ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಆಯೋಜಿಸಲು ಪ್ರಯತ್ನಿಸಿರುವುದರಲ್ಲಿ ತಪ್ಪೇನಿಲ್ಲ: ಗಂಗೂಲಿ

Last Updated 6 ಮೇ 2021, 12:55 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆ ತೀವ್ರವಾಗಿ ವ್ಯಾಪಿಸಿರುವ ನಡುವೆ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ಟ್ವೆಂಟಿ-20 ಟೂರ್ನಿಯನ್ನು ಆಯೋಜಿಸಲು ಪ್ರಯತ್ನಿಸಿರುವುದರಲ್ಲಿ ತಪ್ಪೇನಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಸಮರ್ಥಿಸಿಕೊಂಡಿದ್ದಾರೆ.

ಕೋವಿಡ್‌ನಿಂದ ಜನರು ಸಂಕಷ್ಟಕ್ಕೊಳಗಾಗಿದ್ದು, ಈ ನಡುವೆ ಐಪಿಎಲ್ ಆಯೋಜನೆಗೆ ಮುಂದಾಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಕೊನೆಗೂ ಐಪಿಎಲ್ ಬಯೋಬಬಲ್‌ ಅನ್ನು ಕೋವಿಡ್ ಬೇಧಿಸಿದ ಪರಿಣಾಮ ಟೂರ್ನಿಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಬೇಕಾಯಿತು.

ಭಾರತದಲ್ಲಿ ಐಪಿಎಲ್ ಆಯೋಜಿಸುವ ತಪ್ಪು ನಿರ್ಧಾರ ತೆಗೆದುಕೊಳ್ಳಲಾಗಿತ್ತೇ ಎಂಬುದನ್ನು ಪ್ರಶ್ನಿಸಿದಾಗ, ನಾವು ಟೂರ್ನಿ ಆಯೋಜಿಸಲು ನಿರ್ಧರಿಸಿದ್ದಾಗ ಪ್ರಕರಣಗಳು ಕೋವಿಡ್ ನಿಯಂತ್ರಣದಲ್ಲಿತ್ತು. ಇಂಗ್ಲೆಂಡ್ ಸರಣಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದೇವೆ ಎಂದು ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಹಮದಾಬಾದ್‌ನಲ್ಲಿ ನಡೆದ ಕೊನೆಯ ಎರಡು ಪಂದ್ಯಗಳಲ್ಲಿ ಪ್ರೇಕ್ಷಕರನ್ನು ಸ್ಟೇಡಿಯಂಗೆ ಪ್ರವೇಶಿಸಲು ಅನುವು ಮಾಡಿಕೊಡಲಾಗಿತ್ತು ಎಂಬುದನ್ನು ತಿಳಿಸಿದರು.

ಕಳೆದ ವರ್ಷ ಯುಎಇನಲ್ಲಿ ಐಪಿಎಲ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಆದರೆ ಈ ಬಾರಿ ಕೋವಿಡ್ ಪ್ರಕರಣ ಸಂಖ್ಯೆಗಳು ಕಡಿಮೆಯಾಗಿದ್ದರಿಂದ ಭಾರತವನ್ನೇ ಪರಿಗಣಿಸಲಾಗಿತ್ತು ಎಂದು ಹೇಳಿದ್ದಾರೆ.

ಯುಎಇ ಬಗ್ಗೆ ನಾವು ಚರ್ಚಿಸಿದ್ದೇವೆ. ಆದರೆ ಅಂತಿಮವಾಗಿ ಭಾರತದಲ್ಲೇ ನಡೆಸಲು ನಿರ್ಧರಿಸಿದ್ದೆವು. ಕೊನೆಯ ಮೂರು ವಾರಗಳಲ್ಲಿ ಕೋವಿಡ್ ಪ್ರಕರಣಗಳು ತಾರಕಕ್ಕೇರಿವೆ ಎಂದು ಗಂಗೂಲಿ ನುಡಿದಿದ್ದಾರೆ.

ಐಪಿಎಲ್ ಬಯೋಬಬಲ್ ಹೊರತಾಗಿಯೂ 10ಕ್ಕೂ ಹೆಚ್ಚು ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳಲ್ಲಿ ಕೋವಿಡ್ ಸೋಂಕು ದೃಢಗೊಂಡ ಬೆನ್ನಲ್ಲೇ ಟೂರ್ನಿಯನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟ ಅವಧಿಗೆ ಮುಂದೂಡಲು ಬಿಸಿಸಿಐ ನಿರ್ಧರಿಸಿತ್ತು.

ಬಯೋಬಬಲ್‌ಗೆ ಕೊರೊನಾವೈರಸ್ ಹೇಗೆ ಪ್ರವೇಶಿಸಿತ್ತು ಎಂಬುದನ್ನು ಹೇಳುವುದು ಕಷ್ಟಕರ. ವೃತ್ತಿಪರರು ಇದನ್ನು ನಿಭಾಯಿಸಿದ್ದರು. ಆದರೆ ಯಾವ ಕ್ರೀಡೆಯು ಸಾಂಕ್ರಾಮಿಕ ರೋಗದಿಂದ ಹೊರತಾಗಿಲ್ಲ ಎಂದು ಗಂಗೂಲಿ ತಿಳಿಸಿದ್ದಾರೆ.

ಬಿಡುವಿಲ್ಲದ ವೇಳಾಪಟ್ಟಿ ಹೊಂದಿರುವ ಕಾರಣ ಟೂರ್ನಿಯನ್ನು ಮರು ನಿಗದಿಪಡಿಸುವುದು ಕಷ್ಟಕರವೆನಿಸಿತ್ತು. ನಿಗದಿತ ಅವಧಿಯೊಳಗೆ ಆಟಗಾರರನ್ನು ಅವರವರ ದೇಶಗಳಲ್ಲಿ ಬಿಡುಗಡೆಗೊಳಿಸಬೇಕಿತ್ತು ಎಂದು ಗಂಗೂಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT