ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಮೊದಲ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಗೆದ್ದ ಹಿಮಾಚಲ ಪ್ರದೇಶ

ತಮಿಳುನಾಡು ತಂಡಕ್ಕೆ ಆಘಾತ
Last Updated 26 ಡಿಸೆಂಬರ್ 2021, 15:50 IST
ಅಕ್ಷರ ಗಾತ್ರ

ಜೈಪುರ: ಹಿಮಾಲಯ ಪರ್ವತದಷ್ಟೇ ತಣ್ಣಗೆ ಬ್ಯಾಟಿಂಗ್ ಮಾಡಿದ ಶುಭಂ ಅರೋರಾ ಶತಕದ ಬಲದಿಂದ ಹಿಮಾಚಲ ಪ್ರದೇಶವು ಮೊಟ್ಟಮೊದಲ ಸಲ ವಿಜಯ್ ಹಜಾರೆ ಟ್ರೋಫಿಯನ್ನು ಗೆದ್ದುಕೊಂಡಿತು.

ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಹಿಮಾಚಲ ಪ್ರದೇಶವು ವಿ.ಜಯದೇವನ್ ನಿಯಮದನ್ವಯ 11 ರನ್‌ಗಳಿಂದ ಗೆದ್ದಿತು. ಇದರೊಂದಿಗೆ ಆರನೇ ಸಲ ಪ್ರಶಸ್ತಿ ಜಯಿಸುವ ತಮಿಳುನಾಡು ತಂಡದ ಕನಸು ಭಗ್ನವಾಯಿತು. ಅನುಭವಿ ವಿಕೆಟ್‌ಕೀಪರ್– ಬ್ಯಾಟರ್ ದಿನೇಶ್ ಕಾರ್ತಿಕ್ (116;103ಎ, 4X8, 6X7) ಸುಂದರ ಶತಕವೂ ವ್ಯರ್ಥವಾಯಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ತಮಿಳುನಾಡು ತಂಡವು 49.4 ಓವರ್‌ಗಳಲ್ಲಿ 314 ರನ್‌ಗಳ ಗಳಿಸಿ, ಹಿಮಾಚಲಕ್ಕೆ ಕಠಿಣ ಗುರಿಯೊಡ್ಡಿತು.

ವಿಕೆಟ್‌ಕೀಪರ್ ಬ್ಯಾಟರ್, ಶುಭಂ ಅರೋರಾ (ಅಜೇಯ 136; 131ಎ, 4X13, 6X1 ) ಅಮೋಘ ಶತಕದ ಬಲದಿಂದ ಹಿಮಾಚಲ ತಂಡವು 47.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 299 ರನ್ ಗಳಿಸಿತು. ಸಂಜೆ ಐದು ಗಂಟೆ ಸುಮಾರಿಗೆ ಹಿಮಾಚಲ ತಂಡವು ಗೆಲುವಿಗಾಗಿ 15 ಎಸೆತಗಳಲ್ಲಿ 16 ರನ್ ಗಳಿಸಬೇಕಿತ್ತು. ಈ ಹೊತ್ತಿನಲ್ಲಿ ಮಂದಬೆಳಕಿನ ಕಾರಣ ಆಟ ಸ್ಥಗಿತಗೊಳಿಸಲಾಯಿತು. ವಿ.ಜಯದೇವನ್ ನಿಯಮದಡಿಯಲ್ಲಿ ನಡೆದ ಲೆಕ್ಕಾಚಾರದಲ್ಲಿ ಹಿಮಾಚಲ ಪ್ರದೇಶವು ಉತ್ತಮ ರನ್‌ ಸರಾಸರಿ ಹೊಂದಿತ್ತು. ಆದ್ದರಿಂದ ವಿಜಯೀ ಎಂದು ಘೋಷಿಸಲಾಯಿತು.

ತಮಿಳುನಾಡು ತಂಡವು ಈಚೆಗೆ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಜಯಿಸಿತ್ತು. ಹೋದ ವರ್ಷವೂ ಗೆದ್ದಿತ್ತು. 2019ರಿಂದ ಸೀಮಿತ ಓವರ್‌ಗಳ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮಿತ್ತು. ಈ ಟೂರ್ನಿಯುದ್ದಕ್ಕೂ ಆಲ್‌ರೌಂಡ್ ಆಟವಾಡಿದ್ದ ತಮಿಳುನಾಡು ತಂಡಕ್ಕೆ ‘ಕಪ್ಪುಕುದುರೆ’ಯಾಗಿ ಕಣಕ್ಕಿಳಿದಿದ್ದ ಹಿಮಾಚಲ ತಂಡವು ಆಘಾತ ನೀಡಿತು.

ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡಕ್ಕೆ ರಿಷಿ ಧವನ್ ಮತ್ತು ಪಂಕಜ್ ಜೈಸ್ವಾಲ್ ಅವರು ಆರಂಭದಲ್ಲಿಯೇ ಪೆಟ್ಟು ಕೊಟ್ಟರು. ಅವರ ಅಮೋಘ ಬೌಲಿಂಗ್‌ನಿಂದಾಗಿ ತಮಿಳುನಾಡು ತಂಡವು 40 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಗೂಡಿದ ದಿನೇಶ್ (116; 103ಎ) ಮತ್ತು ಬಾಬಾ ಇಂದ್ರಜೀತ್ (80; 71ಎ, 4X8, 6X1) ಐದನೇ ವಿಕೆಟ್ ಜೊತೆಯಾಟದಲ್ಲಿ 208 ರನ್‌ ಸೇರಿಸಿದರು. ತಮಗೆ ಲಭಿಸಿದ ಎರಡು ಜೀವದಾನಗಳ ಲಾಭ ಪಡೆದ ದಿನೇಶ್ ಆಕರ್ಷಕ ಶತಕ ಗಳಿಸಿದರು. ಶಾರೂಕ್ ಖಾನ್ 21 ಎಸೆತಗಳಲ್ಲಿ 42 ರನ್‌ ಗಳಿಸಿ ಮತ್ತೊಮ್ಮೆ ಮಿಂಚಿದರು.

ಆದರೆ ಇವರೆಲ್ಲರ ಶ್ರಮಕ್ಕೆ ಹಿಮಾಚಲದ ಆರಂಭಿಕ ಬ್ಯಾಟರ್ ಶುಭಂ ತಣ್ಣೀರೆರಚಿದರು. ಇನ್ನೊಂದೆಡೆ ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬೇಗನೆ ಔಟಾದರು. ಇದರಿಂದಾಗಿ ತಂಡದ ಮೊತ್ತವು 100 ರ ಗಡಿ ದಾಟುವ ಮುನ್ನವೇ ಮೂರು ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಶುಭಂ ಜೊತೆಗೂಡಿದ ಅಮಿತ್ ಕುಮಾರ್ (74; 79ಎ) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 148 ರನ್ ಸೇರಿಸಿದರು.

ಅಮಿತ್ ನಿರ್ಗಮನದ ನಂತರ ನಾಯಕ ರಿಷಿ (ಅಜೇಯ 42) ಮತ್ತು ಶುಭಂ ತಂಡದ ಗೆಲುವಿಗೆ ಬಲ ತುಂಬಿದರು. ರಿಷಿ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್‌ನಲ್ಲಿ 100 ವಿಕೆಟ್ ಗಳಿಸಿ ಮತ್ತು ಶತಕವನ್ನೂ ಬಾರಿಸಿದ ಆಲ್‌ರೌಂಡರ್ ಎಂಬ ದಾಖಲೆ ಬರೆದರು. ಕಳೆದ ಪಂದ್ಯದಲ್ಲಿ ಅವರು ಶತಕ ಹೊಡೆದಿದ್ದರು.

ಸಂಕ್ಷಿಪ್ತ ಸ್ಕೋರು: ತಮಿಳುನಾಡು: 49.4 ಓವರ್‌ಗಳಲ್ಲಿ 314 (ದಿನೇಶ್ ಕಾರ್ತಿಕ್ 116, ಬಾಬಾ ಇಂದ್ರಜೀತ್ 80, ಶಾರೂಖ್ ಖಾನ್ 42, ಪಂಕಜ್ ಜೈಸ್ವಾಲ್ 59ಕ್ಕೆ4, ರಿಷಿ ಧವನ್ 62ಕ್ಕೆ3), ಹಿಮಾಚಲ ಪ್ರದೇಶ: 47.3 ಓವರ್‌ಗಳಲ್ಲಿ 4ಕ್ಕೆ 299 (ಶುಭಂ ಅರೋರಾ ಔಟಾಗದೆ 136, ಅಮಿತ್ ಕುಮಾರ್ 74, ರಿಷಿ ಧವನ್ ಔಟಾಗದೆ 42, ವಾಷಿಂಗ್ಟನ್ ಸುಂದರ್ 47ಕ್ಕೆ1) ಫಲಿತಾಂಶ: ಹಿಮಾಚಲ ಪ್ರದೇಶಕ್ಕೆ 11 ರನ್‌ಗಳ ಜಯ (ಮಂದಬೆಳಕಿನ ಕಾರಣ ಪಂದ್ಯ ಸ್ಥಗಿತ. ವಿಜೆಡಿ ನಿಯಮ ಅನ್ವಯ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT