ಮಂಗಳವಾರ, ನವೆಂಬರ್ 12, 2019
28 °C
ಪ್ರೊ ಕಬಡ್ಡಿ ಲೀಗ್‌: ರೇಡಿಂಗ್‌ನಲ್ಲಿ ಮಿಂಚಿದ ದೀಪಕ್‌ ನಿವಾಸ್‌ ಹೂಡ

ಪ್ಯಾಂಥರ್ಸ್‌– ಸ್ಟೀಲರ್ಸ್‌ ಸೆಣಸಾಟ ಸಮಬಲ

Published:
Updated:

ಕೋಲ್ಕತ್ತ: ಕ್ಯಾಪ್ಟನ್‌ ದೀಪಕ್‌ ನಿವಾಸ್‌ ಹೂಡಾ (14 ಪಾಯಿಂಟ್ಸ್‌) ಅವರ ಉತ್ತಮ ರೇಡ್‌ಗಳ ಬಲದಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಗೆಲುವಿನತ್ತ ಅಡಿಯಿಟ್ಟಂತೆ ಕಂಡಿತ್ತು. ಆದರೆ ಒಂದು ನಿಮಿಷ ಇದ್ದಾಗ ಪ್ರಶಾಂತ್‌ ಕುಮಾರ್‌ ರೈ ಅವರ ರೇಡಿಂಗ್‌ನಲ್ಲಿ ಸಚಿನ್‌ ನರ್ವಾಲ್‌ ಎಡವಟ್ಟಿನಿಂದಾಗಿ ಹರಿಯಾಣ ಸ್ಟೀಲರ್ಸ್‌ ಸೋಲು ತಪ್ಪಿಸಿಕೊಂಡು ಪಾಯಿಂಟ್‌ ಹಂಚಿಕೊಳ್ಳುವಲ್ಲಿ ಯಶಸ್ವಿಯಾಯಿತು.

ನೇತಾಜಿ ಸುಭಾಷಚಂದ್ರ ಬೋಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಪಿಂಕ್‌ಪ್ಯಾಂಥರ್ಸ್‌ ಮತ್ತು ಸ್ಟೀಲರ್ಸ್‌ ತಂಡಗಳು 32–32ರಲ್ಲಿ ಸಮ ಮಾಡಿಕೊಂಡವು.

ಹರಿಯಾಣ ಈ ಪಂದ್ಯಕ್ಕೆ ಮೊದಲು ಸತತ ಐದು ಪಂದ್ಯಗಳನ್ನು ಗೆದ್ದುಕೊಂಡಿತ್ತು. ಇನ್ನೊಂದು ಕಡೆ, ಪಿಂಕ್‌ ಪ್ಯಾಂಥರ್ಸ್‌ ಸತತ ನಾಲ್ಲು ಸೋಲಿನ ನಂತರ ಅಂಕಣಕ್ಕಿಳಿದಿತ್ತು.

ದೀಪಕ್‌ ಹೂಡಾ ಆರಂಭದಿಂದ ಉತ್ತಮ ರೇಡ್‌ಗಳನ್ನು ಪ್ರದರ್ಶಿಸಿದರು. ವಿರಾಮಕ್ಕೆ ಮೊದಲೇ ಏಳು ಪಾಯಿಂಟ್ಸ್‌ ಗಳಿಸಿದ್ದರು.  12ನೇ ನಿಮಿಷ ಎದುರಾಳಿಯನ್ನು ಆಲೌಟ್‌ ಮಾಡಿ ಆರು ಪಾಯಿಂಟ್‌ಗಳ ಮುನ್ನಡೆ (13–7) ಸಾಧಿಸಿತು.

ಆದರೆ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಹರಿಯಾಣಕ್ಕೆ ವಿಕಾಸ್ ಖಂಡೋಲಾ (7 ಪಾಯಿಂಟ್ಸ್‌) ಉತ್ತಮ ರೇಡ್‌ಗಳ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಅವರಿಗೆ ಮುಂಬೈ ಕನ್ನಡಿಗ ಪ್ರಶಾಂತ್‌ ಕುಮಾರ್‌ ರೈ (5 ಪಾಯಿಂಟ್ಸ್) ಬೆಂಬಲ ನೀಡಿದ್ದರ ಪರಿಣಾಮ ಸ್ಟೀಲರ್ಸ್‌ ಕೂಡ ವಿರಾಮಕ್ಕೆ ಮೂರು ನಿಮಿಷಗಳಿರುವಾಗ ಮೊದಲ ಬಾರಿ ಎದುರಾಳಿಯನ್ನು ಆಲೌಟ್‌ ಮಾಡಿ ಮುನ್ನಡೆ ಪಡೆಯಿತು. ವಿರಾಮದ ವೇಳೆ ಹರಿಯಾಣ 18–14ರಲ್ಲಿ ಮುಂದಿತ್ತು.

ಹರಿಯಾಣ ತಂಡ ವಿರಾಮದ ನಂತರವೂ ಅಲ್ಪ ಮೇಲುಗೈ ಮುಂದುವರಿಸಿತು. ವಿನಯ್‌ ಕೂಡ ರೇಡಿಂಗ್ ಹೊಣೆ ಹೊತ್ತರು. ದೀಪಕ್‌ ಅವರಿಗೆ ಸಮರ್ಥ ಬೆಂಬಲ ನೀಡುವ ಆಟಗಾರನ ಕೊರತೆ ಕಂಡಿತು. ರವಿಕುಮಾರ್‌ ಅವರೂ ಹರಿಯಾಣ ಪರ ಕೆಲವು ಯಶಸ್ವಿ ದಾಳಿ ನಡೆಸಿದರು.

ಉತ್ತರಾರ್ಧದ 13ನೇ ನಿಮಿಷ ಸೂಪರ್‌ ‘ಟೆನ್‌’ ಸಾಧಿಸುವ ಮೂಲಕ ದೀಪಕ್‌ ಲೀಗ್‌ನಲ್ಲಿ 800 ರೇಡಿಂಗ್‌ ಪಾಯಿಂಟ್‌ಗಳ ಮೈಲುಗಲ್ಲು ತಲುಪಿದರು. 

ವಾರಿಯರ್ಸ್‌ಗೆ ಜಯ: ಇನ್ನೊಂದು ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ 29–26 ಪಾಯಿಂಟ್‌ಗಳಿಂದ ಯು ಮುಂಬಾ ತಂಡವನ್ನು ಸೋಲಿಸಿತು. ವಾರಿಯರ್ಸ್‌ ಪರ ಸುಕೇಶ್‌ ಹೆಗಡೆ ಎಂಟು ಮತ್ತು ಮಣೀಂದರ್‌ ಸಿಂಗ್‌ ಏಳು ಪಾಯಿಂಟ್ಸ್‌ ಗಳಿಸಿದರು. ಮುಂಬಾ ತಂಡದ ಪರ ಅರ್ಜುನ್‌ ದೇಶ್ವಾಲ್‌ ರೇಡಿಂಗ್‌ನಲ್ಲಿ 15 ಪಾಯಿಂಟ್ಸ್‌ ಕಲೆಹಾಕಿದರು.

ಗುರುವಾರದ ಪಂದ್ಯಗಳು: ಜೈಪುರ ಪಿಂಕ್‌ ಪ್ಯಾಂಥರ್ಸ್‌– ಪಟ್ನಾ ಪೈರೇಟ್ಸ್‌ (ರಾತ್ರಿ 7.30); ಬೆಂಗಾಲ್‌ ವಾರಿಯರ್ಸ್‌– ಬೆಂಗಳೂರು ಬುಲ್ಸ್‌ (ರಾತ್ರಿ 8.30).

ಪ್ರತಿಕ್ರಿಯಿಸಿ (+)