ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದ ಹಸರಂಗ ಮತ್ತು ಚಮೀರಾ ಆರ್‌ಸಿಬಿಗೆ ಹೊಸ ಆಯಾಮ ಒದಗಿಸಿದ್ದಾರೆ: ಕೊಹ್ಲಿ

Last Updated 18 ಸೆಪ್ಟೆಂಬರ್ 2021, 13:27 IST
ಅಕ್ಷರ ಗಾತ್ರ

ದುಬೈ: ಶ್ರೀಲಂಕಾದ ವನಿದು ಹಸರಂಗ ಮತ್ತು ದುಷ್ಮಂತ ಚಮೀರಾ ಅವರ ಸೇರ್ಪಡೆ ತಂಡಕ್ಕೆ ಹೊಸ ಆಯಾಮ ಒದಗಿಸಿದೆ. ಹಾಗಾಗಿ, ಐಪಿಎಲ್ 2021ರ ಆವೃತ್ತಿಯ ದ್ವಿತಿಯಾರ್ಧದಲ್ಲಿ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಯೋ-ಬಬಲ್‌ನಲ್ಲಿದ್ದ ಆಟಗಾರರಲ್ಲಿ ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಐಪಿಎಲ್ 14ನೇ ಆವೃತ್ತಿಯನ್ನು ಮೇ ತಿಂಗಳಲ್ಲಿ ಅರ್ಧಕ್ಕೆ ಅಮಾನತುಗೊಳಿಸಲಾಗಿತ್ತು. ಇದೀಗ, ನಾಳೆಯಿಂದ ಯುಎಇಯಲ್ಲಿ ಐಪಿಎಲ್ ಪಂದ್ಯಾವಳಿ ಪುನರಾರಂಭಗೊಳ್ಳಲಿದೆ.

ಆಸ್ಟ್ರೇಲಿಯಾದ ಆ್ಯಡಂ ಜಂಪಾ ಮತ್ತು ಕೇನ್ ರಿಚರ್ಡ್ಸನ್ ಜೋಡಿ ಒಳಗೊಂಡಂತೆ ಐಪಿಎಲ್ ಪಂದ್ಯಾವಳಿಯ ಮೊದಲಾರ್ಧದಲ್ಲಿ ಕಾಣಿಸಿಕೊಂಡ ಕೆಲವು ಆಟಗಾರರ ಸೇವೆಯನ್ನು ಆರ್‌ಸಿಬಿ ಕಳೆದುಕೊಂಡಿದೆ.

‘ನಾವು ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದೇವೆ, ಮೊದಲಾರ್ಧದಲ್ಲಿ ತಂಡದಲ್ಲಿ ಆಡಿದ್ದ ಕೇನ್ ರಿಚರ್ಡ್ಸನ್, ಆ್ಯಡಂ ಜಂಪಾ ದ್ವಿತಿಯಾರ್ಧದಲ್ಲಿ ಆಡದಿರಲು ನಿರ್ಧರಿಸಿದ್ದಾರೆ’ ಎಂದು ತಂಡದ ನೀಲಿ ಜರ್ಸಿಯನ್ನು ಅನಾವರಣಗೊಳಿಸಿ ಕೊಹ್ಲಿ ತಿಳಿಸಿದರು.

‘ಅವರ ಬದಲಿಗೆ ತಂಡ ಸೇರಿರುವ ವನಿದು ಹಸರಂಗ, ದುಷ್ಮಂತ ಚಮೀರಾ ಅವರು ಶ್ರೀಲಂಕಾ ತಂಡದಲ್ಲಿ ಹಲವು ಪಂದ್ಯಗಳನ್ನು ಆಡಿದ್ದಾರೆ. ಈ ರೀತಿಯ ಪಿಚ್‌ಗಳಲ್ಲಿ ಹೇಗೆ ಆಡಬೇಕೆಂದು ಅವರು ತಿಳಿದಿದ್ದಾರೆ. ಅವರ ಕೌಶಲ್ಯ ತಂಡದ ನೆರವಿಗೆ ಬರಲಿದೆ’ ಎಂದು ಕೊಹ್ಲಿ ಹೇಳಿದ್ದಾರೆ.

ಆರ್‌ಸಿಬಿ ತಂಡವು ಸೋಮವಾರ ಅಬುಧಾಬಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದ್ದು, ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡದ ಆಟಗಾರರು ಕೋವಿಡ್ ಮುಂಚೂಣಿ ಕಾರ್ಯಕರ್ತರ ಪಿಪಿಇ ಕಿಟ್‌ಗಳ ಬಣ್ಣವನ್ನು ಹೋಲುವ ನೀಲಿ ಜರ್ಸಿ ಧರಿಸಿ ಕಣಕ್ಕಿಳಿಯಲಿದ್ದಾರೆ.

ಬಳಿಕ, ಆಟಗಾರರು ಸಹಿ ಮಾಡಿದ ಬ್ಲೂ ಜೆರ್ಸಿಗಳನ್ನು ಹರಾಜು ಮಾಡಿ, ಬಂದ ಹಣವನ್ನು ಭಾರತದ ಲಸಿಕಾ ಅಭಿಯಾನಕ್ಕೆ ಬಳಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT