ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರ್ಮನ್, ಪೂಜಾ ಆಟಕ್ಕೆ ಒಲಿದ ಜಯ: ಶ್ರೀಲಂಕಾ ವಿರುದ್ಧ ಭಾರತಕ್ಕೆ ಸರಣಿ ಜಯ

ಶ್ರೀಲಂಕಾ ವಿರುದ್ಧ ಭಾರತಕ್ಕೆ ಸರಣಿ ಜಯ; ರಾಜೇಶ್ವರಿಗೆ ಮೂರು ವಿಕೆಟ್
Last Updated 7 ಜುಲೈ 2022, 17:44 IST
ಅಕ್ಷರ ಗಾತ್ರ

ಪಲೆಕೆಲೆ: ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಪೂಜಾ ವಸ್ತ್ರಕರ್ ಅವರ ಅರ್ಧಶತಕಗಳ ಬಲದಿಂದ ಭಾರತ ಮಹಿಳೆಯರ ಕ್ರಿಕೆಟ್ ತಂಡವು ಶ್ರೀಲಂಕಾ ಎದುರು ಕ್ಲೀನ್‌ಸ್ವೀಪ್ ಸಾಧಿಸಿತು.

ಗುರುವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು 39 ರನ್‌ಗಳಿಂದ ಗೆದ್ದಿತು. ಸರಣಿಯನ್ನು 3–0ಯಿಂದ ಮಡಿಲಿಗೆ ಹಾಕಿಕೊಂಡಿತು.

ಟಾಸ್ ಗೆದ್ದ ಶ್ರೀಲಂಕಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹರ್ಮನ್‌ಪ್ರೀತ್ (75; 88ಎ, 4X7, 6X2) ಮತ್ತು ಪೂಜಾ ವಸ್ತ್ರಕರ್ (ಔಟಾಗದೆ 56; 65ಎ, 6X3) ಅವರ ಬ್ಯಾಟಿಂಗ್‌ ಬಲದಿಂದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 255 ರನ್ ಗಳಿಸಿತು. ಅದಕ್ಕುತ್ತರವಾಗಿ ಶ್ರೀಲಂಕಾ ತಂಡವು 47.3 ಓವರ್‌ಗಳಲ್ಲಿ 216 ರನ್‌ ಗಳಿಸಲಷ್ಟೇ ಶಕ್ತವಾಯಿತು. ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ (36ಕ್ಕೆ3) ಲಂಕಾ ತಂಡದ ಬ್ಯಾಟಿಂಗ್ ಪಡೆಗೆ ಪೆಟ್ಟು ಕೊಟ್ಟರು.

ಭಾರತ ತಂಡಕ್ಕೆ ಬ್ಯಾಟಿಂಗ್‌ನಲ್ಲಿ ಉತ್ತಮ ಆರಂಭ ಲಭಿಸಲಿಲ್ಲ. ಸ್ಮೃತಿ ಮಂದಾನ ಕೇವಲ ಆರು ರನ್‌ ಗಳಿಸಿ ಔಟಾದರು. ಇನ್ನೊಂದೆಡೆ ಕ್ರೀಸ್‌ನಲ್ಲಿದ್ದ ಶಫಾಲಿ ವರ್ಮಾ (49; 50ಎ) ಒಂದು ರನ್‌ನಿಂದ ಅರ್ಧಶತಕ ತಪ್ಪಿಸಿಕೊಂಡರೂ ಉತ್ತಮ ಆರಂಭ ನೀಡುವ ಪ್ರಯತ್ನ ಮಾಡಿದರು. ಅವರಿಗೆ ಯಷ್ಟಿಕಾ (30; 38ಎ) ಜೊತೆ ನೀಡಿದರು. ಎರಡನೇ ವಿಕೆಟ್‌ಗೆ 59 ರನ್‌ ಸೇರಿಸಿದರು.

18ನೇ ಓವರ್‌ನಲ್ಲಿ ಯಷ್ಟಿಕಾ ವಿಕೆಟ್ ಗಳಿಸಿದ ಇನೊಕಾ ರಣವೀರಾ ಮಿಂಚಿದರು. ರಶ್ಮಿ ಡಿಸಿಲ್ವಾ ಬೌಲಿಂಗ್‌ ಮಾಡಿದ 19ನೇ ಓವರ್‌ನಲ್ಲಿ ಶಫಾಲಿ ಮತ್ತು ಹರ್ಲಿನ್ ಇಬ್ಬರೂ ಔಟಾದರು. ದೀಪ್ತಿ ಶರ್ಮಾ ಕೂಡ ನಾಲ್ಕು ರನ್‌ ಮಾತ್ರ ಗಳಿಸಿ ನಿರ್ಗಮಿಸಿದರು.

ಈ ಸಂದರ್ಭದಲ್ಲಿ ಕ್ರೀಸ್‌ನಲ್ಲಿದ್ದ ಹರ್ಮನ್‌ ನಾಯಕಿಗೆ ತಕ್ಕ ಆಟವಾಡಿದರು. ರಿಚಾ ಘೋಷ್ ಕೂಡ ಹೆಚ್ಚು ಆಡಲಿಲ್ಲ. ಆದರೆ, ಎಂಟನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಪೂಜಾ ಬಿರುಸಿನ ಬ್ಯಾಟಿಂಗ್ ಮಾಡಿದರು. ಇವರಿಬ್ಬರೂ ಏಳನೇ ವಿಕೆಟ್‌ ಜೊತೆಯಾಟದಲ್ಲಿ 97 ರನ್‌ ಸೇರಿಸಿದರು. ಇದರಿಂದಾಗಿ ತಂಡವು ದ್ವಿಶತಕದ ಗಡಿ ದಾಟಿತು.

ಗುರಿ ಬೆನ್ನಟ್ಟಿದ ಲಂಕಾ ತಂಡದ ಆಟಗಾರ್ತಿಯರು ದೊಡ್ಡ ಪಾಲುದಾರಿಕೆ ಆಟ ಬೆಳೆಸಲು ಭಾರತದ ಬೌಲರ್‌ಗಳೂ ಬಿಡಲಿಲ್ಲ. ಬೌಲಿಂಗ್‌ನಲ್ಲಿಯೂ ಮಿಂಚಿದ ಹರ್ಮನ್ ಲಂಕಾ ತಂಡದ ಆರಂಭಿಕ ಆಟಗಾರ್ತಿ ಚಾಮರಿ ಅಟಪಟ್ಟು (44 ರನ್) ವಿಕೆಟ್ ಗಳಿಸಿದರು. ರಾಜೇಶ್ವರಿ ಮಧ್ಯಮ ಕ್ರಮಾಂಕಕ್ಕೆ ಹೊಡೆತ ನೀಡಿದರು.

ಸಂಕ್ಷಿಪ್ತ ಸ್ಕೋರು

ಭಾರತ: 50 ಓವರ್‌ಗಳಲ್ಲಿ 9ಕ್ಕೆ255 (ಶಫಾಲಿ ವರ್ಮಾ 49, ಯಷ್ಟಿಕಾ ಭಾಟಿಯಾ 30, ಹರ್ಮನ್‌ಪ್ರೀತ್ ಕೌರ್ 75, ಪೂಜಾ ವಸ್ತ್ರಕರ್ ಔಟಾಗದೆ 56, ಇನೊಕಾ ರಣವೀರಾ 22ಕ್ಕೆ2, ರಶ್ಮಿ ಡಿಸಿಲ್ವಾ 53ಕ್ಕೆ2, ಚಾಮರಿ ಅಟಪಟ್ಟು 45ಕ್ಕೆ2) ಶ್ರೀಲಂಕಾ: 47.3 ಓವರ್‌ಗಳಲ್ಲಿ 216 (ಚಾಮರಿ ಅಟಪಟ್ಟು 44, ಹಾಸಿನಿ ಪೆರೆರಾ 39, ನೀಲಾಕ್ಷಿ ಡಿಸಿಲ್ವಾ 48, ಹರ್ಷಿತಾ ಮಾಧವಿ 22, ರಾಜೇಶ್ವರಿ ಗಾಯಕವಾಡ 36ಕ್ಕೆ2, ಪೂಜಾ ವಸ್ತ್ರಕರ್ 33ಕ್ಕೆ2, ಮೇಘನಾ ಸಿಂಗ್ 32ಕ್ಕೆ2) ಫಲಿತಾಂಶ: ಭಾರತ ತಂಡಕ್ಕೆ 39 ರನ್‌ಗಳ ಜಯ. 3–0ಯಿಂದ ಸರಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT