ಶನಿವಾರ, ಜೂನ್ 19, 2021
21 °C

ಯುವರಾಜ್ ಸಿಂಗ್ ಜನ್ಮದಿನ: #HappyBirthdayYuvi ಟ್ವಿಟರ್‌ನಲ್ಲಿ ನಂ.1 ಟ್ರೆಂಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಭಿಮಾನಿಗಳ ಪ್ರೀತಿಯ ಸಿಕ್ಸರ್ ಸಿಂಗ್‌ ಯುವರಾಜ್‌ ಸಿಂಗ್‌ ಅವರಿಗೆ ಇಂದು ಜನ್ಮದಿನ. ವಿಶ್ವ ಕ್ರಿಕೆಟ್‌ ಕಂಡ ಪ್ರಮುಖ ಆಲ್ರೌಂಡರ್‌ಗಳಲ್ಲಿ ಒಬ್ಬರೆನಿಸಿರುವ ಯುವಿ, ಭಾರತಕ್ಕೆ ಹಲವು ಸ್ಮರಣೀಯ ಗೆಲುವುಗಳನ್ನು ಗಳಿಸಿಕೊಟ್ಟಿದ್ದಾರೆ. ಐಸಿಸಿಯ ಪ್ರಮುಖ ಪ್ರಶಸ್ತಿಗಳಾದ 19ವರ್ಷದೊಳಗಿನವರ ವಿಶ್ವಕಪ್‌, ಟಿ20 ವಿಶ್ವಕಪ್‌, ಏಕದಿನ ವಿಶ್ವಕಪ್‌, ಚಾಂಪಿಯನ್ಸ್‌ ಟ್ರೋಫಿಯನ್ನು ಗೆದ್ದ ತಂಡದಲ್ಲಿದ್ದ ಏಕೈಕ ಭಾರತೀಯ ಎಂಬ ಶ್ರೇಯ ಹೊಂದಿರುವ ಅವರು ಇದೀಗ 39 ವಸಂತಕ್ಕೆ ಕಾಲಿಟ್ಟಿದ್ದಾರೆ.

ತಂಡದ ಗೆಲುವಿಗಾಗಿ ಕೊನೆವರೆಗೂ ಹೋರಾಟ ನಡೆಸುತ್ತಿದ್ದ ಕೆಚ್ಚೆದೆಯ ಆಟಗಾರನಿಗೆ ಸಾವಿರಾರು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭಕೋರಿದ್ದಾರೆ. ಹೆಚ್ಚು ಬಳಕೆಯಾಗಿರುವ #HappyBirthdayYuvi #HappyBirthdaySuperstar ಹ್ಯಾಷ್‌ ಟ್ಯಾಗ್‌ಗಳು ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿವೆ.

ತನ್ನ ಪೇಜ್‌ನಲ್ಲಿ ಶುಭಾಶಯ ಕೋರಿರುವ ಐಸಿಸಿ, ಯುವಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ ಚಚ್ಚಿದ್ದ ವಿಡಿಯೊವನ್ನು ಹಂಚಿಕೊಂಡಿದೆ.

ದಕ್ಷಿಣ ಆಫ್ರಿಕಾದಲ್ಲಿ 2007ರಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ವೇಳೆ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಯುವರಾಜ್ ಈ ಸಾಧನೆ ಮಾಡಿದ್ದರು. ವೇಗಿ ಸ್ಟುವರ್ಟ್‌ ಬ್ರಾಡ್‌ ಎಸೆದ ಒಂದೇ ಓವರ್‌ನಲ್ಲಿ 36 ರನ್‌ ದೋಚಿದ್ದರು. ಮಾತ್ರವಲ್ಲದೆ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಸಾಧನೆ ಮಾಡಿದ್ದರು. ಇದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲಾದ ಅತ್ಯಂತ ವೇಗದ ಅರ್ಧಶತಕವಾಗಿ ಎನಿಸಿದೆ.

ಇದನ್ನೂ ಓದಿ: ಕೆಚ್ಚೆದೆಯ ಮಹಾರಾಜ ಈ ‘ಯುವರಾಜ’

‘ನಿಜವಾದ ಚಾಂಪಿಯನ್‌ ಮತ್ತು ಹಲವರ ಸ್ಫೂರ್ತಿ. ನಿಮಗಿದೊ ಜನುಮದಿನದ ಶುಭಾಶಯಗಳು’ ಎಂದು ಬಿಸಿಸಿಐ ಟ್ವೀಟ್‌ ಮಾಡಿದೆ.

ವಿರಾಟ್‌ ಕೊಹ್ಲಿ, ಹರ್ಭಜನ್ ಸಿಂಗ್‌, ಸುರೇಶ್‌ ರೈನಾ, ರುದ್ರಪ್ರತಾಪ್‌ ಸಿಂಗ್‌ ಸೇರಿ ಹಲವರು ಶುಭಾಶಯ ಕೋರಿದ್ದಾರೆ.

ಬ್ಯಾಟಿಂಗ್ ಬೌಲಿಂಗ್‌ನಲ್ಲಿ ಮಾತ್ರವಲ್ಲ ಫೀಲ್ಡಿಂಗ್‌ ಸ್ಟೈಲಿಷ್‌ ಆಗಿ ಕಾಣಿಸಿಕೊಳ್ಳುತ್ತಿದ್ದ ಯುವಿ ಭಾರತದ ಮಧ್ಯಮ ಕ್ರಮಾಂಕಕ್ಕೆ ಬಲತುಂಬಿದ ಆಟಗಾರ. 2015ರ ವಿಶ್ವಕಪ್‌ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದ ಯುವಿ, ಬಳಿಕ ಸ್ಥಿರ ಪ್ರದರ್ಶನ ತೋರಲು ವಿಫಲರಾಗಿದ್ದರು. 2017ರಲ್ಲಿ ಏಕದಿನ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದರು. 17 ವರ್ಷಗಳ ಕಾಲ ಭಾರತ ಕ್ರಿಕೆಟ್‌ ತಂಡದ ಭಾಗವಾಗಿದ್ದ ಅವರು, ಭಾರತ ಪರ 40 ಟೆಸ್ಟ್‌ ಪಂದ್ಯಗಳಲ್ಲಿ ಕಣಕ್ಕಿಳಿದು 1,900 ರನ್‌ ಗಳಿಸಿದ್ದಾರೆ.

ಇದನ್ನೂ ಓದಿ: ‘ವಿಶ್ವ’ ಗೆದ್ದ ತುಂಟ ಹುಡುಗ.. ಅಮ್ಮನ ಬಣ್ಣನೆ

ಏಕದಿನ ಕ್ರಿಕೆಟ್‌ನಲ್ಲಿ 304 ಪಂದ್ಯಗಳಿಂದ (278 ಇನಿಂಗ್ಸ್‌) 8,701 ಕಲೆಹಾಕಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 58 ಪಂದ್ಯಗಳ 51 ಇನಿಂಗ್ಸ್‌ಗಳಿಂದ 1,117 ರನ್‌ ಬಾರಿಸಿದ್ದಾರೆ. ಈ ಮೂರೂ ಮಾದರಿಯಲ್ಲಿ ಕ್ರಮವಾಗಿ 9 ವಿಕೆಟ್‌, 111 ವಿಕೆಟ್‌ ಮತ್ತು 28 ವಿಕೆಟ್‌ ಉರುಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು