ಶುಕ್ರವಾರ, ಸೆಪ್ಟೆಂಬರ್ 25, 2020
23 °C

ಯುಎಇಯಲ್ಲಿ ಆಡಲು ಕಾತರ: ಹರ್ಮನ್‌ಪ್ರೀತ್‌ ಕೌರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೀರ್ಘ ಬಿಡುವಿನ ಬಳಿಕ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)‌ ಮೂಲಕ ಕ್ರಿಕೆಟ್ ಚಟುವಟಿಕೆಗಳು‌ ಪುನರಾರಂಭಗೊಳ್ಳುತ್ತಿದ್ದು, ಮೊದಲ ಬಾರಿ ಯುಎಇಯಲ್ಲಿ ಆಡಲು ಕಾತರಳಾಗಿದ್ದೇನೆ ಎಂದು ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಹೇಳಿದ್ದಾರೆ.

ಯುಎಇಯಲ್ಲಿ ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರವರೆಗೆ ಐಪಿಎಲ್‌ ಟೂರ್ನಿ ನಿಗದಿಯಾಗಿದೆ. ಮಹಿಳೆಯರ ಐಪಿಎಲ್‌ ಎಂದು ಹೇಳಲಾಗುವ ಮಹಿಳಾ‌ ಟ್ವೆಂಟಿ–20 ಚಾಲೆಂಜ್‌ ಟೂರ್ನಿ ಕೂಡ ಇದೇ ಸಂದರ್ಭದಲ್ಲಿ ನಡೆಯಲಿದೆ. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರು ಹೋದ ವಾರ ಮಹಿಳೆಯರಿಗಾಗಿ ಪ್ರದರ್ಶನ ಪಂದ್ಯಗಳನ್ನು ಆಯೋಜಿಸುವುದನ್ನು ಖಚಿತಪಡಿಸಿದ್ದರು.

ಮಹಿಳೆಯರ ಚಾಲೆಂಜ್‌ ಟೂರ್ನಿಯಲ್ಲಿ ಮೂರು ತಂಡಗಳು ನಾಲ್ಕು ಪಂದ್ಯಗಳನ್ನು ಆಡಲಿವೆ. ನವೆಂಬರ್‌ 1ರಿಂದ 10ರವರೆಗೆ ಟೂರ್ನಿ ನಡೆಯುವ ನಿರೀಕ್ಷೆಯಿದೆ.

ಭಾರತದ ಮಹಿಳಾ ತಂಡ ಈ ವರ್ಷದ ಮಾರ್ಚ್‌ನಲ್ಲಿ ನಡೆದ ಟ್ವೆಂಟಿ–20 ವಿಶ್ವಕಪ್‌ ಬಳಿಕ ಯಾವುದೇ ಟೂರ್ನಿಯಲ್ಲಿ ಆಡಿಲ್ಲ.

‘ಮಹಿಳೆಯರ‌ ಚಾಲೆಂಜ್‌ ಟೂರ್ನಿಯಲ್ಲಿ ಕಣಕ್ಕಿಳಿಯಲು ಉತ್ಸುಕಳಾಗಿದ್ದೇನೆ. ಯಾಕೆಂದರೆ ನಮಗಿದು ಮೊದಲ ದುಬೈ ಪ್ರವಾಸ. ಈ ಮೊದಲು ನಾವು ಇಲ್ಲಿ ಯಾವುದೇ ಪಂದ್ಯಗಳನ್ನು ಆಡಿಲ್ಲ‘ ಎಂದು ಬುಧವಾರ ವೆಬಿನಾರ್‌ನಲ್ಲಿ ಹರ್ಮನ್‌ಪ್ರೀತ್‌ ಹೇಳಿದರು.

ಹರ್ಮನ್‌ಪ್ರೀತ್‌ ಅವರು ಡಬ್ಲ್ಯುಟಿಎಫ್‌ ಸ್ಪೋರ್ಟ್ಸ್ ಕಂಪನಿಯ ಪ್ರಚಾರ ರಾಯಭಾರಿಯಾಗಿದ್ದಾರೆ.

’ಅಲ್ಲಿಯ (ಯುಎಇ) ಪಿಚ್‌ ಹೇಗಿರುತ್ತದೆ ಎಂಬುದರ ಕುರಿತು ಕುತೂಹಲ ಇದೆ. ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡವಾಡಬೇಕು. ಅದಾಗದಿದ್ದರೆ ನಮ್ಮಿಂದ ಸಹಜ ಆಟ ಮೂಡಿಬರುವುದಿಲ್ಲ‘ ಎಂದು ರಾಷ್ಟ್ರೀಯ ತಂಡದ ಪರ 99 ಏಕದಿನ ಹಾಗೂ 114 ಟಿ20 ಪಂದ್ಯಗಳನ್ನು ಆಡಿರುವ ಹರ್ಮನ್‌ಪ್ರೀತ್‌ ನುಡಿದರು.

ತಮಗೆ ಲಭಿಸಿದ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳುತ್ತೇವೆ ಎಂಬ ವಿಶ್ವಾಸವನ್ನೂ ಅವರು‌ ವ್ಯಕ್ತಪಡಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು