ನವದೆಹಲಿ: ಐರ್ಲೆಂಡ್ ವಿರುದ್ಧ ಆಗಸ್ಟ್ 18ರಿಂದ ನಡೆಯುವ ಮೂರು ಪಂದ್ಯಗಳ ಸರಣಿಗೆ ಭಾರತ ಟಿ–20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಐರ್ಲೆಂಡ್ ಪ್ರವಾಸದ ನಂತರ ಏಷ್ಯಾ ಕಪ್ ಮತ್ತು ತವರಿನಲ್ಲಿ ಮಹತ್ವದ ವಿಶ್ವಕಪ್ ಟೂರ್ನಿ ಸೇರಿದಂತೆ ಬಿಡುವಿಲ್ಲದ ವೇಳಾಪಟ್ಟಿ ಇದ್ದು, ಕಾರ್ಯಭಾರ ಕಡಿಮೆ ಮಾಡುವ ತಂತ್ರದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಬಹುದು. ಮೂರೂ ಮಾದರಿಯಲ್ಲಿ ಸೈ ಎನಿಸಿರುವ ಬ್ಯಾಟರ್‌ಗ ಶುಭಮನ್ ಗಿಲ್ ಅವರಿಗೂ ವಿರಾಮ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
29 ವರ್ಷದ ಆಲ್‌ರೌಂಡರ್ ಪಾಂಡ್ಯ, ಭಾರತ ಏಕದಿನ ತಂಡದಲ್ಲಿ ಮಹತ್ವದ ಪಾತ್ರ ಹೊಂದಿದ್ದಾರೆ. ಹೀಗಾಗಿ ತಂಡದ ಚಿಂತಕರ ಚಾವಡಿ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿ ಅವರ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆಯಿಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ‘ಯಾವುದೂ ಅಂತಿಮಗೊಂಡಿಲ್ಲ. ವೆಸ್ಟ್ ಇಂಡೀಸ್‌ನಲ್ಲಿ ಏಕದಿನ ಮತ್ತು ಟಿ–20 ಸರಣಿಯನ್ನು ಹಾರ್ದಿಕ್ ಹೇಗೆ ನಿಭಾಯಿಸಬಹುದು ಎಂಬುದನ್ನು ಇದು ಅವಲಂಬಿಸಿದೆ. ವೆಸ್ಟ್ ಇಂಡೀಸ್ ವಿರುದ್ಧ ಸರಣಿಯ ನಂತರ ಭಾರತ ತಂಡವು ಫ್ಲೊರಿಡಾದಿಂದ ಐರ್ಲೆಂಡ್‌ನ ಡಬ್ಲಿನ್‌ಗೆ ತೆರಳಲಿದೆ.
ಭಾರತ, ವೆಸ್ಟ್ ಇಂಡೀಸ್ ವಿರುದ್ಧ ಮೂರು ಏಕದಿನ ಮತ್ತು ಐದು ಟಿ–20 ಪಂದ್ಯಗಳನ್ನು ಆಡಲಿದೆ. ಈ ಪಂದ್ಯಗಳು ಜುಲೈ 27 ರಿಂದ ಆಗಸ್ಟ್ 13ರ ನಡುವೆ ಬ್ರಿಜ್‌ಟೌನ್ (ಬಾರ್ಬಾಡೋಸ್), ಟರೋಬಾ (ಟ್ರಿನಿಡಾಡ್), ಜಾರ್ಜ್‌ಟೌನ್ (ಗಯಾನಾ) ಮತ್ತು ಫ್ಲೊರಿಡಾ (ಅಮೆರಿಕ)ದಲ್ಲಿ ನಡೆಯಲಿವೆ.
ಐರ್ಲೆಂಡ್‌ನಲ್ಲಿ ಭಾರತವು ಐದು ದಿನಗಳ ಮೂರು ಟಿ–20 ಪಂದ್ಯಗಳನ್ನು ಆಡಲಿದೆ. ಈ ಪಂದ್ಯಗಳು ಕ್ರಮವಾಗಿ ಆ. 18, 20 ಮತ್ತು 23ರಂದು ನಿಗದಿಯಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.