ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಉಳಿತಾಯಕ್ಕಾಗಿ ಎಲ್‌ಇಡಿ ಬಲ್ಬ್‌ ಅಳವಡಿಕೆ

ಬೀದರ್‌ ನಗರದಲ್ಲಿ ಮೂರು ಇಂದಿರಾ ಕ್ಯಾಂಟೀನ್‌ ಉದ್ಘಾಟನೆ: ಸಚಿವ ಈಶ್ವರ ಖಂಡ್ರೆ
Last Updated 14 ಮಾರ್ಚ್ 2018, 6:37 IST
ಅಕ್ಷರ ಗಾತ್ರ

ಬೀದರ್: ‘ರಾಜ್ಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಪ್ರತಿ ವರ್ಷ ₹ 600 ರಿಂದ 800 ಕೋಟಿ ವಿದ್ಯುತ್‌ ಬಿಲ್‌ ಪಾವತಿಸುತ್ತಿವೆ. ವಿದ್ಯುತ್‌ ಉಳಿತಾಯ ಮಾಡುವ ಉದ್ದೇಶದಿಂದ ನಗರ ಪ್ರದೇಶದಲ್ಲಿ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲು ನಿರ್ಧರಿಸಿ ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಇಲ್ಲಿಯ ನಗರಸಭೆಯ ಆವರಣದಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ‘ಇಂದಿರಾ ಕ್ಯಾಂಟಿನ್’ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್‌ಇಡಿ ಬಲ್ಬ್‌ಗಳಿಗೆ ಆಟೊಮೆಟಿಕ್‌ ಆನ್‌ ಆಫ್‌ ವ್ಯವಸ್ಥೆ ಇರುವ ಕಾರಣ ಶೇಕಡ 70 ರಷ್ಟು ವಿದ್ಯುತ್‌ ಉಳಿತಾಯ ಆಗಲಿದೆ. ಇದರಿಂದ ನಗರ ಸ್ಥಳೀಯ ಸಂಸ್ಥೆಗಳಿಗೂ ಶೇಕಡ 70 ರಷ್ಟು ಹಣದ ಉಳಿತಾಯ ಆಗಲಿದೆ. ಗುತ್ತಿಗೆ ಪಡೆಯುವ ಕಂಪನಿಯೇ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕಾರಣ ಕಳ್ಳತನ ಆಗುವ ಭಯವೂ ಇರುವುದಿಲ್ಲ. 10 ವರ್ಷಗಳ ವರಗಿನ ನಿರ್ವಹಣೆಯ ಜವಾಬ್ದಾರಿಯನ್ನು ಗುತ್ತಿಗೆ ಪಡೆದವರಿಗೆ ವಹಿಸಲಾಗುವುದು’ ಎಂದು ತಿಳಿಸಿದರು.

‘ಮೊದಲು ಒಂದು ಸಾವಿರ ಜನಸಂಖ್ಯೆಗೆ ಒಬ್ಬ ಪೌರ ಕಾರ್ಮಿಕನ ನೇಮಕ ಮಾಡಲಾಗುತ್ತಿತ್ತು. ಈಗ 700 ಜನರಿಗೆ ಒಬ್ಬ ಪೌರ ಕಾರ್ಮಿಕನನ್ನು ನೇಮಕ ಮಾಡಲಾಗುತ್ತಿದೆ. ಇಲಾಖೆಯಿಂದ ಪ್ರತಿಯೊಂದು ಜಿಲ್ಲೆಗೆ ಕಾರ್ಯನಿರ್ವಾಹಕ ಎಂಜಿನಿಯರ್‌ ನೇಮಕ ಮಾಡಲಾಗುವುದು. ಕೆಪಿಎಸ್‌ಸಿ ಮೂಲಕ ಮೂರು ಸಾವಿರ ಹುದ್ದೆಗಳ ನೇಮಕ ಮಾಡಲಾಗುತ್ತಿದೆ’ ಎಂದರು.

‘ಮಾಹಿತಿ ತಂತ್ರಜ್ಞಾನ ಇಲಾಖೆಯ ಮೂಲಕ ₹ 1.25 ಕೋಟಿ ಬಿಡುಗಡೆ ಮಾಡಿಸಿ ಬೀದರ್‌, ಭಾಲ್ಕಿ ಹಾಗೂ ಹುಮನಾಬಾದ್‌ನಲ್ಲಿ ಉಚಿತ ವೈಫೈ ಸೇವೆ ಒದಗಿಸಲು ಕ್ರಮಕೈಗೊಳ್ಳಲಾಗಿದೆ. ಎಂಟು ದಿನಗಳಲ್ಲಿ ಬಿಎಸ್ಎನ್‌ಎಲ್‌ ಮೂಲಕ ಹಾಟ್‌ಸ್ಪಾಟ್‌ ಸೇವೆ ಒದಗಿಸಲಾಗುವುದು’ ಎಂದು ಹೇಳಿದರು.

‘ನಗರದಲ್ಲಿ ಒಂದೇ ಮಾದರಿಯಲ್ಲಿ ಮೂರು ಕಡೆಗೆ ಇಂದಿರಾ ಕ್ಯಾಂಟಿನ್‌ಗಳನ್ನು ನಿರ್ಮಿಸಲಾಗಿದೆ. ಕ್ಯಾಂಟೀನ್‌ನಲ್ಲಿ ಬೆಳಗಿನ ಉಪಾಹಾರ ₹ 5ಗೆ, ಮಧ್ಯಾಹ್ನ ಹಾಗೂ ರಾತ್ರಿ ಊಟ ₹10ಗೆ ದೊರೆಯಲಿದೆ. ಒಂದು ಕ್ಯಾಂಟೀನ್‌ನಲ್ಲಿ ಒಂದು ಬಾರಿಗೆ 500 ಜನ ಉಪಾಹಾರ , ಊಟ ಸೇವಿಸಬಹುದಾಗಿದೆ’ ಎಂದು ತಿಳಿಸಿದರು.

‘ತಾಂತ್ರಿಕ ಕಾರಣಗಳಿಂದಾಗಿ ನಾಲ್ಕು ತಾಲ್ಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಕ್ಕೆ ವಿಳಂಬವಾಗಿದೆ. ಶೀಘ್ರದಲ್ಲಿ ಅಲ್ಲಿಯೂ ಕ್ಯಾಂಟೀನ್‌ ಕಾರ್ಯಾರಂಭ ಮಾಡಲಿವೆ’ ಎಂದು ಹೇಳಿದರು.

ಬೀದರ್‌ ದಕ್ಷಿಣ ಶಾಸಕ ಅಶೋಕ ಖೇಣಿ ಮಾತನಾಡಿ, ‘ನಾನು ಭಾಷಣ ಮಾಡಲು ಬಂದಿಲ್ಲ. ಇಂದಿರಾ ಕ್ಯಾಂಟೀನ್‌ನಲ್ಲಿ ಇಡ್ಲಿ ತಿನ್ನಲು ಬಂದಿದ್ದೇನೆ. ಎಲ್ಲಿದೆ ಇಡ್ಲಿ ತೋರಿಸಿ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎ. ಅತೀಕ್ ಅಹ್ಮದ್, ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾ ಚಿದ್ರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಲಭೀಮ ಕಾಂಬಳೆ, ನಗರಸಭೆ ಆಯುಕ್ತ ಮನೋಹರ ಇದ್ದರು.

ಸಚಿವರ ಕಾಲಿಗೆ ಬಿದ್ದ ವಿಧವೆ: ಗಂಡನನ್ನು ಕಳೆದುಕೊಂಡಿರುವ ನನಗೆ ಮಕ್ಕಳನ್ನು ಸಲಹುವುದು ಕಷ್ಟವಾಗಿದೆ. ಪೌರ ಕಾರ್ಮಿಕರ ಕೆಲಸ ಕೊಡಿಸಬೇಕು’ ಎಂದು ವಿಧವೆಯೊಬ್ಬಳು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಕಾಲಿಗೆ ಬಿದ್ದ ಘಟನೆ
ನಡೆಯಿತು.

ಮಾಧ್ಯಮ ಪ್ರತಿನಿಧಿಗಳು ಸಚಿವರೊಂದಿಗೆ ಮಾತನಾಡುತ್ತಿದ್ದಾಗ ಮನವಿ ಪತ್ರವೊಂದನ್ನು ಹಿಡಿದುಕೊಂಡು ಬಂದ ಮಹಿಳೆ ‘ನಾನು ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕಳಾಗಿ ಕೆಲಸ ಮಾಡಿದ್ದೇನೆ. ನನ್ನ ಬಳಿ ಯಾವುದೇ ದಾಖಲೆಗಳು ಇಲ್ಲ. ನನ್ನ ಮನವಿಯನ್ನು ಪರಿಗಣಿಸಬೇಕು’ ಎಂದು ಕೈಮುಗಿದು ಸಚಿವರನ್ನು ಬೇಡಿಕೊಂಡಳು.

ಸಚಿವರು ಅಲ್ಲಿಯೇ ಇದ್ದ ನಗರಸಭೆಯ ಆಯುಕ್ತ ಮನೋಹರ ಅವರ ಕೈಗೆ ಮನವಿಪತ್ರವನ್ನು ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಸಚಿವರ ಕಾಲಿಗೆ ಬಿದ್ದ ವಿಧವೆ
ಬೀದರ್:
ಗಂಡನನ್ನು ಕಳೆದುಕೊಂಡಿರುವ ನನಗೆ ಮಕ್ಕಳನ್ನು ಸಲಹುವುದು ಕಷ್ಟವಾಗಿದೆ. ಪೌರ ಕಾರ್ಮಿಕರ ಕೆಲಸ ಕೊಡಿಸಬೇಕು’ ಎಂದು ವಿಧವೆಯೊಬ್ಬಳು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಕಾಲಿಗೆ ಬಿದ್ದ ಘಟನೆ ನಡೆಯಿತು.

ಮಾಧ್ಯಮ ಪ್ರತಿನಿಧಿಗಳು ಸಚಿವರೊಂದಿಗೆ ಮಾತನಾಡುತ್ತಿದ್ದಾಗ ಮನವಿಪತ್ರವೊಂದನ್ನು ಹಿಡಿದುಕೊಂಡು ಬಂದ ಮಹಿಳೆ ‘ನಾನು ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕಳಾಗಿ ಕೆಲಸ ಮಾಡಿದ್ದೇನೆ. ನನ್ನ ಬಳಿ ಯಾವುದೇ ದಾಖಲೆಗಳು ಇಲ್ಲ. ನನ್ನ ಮನವಿಯನ್ನು ಪರಿಗಣಿಸಬೇಕು’ ಎಂದು ಕೈಮುಗಿದು ಬೇಡಿಕೊಂಡಳು.

ಸಚಿವರು ಅಲ್ಲಿಯೇ ಇದ್ದ ನಗರಸಭೆಯ ಆಯುಕ್ತ ಮನೋಹರ ಅವರ ಕೈಗೆ ಮನವಿಪತ್ರವನ್ನು ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಮೊದಲ ದಿನ ಸಿಗದ ಊಟ
ಬೀದರ್‌:
ಇಂದಿರಾ ಕ್ಯಾಂಟೀನ್‌ ಉದ್ಘಾಟನೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಒಂದೂವರೆ ತಾಸು ವಿಳಂಬ ಮಾಡಿ ಬಂದದ್ದರಿಂದ ಜನರಿಗೆ ಉಪಾಹಾರ ಮಾತ್ರ ದೊರೆಯಿತು. ಮಧ್ಯಾಹ್ನ ಊಟ ದೊರೆಯಲಿಲ್ಲ. ಕ್ಯಾಂಟೀನ್‌ ಉದ್ಘಾಟನೆಯಾದ ತಕ್ಷಣ ಸಾರ್ವಜನಿಕರಿಗೆ ಉಚಿತ ಉಪಾಹಾರ ನೀಡಲಾಯಿತು.

‘ಉದ್ಘಾಟನೆ ಕಾರ್ಯಕ್ರಮ ತಡ ಆದ ಕಾರಣ ಊಟ ಸಿದ್ಧಪಡಿಸಲಿಲ್ಲ. ಸಮಯಕ್ಕೆ ಸರಿಯಾಗಿ ಉದ್ಘಾಟನೆಯಾಗಿದ್ದರೆ ಊಟವನ್ನೂ ಸಿದ್ಧಪಡಿಸ ಬಹು ದಿತ್ತು. ಸಂಜೆ 500 ಜನರಿಗೆ ಊಟ ದೊರೆಯಲಿದೆ’ ಎಂದು ಕ್ಯಾಂಟೀನ್‌ ಸಿಬ್ಬಂದಿ ತಿಳಿಸಿದರು.

ಮತದ ಮೌಲ್ಯ 25 ಪೈಸೆ
ಬೀದರ್‌:
‘ಜಾತಿ ಹೆಸರಲ್ಲಿ ನನಗೆ ಯಾರೂ ಮತ ಹಾಕಿಲ್ಲ. ಆದರೆ, ಇಂದು ₹ 500 ಹಾಗೂ ₹1,000 ಕೊಟ್ಟು ಮತದಾರರನ್ನು ಖರೀದಿಸುವ ಪ್ರಯತ್ನಗಳು ನಡೆದಿವೆ. ಮತಕ್ಕಾಗಿ ಹಣ ಕೊಡುವ ರಾಜಕಾರಣಿಗಳು ದಿನಕ್ಕೆ 25 ಪೈಸೆ ಗೊತ್ತುಪಡಿಸಿ ಹಣ ಕೊಡುತ್ತಿದ್ದಾರೆ. ಆದ್ದರಿಂದ ಚುನಾವಣೆಯಲ್ಲಿ ಯಾರೂ ಮತಗಳನ್ನು ಮಾರಿಕೊಳ್ಳಬಾರದು’ ಎಂದು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂ ಖಾನ್ ಮನವಿ ಮಾಡಿದರು.

‘ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂದರ್ಭದಲ್ಲೂ ಕೈಗೆ ಗ್ಲುಕೋಸ್‌ ಹಚ್ಚಿಕೊಂಡು ಸಹಿ ಮಾಡಿ ಅನೇಕ ಜನರ ವರ್ಗಾವಣೆಗೆ ನೆರವಾಗಿದ್ದೇನೆ. ಜನರಿಗೆ ನೆರವಾಗುವ ವಿಷಯದಲ್ಲಿ ಎಂದೂ ಜಾತಿ ರಾಜಕಾರಣ ಮಾಡಿಲ್ಲ’ ಎಂದರು.

‘ಚುನಾವಣೆ ಸಮೀಪ ಬಂದ ಮೇಲೆ ರಾಜಕಾರಣಿಗಳಿಗೆ ಜಾತಿ, ಧರ್ಮಗಳು ನೆನಪಿಗೆ ಬರುತ್ತವೆ. ಪಟ್ಟಭದ್ರ ಹಿತಾಸಕ್ತಿಗಳು ಜಾಗೃತಗೊಳ್ಳುತ್ತವೆ. ಅಂತಹ ಶಕ್ತಿಗಳನ್ನು ಮಟ್ಟಹಾಕುವಂತೆ ಪೊಲೀಸರಿಗೆ ತಿಳಿಸಲಾಗಿದೆ’ ಎಂದು ಹೇಳಿದರು.

‘ಉಪ ಚುನಾವಣೆಯಿಂದಾಗಿ ನಾನು ಎರಡು ಬಾರಿ ಶಾಸಕನಾಗಿದ್ದೇನೆ. ಈ ಬಾರಿ ಪೂರ್ಣಾವಧಿಗೆ ಆಯ್ಕೆ ಮಾಡಲು ಸಹಕರಿಸಬೇಕು’ ಎಂದು ಮನವಿ ಮಾಡಿದರು.

*
ಬೀದರ್‌ ನಗರದ ಅಭಿವೃದ್ಧಿಗೆ ₹ 35 ಕೋಟಿ ಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಸರ್ಕಾರ ₹ 80 ಕೋಟಿ ಅನುದಾನ ಒದಗಿಸಿ ಅಭಿವೃದ್ಧಿಗೆ ನೆರವಾಗಿದೆ.
–ಶಾಲಿನಿ ಚಿಂತಾಮಣಿ, ನಗರಸಭೆ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT