ಅಹಮದಾಬಾದ್: ನಗರದಲ್ಲಿ ಸುರಿಯುತ್ತಿರುವ ರಭಸದ ಮಳೆಯಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಣ ಐಪಿಎಲ್ ಫೈನಲ್ ಪಂದ್ಯದ ಟಾಸ್ ವಿಳಂಬವಾಗಿದೆ.
ಗುಡುಗು ಸಹಿತ ಜೋರು ಮಳೆಯಾಗುತ್ತಿದ್ದು, ಟಾಸ್ ಪ್ರಕ್ರಿಯೆ 1 ಗಂಟೆಗೂ ಹೆಚ್ಚು ಸಮಯ ವಿಳಂಬವಾಗುವ ಸಾಧ್ಯತೆ ಇದೆ ವರದಿಯಾಗಿದೆ.
ಒಂದು ಲಕ್ಷದ ಮೂವತ್ತು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರ ಆಸನ ಸಾಮರ್ಥ್ಯ ಹೊಂದಿರುವ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಪಂದ್ಯ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದಾರೆ.
ಒಂದು ವೇಳೆ ಮಳೆ ನಿಂತು, ಕನಿಷ್ಠ ಐದು ಓವರ್‌ಗಳ ಆಟವು ಸಾಧ್ಯವಾಗದಿದ್ದರೆ ಪಂದ್ಯವನ್ನು ನಾಳೆಗೆ ಮುಂದೂಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೋದ ವಾರವಷ್ಟೇ ಚೆನ್ನೈನಲ್ಲಿ ನಡೆದಿದ್ದ ಮೊದಲ ಕ್ವಾಲಿಫೈಯರ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಅದರಲ್ಲಿ ಧೋನಿ ಬಳಗವು ಅಮೋಘ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ ಗುಜರಾತ್ ತಂಡವು ಎರಡನೇ ಕ್ವಾಲಿಫೈಯರ್‌ನಲ್ಲಿ ಮುಂಬೈ ಇಂಡಿಯನ್ಸ್ ಬಳಗವನ್ನು ಮಣಿಸಿ ಈ ಹಂತಕ್ಕೆ ಬಂದಿದೆ.
58 ದಿನಗಳ ಹಿಂದೆ ಇದೇ ಅಂಗಳದಲ್ಲಿ ಉದ್ಘಾಟನೆಗೊಂಡಿದ್ದ ಟೂರ್ನಿಯ ಮೊದಲ ಪಂದ್ಯದಲ್ಲಿ ಧೋನಿ ಬಳಗವು ಆತಿಥೇಯ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಿತ್ತು.
ಕಳೆದ ಒಂದೂವರೆ ತಿಂಗಳಿನಲ್ಲಿ ಉಭಯ ತಂಡಗಳು ಹಲವು ಏರಿಳಿತಗಳನ್ನು ಕಂಡು ಅಂತಿಮ ಸುತ್ತಿಗೆ ಬಂದು ತಲುಪಿವೆ. ಧೋನಿ ಬಳಗವು ಐದನೇ ಬಾರಿ ಪ್ರಶಸ್ತಿ ಜಯಿಸುವ ಹುಮ್ಮಸ್ಸಿನಲ್ಲಿದೆ. ಅದೇ ಗುಜರಾತ್ ತಂಡವು ಸತತ ಎರಡನೇ ಸಲ ಟ್ರೋಫಿ ತನ್ನದಾಗಿಸಿಕೊಳ್ಳುವ ಛಲದಲ್ಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.