ಗುರುವಾರ , ಸೆಪ್ಟೆಂಬರ್ 23, 2021
20 °C

ಟೆಸ್ಟ್‌ ಕ್ರಿಕೆಟ್ ಆಡಲು ಸಾಕಷ್ಟು ಪ್ರೋತ್ಸಾಹ ಸಿಗುತ್ತಿಲ್ಲ: ವಿರಾಟ್ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನಾಟಿಂಗ್‌ಹ್ಯಾಂ: ಟೆಸ್ಟ್‌ ಕ್ರಿಕೆಟ್‌ ಆಡಲು ಆಟಗಾರರಿಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿಲ್ಲ ಎಂದು ನನಗನಿಸುತ್ತದೆ ಎಂದು ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್‌ ತಂಡಗಳು ಸೆಣಸಲಿರುವ ಐದು ಪಂದ್ಯಗಳ ಟೆಸ್ಟ್‌ ಸರಣಿಯು ನಾಳೆಯಿಂದ (ಬುಧವಾರ) ಆರಂಭವಾಗಲಿದೆ. ಎರಡನೇ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ (ಡಬ್ಲ್ಯುಟಿಸಿ) ಮೊದಲ ಸರಣಿ ಇದಾಗಿದೆ.

ಕ್ರೀಡಾವಾಹಿನಿಯೊಂದರ ಸಂದರ್ಶನದಲ್ಲಿ ಹಿರಿಯ ಕ್ರಿಕೆಟಿಗ ದಿನೇಶ್‌ ಕಾರ್ತಿಕ್‌ ಅವರೊಂದಿಗೆ ಭಾಗವಹಿಸಿದ ಕೊಹ್ಲಿ, ʼಟೆಸ್ಟ್‌ ಕ್ರಿಕೆಟ್‌ ಮೂರು ವರ್ಷಗಳ ಹಿಂದೆಯೂ ಸಂಕಷ್ಟದಲ್ಲಿತ್ತು. ಈ ಮಾದರಿಯ ಕ್ರಿಕೆಟ್‌ ಉಳಿದಿರಲು ಆಟಗಾರರೇ ಕಾರಣ ಎಂದು ನನಗನಿಸುತ್ತದೆ. ಪ್ರಾಮಾಣಿಕವಾಗಿ ಹೇಳುವುದಾದರೆ, ಟೆಸ್ಟ್‌ ಕ್ರಿಕೆಟ್‌ ಆಡಬೇಕೆನ್ನುವ ಮನಸ್ಥಿತಿ ಮತ್ತು ಹಪಾಹಪಿ ನಮ್ಮಲ್ಲಿ ಇಲ್ಲವಾದರೆ, ಅದರಿಂದ ದೀರ್ಘ ಮಾದರಿಯ ಕ್ರಿಕೆಟ್‌ಗೆ ದೊಡ್ಡ ಹೊಡೆತ ಬೀಳಲಿದೆ. ಇದನ್ನು ನಾನು ಖಚಿತವಾಗಿ ಹೇಳಬಲ್ಲೆʼ ಎಂದು ಹೇಳಿದ್ದಾರೆ.

ʼಡಬ್ಲ್ಯುಟಿಸಿ ಸಕಾರಾತ್ಮಕ ನಡೆಯಾಗಿದ್ದು, ಸರಿಯಾದ ದಿಕ್ಕಿನಲ್ಲಿದೆ. ಆಟಗಾರರು ಟೆಸ್ಟ್‌ ಕ್ರಿಕೆಟ್‌ನಿಂದ ಏನನ್ನು ಬಯಸುತ್ತಾರೆ ಎಂಬುದರ ಮೇಲೆ ಟೆಸ್ಟ್‌ ಕ್ರಿಕೆಟ್‌ ನಿಂತಿದೆ. ಜನರು ಟಿವಿಯಲ್ಲಿ ಟೆಸ್ಟ್‌ ಪಂದ್ಯಗಳನ್ನು ವೀಕ್ಷಿಸುವಾಗ ಒಂದೇಒಂದು ಎಸೆತವನ್ನೂ ತಪ್ಪಿಸಿಕೊಳ್ಳಬಾರದೆಂದು ಭಾವಿಸಿದರೆ, ಅದು ಖಂಡಿತಾ ಟೆಸ್ಟ್‌ ಕ್ರಿಕೆಟ್‌ ಅನ್ನು ಉಳಿಸುತ್ತದೆʼ ಎಂದಿದ್ದಾರೆ.

ಸಾಕಷ್ಟು ತಂಡಗಳು ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಕಾರ್ತಿಕ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ʼಮುಖ್ಯವಾಗಿ ನೀವು ನಿಮ್ಮ ದೃಷ್ಟಿಯಲ್ಲಿ ಪ್ರಾಮಾಣಿಕವಾಗಿರಬೇಕು. ಟೆಸ್ಟ್‌ ಕ್ರಿಕೆಟ್ ಕಠಿಣವಾದುದು ಎಂಬುದು ನಿಮಗೆ ಗೊತ್ತು. ಕನ್ನಡಿಯ ಮುಂದೆ ನಿಂತು ನೀವು ಟೆಸ್ಟ್‌ ಕ್ರಿಕೆಟ್‌ ಆಡಲು ಬಯಸುವಿರಾ ಎಂದು ಕೇಳಿಕೊಳ್ಳಿ. ಉತ್ತರ ಹೌದು ಎಂದಾದರೆ, ಪಟ್ಟುಬಿಡದೆ ಆಡಿ. ಕೆಲವೊಮ್ಮೆ ನಾನು ಗಮನಿಸಿದಂತೆ ಟೆಸ್ಟ್‌ ಕ್ರಿಕೆಟ್‌ ಆಡಲು ಆಟಗಾರರಿಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿಲ್ಲ ಎಂಬುದು ನನ್ನ ಪ್ರಾಮಾಣಿಕವಾದ ಭಾವನೆ. ಅದಕ್ಕಾಗಿಯೇ ಹೆಚ್ಚಿನ ತಂಡಗಳು ಟೆಸ್ಟ್ ಕ್ರಿಕೆಟ್‌ ಅನ್ನು ಕೈಬಿಡುತ್ತವೆʼ ಎಂದಿದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು