ಹಾರ್ದಿಕ್ ತಂಡದ ಉತ್ತಮ ಆಸ್ತಿ

ಭಾನುವಾರ, ಏಪ್ರಿಲ್ 21, 2019
26 °C
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿಕೆ

ಹಾರ್ದಿಕ್ ತಂಡದ ಉತ್ತಮ ಆಸ್ತಿ

Published:
Updated:
Prajavani

ಮುಂಬೈ: ‘ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ತಂಡದ ಉತ್ತಮ ಆಸ್ತಿಯಾಗಿದ್ದು ತಂಡದ ಈ ವರೆಗಿನ ಸಾಧನೆಯಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು’ ಎಂದು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅಭಿಪ್ರಾಯಪಟ್ಟರು.

ಸೋಮವಾರ ಇಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಎದುರು ತಂಡ ಐದು ವಿಕೆಟ್‌ಗಳಿಂದ ಗೆದ್ದಿತ್ತು. ಮೂರು ಓವರ್‌ಗಳಲ್ಲಿ 21 ರನ್‌ ನೀಡಿ ಒಂದು ವಿಕೆಟ್ ಕಬಳಿಸಿದ್ದ ಪಾಂಡ್ಯ ನಂತರ ಬ್ಯಾಟಿಂಗ್‌ನಲ್ಲೂ ಮಿಂಚಿದ್ದರು. 16 ಎಸೆತಗಳಲ್ಲಿ 37 ರನ್ ಗಳಿಸಿದ್ದರು. ಅವರ ಇನಿಂಗ್ಸ್‌ನಲ್ಲಿ ಎರಡು ಸಿಕ್ಸರ್ ಮತ್ತು ಐದು ಬೌಂಡರಿಗಳು ಇದ್ದವು.

172 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್‌ 15.3 ಓವರ್‌ಗಳಲ್ಲಿ 129 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದಾಗ ಹಾರ್ದಿಕ್‌ ಕ್ರೀಸ್‌ಗೆ ಬಂದಿದ್ದರು. ಅಂತಿಮ ಓವರ್‌ಗಳಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ಮಾಡಿ ತಂಡಕ್ಕೆ ಸುಲಭ ಗೆಲುವು ಗಳಿಸಿಕೊಟ್ಟಿದ್ದರು.

‘ಹಾರ್ದಿಕ್ ಬಹುತೇಕ ಎಲ್ಲ ಪಂದ್ಯಗಳಲ್ಲೂ ಉತ್ತಮ ಸಾಮರ್ಥ್ಯ ತೋರಿದ್ದಾರೆ. ಬ್ಯಾಟಿಂಗ್ ಮೂಲಕ ಅವರು ತಂಡಕ್ಕೆ ಅನೇಕ ಬಾರಿ ಗೆಲುವು ತಂದುಕೊಟ್ಟಿದ್ದಾರೆ. ಈ ರೀತಿಯ ಸಾಮರ್ಥ್ಯ ಅವರಿಗೆ ವೈಯಕ್ತಿಕವಾಗಿಯೂ ನೆರವಾಗುತ್ತಿದೆ’ ಎಂದು ರೋಹಿತ್ ಹೇಳಿದರು.

ಆರ್‌ಸಿಬಿಯ ನಾಲ್ಕು ವಿಕೆಟ್ ಕಬಳಿಸಿದ ಶ್ರೀಲಂಕಾದ ಲಸಿತ್ ಮಾಲಿಂಗ ಅವರನ್ನೂ ರೋಹಿತ್ ಕೊಂಡಾಡಿದರು. ‘ಲಸಿತ್ ಮಾಲಿಂಗ ಕೆಲವು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಆದರೆ ಆಡಿದ ಪಂದ್ಯಗಳಲ್ಲೆಲ್ಲ ಉತ್ತಮ ಸಾಧನೆ ಮಾಡಿದ್ದಾರೆ. ವಾಂಖೆಡೆ ಕ್ರೀಡಾಂಗಣದಲ್ಲಿ ಅಂತಿಮ ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವುದು ಕಷ್ಟ. ಮಾಲಿಂಗ ಈ ಸವಾಲನ್ನು ಸಮರ್ಥವಾಗಿ ಮೆಟ್ಟಿ ನಿಂತಿದ್ದಾರೆ’ ಎಂದು ರೋಹಿತ್ ನುಡಿದರು.

ತಂತ್ರವನ್ನು ಸಮರ್ಥಿಸಿಕೊಂಡ ಕೊಹ್ಲಿ: 19ನೇ ಓವರ್‌ನಲ್ಲಿ ಹಾರ್ದಿಕ್‌ ಪಾಂಡ್ಯ 22 ರನ್‌ ಕಬಳಿಸಿದ್ದರು. ಈ ಓವರ್ ಹಾಕಲು ಎಡಗೈ ಸ್ಪಿನ್ನರ್‌ ಪವನ್ ನೇಗಿ ಕೈಗೆ ಚೆಂಡು ನೀಡಿದ್ದನ್ನು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಸಮರ್ಥಿಸಿಕೊಂಡರು.

‘ಅದು ಸವಾಲಿನ ಓವರ್ ಆಗಿತ್ತು. ಇಬ್ಬರು ಬಲಗೈ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿದ್ದರು. ಈ ಸಂದರ್ಭದಲ್ಲಿ ಎಡಗೈ ಸ್ಪಿನ್ ಬಳಸುವುದೇ ಸೂಕ್ತವಾಗಿತ್ತು. ಆದರೆ ನಮ್ಮ ತಂತ್ರ ಫಲಿಸಲಿಲ್ಲ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !