ ಬೃಹತ್‌ ಜತೆಯಾಟ ನಡೆಸಿದ್ದರು. ಭರ್ಜರಿ ಆಟ ಆಡಿದ್ದ ದ್ರಾವಿಡ್‌ 15 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಭಾರತ 2 ವಿಕೆಟ್‌ ನಷ್ಟಕ್ಕೆ 376 ರನ್‌ ದಾಖಲಿಸಿ, 174 ರನ್‌ಗಳ ಗೆಲುವು ಸಾಧಿಸಿತ್ತು.

ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್‌ ಸೇರಿದಂತೆ ಹಲವರು ಟ್ವೀಟ್‌ ಮಾಡಿ ಶುಭಾಶಯ ತಿಳಿಸಿದ್ದಾರೆ.

300ಕ್ಕೂ ಹೆಚ್ಚು ರನ್‌ಗಳ ಜತೆಯಾಟದಲ್ಲಿ ಎರಡು ಬಾರಿ ಕೈಜೋಡಿಸಿದ ದ್ರಾವಿಡ್‌, 2012ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ನಂತರ ರಾಜಸ್ಥಾನ್‌ ರಾಯಲ್ಸ್‌ ಪರವಾಗಿ ಐಪಿಎಲ್‌ ಟೂರ್ನಿಯಲ್ಲಿ 2014ರ ವರೆಗೂ ಆಡಿದರು. ಮುಂದೆ, ದೆಹಲಿ ಕ್ಯಾಪಿಟಲ್ಸ್‌ (ಆಗಿನ ಡೇರ್‌ಡೆವಿಲ್ಸ್‌) ತಂಡದ ತರಬೇತುದಾರನಾಗಿ, ಭಾರತ ಎ ತಂಡ ಹಾಗೂ ಭಾರತ ಅಂಡರ್‌–19 ತಂಡಗಳಿಗೆ ತರಬೇತುದಾರನಾಗಿ ತಮ್ಮ ಅನುಭವವನ್ನು ಹಂಚಿಕೊಂಡರು.

ದ್ರಾವಿಡ್‌ ತರಬೇತಿಯಲ್ಲಿ ರೂಪು ಪಡೆದು ಜೂನಿಯರ್‌ ಮಟ್ಟದಲ್ಲಿ ಮಿಂಚಿದ್ದ ರಿಷಭ್‌ ಪಂತ್‌, ಮನೀಶ್‌ ಪಾಂಡೆ, ಮಯಾಂಕ್‌ ಅಗರ್‌ವಾಲ್‌, ನವದೀಪ್‌ ಸೈನಿ, ಪೃಥ್ವಿ ಶಾ ಸೇರಿದಂತೆ ಹಲವು ಆಟಗಾರರು ಭಾರತ ತಂಡದಲ್ಲಿ ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT