ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಚ್‌ ಟೀಕಾಕಾರರಿಗೆ ವಿವಿಯನ್ ರಿಚರ್ಡ್ಸ್ ತಿರುಗೇಟು

Last Updated 1 ಮಾರ್ಚ್ 2021, 15:02 IST
ಅಕ್ಷರ ಗಾತ್ರ

ನವದೆಹಲಿ: ಅಹಮದಾಬಾದಿನ ಮೊಟೇರಾದ ಪಿಚ್‌ ಗುಣಮಟ್ಟದ ಕುರಿತು ಟೀಕಿಸುವವರಿಗೆ ವೆಸ್ಟ್‌ ಇಂಡೀಸ್‌ನ ಕ್ರಿಕೆಟ್ ದಂತಕಥೆ ವಿವಿಯನ್ ರಿಚರ್ಡ್ಸ್‌ ತಿರುಗೇಟು ಕೊಟ್ಟಿದ್ದಾರೆ.

’ಮೊಟೇರಾದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ಕುರಿತು ಹಲವರು ನನಗೆ ಅಭಿಪ್ರಾಯ ಕೇಳುತ್ತಿದ್ದಾರೆ. ನಾನು ತುಸು ಗೊಂದಲದಲ್ಲಿದ್ದಾರೆ. ಈ ವಿಷಯದ ಕುರಿತು ಹಲವರಿಂದ ಈಗಾಗಲೇ ನರಳಿಕೆ ವ್ಯಕ್ತವಾಗಿದೆ. ಒಂದೊಮ್ಮೆ ಚೆಂಡು ಗುಡ್‌ಲೆಂಗ್ತ್ ನಲ್ಲಿ ಪುಟಿದೆದ್ದು ಬರುತ್ತಿದ್ದ ಪಿಚ್‌ಗಳಿದ್ದವು. ಈಗಲೂ ಅದೇ ರೀತಿ ಇರಬೇಕು ಎಂದು ಬಯಸುವುದು ಬ್ಯಾಟ್ಸ್‌ಮನ್‌ಗಳ ಸಮಸ್ಯೆ‘ ಎಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಾಕಿರುವ ವಿಡಿಯೊದಲ್ಲಿ ರಿಚರ್ಡ್ಸ್‌ ಹೇಳಿದ್ದಾರೆ.

’ಈಗ ಇನ್ನೊಂದು ಮುಖ ಕಾಣುತ್ತಿದೆ. ಈ ತರಹದ ಪ್ರಯೋಗದಿಂದಾಗಿಯೇ ಇದನ್ನು ಟೆಸ್ಟ್ ಕ್ರಿಕೆಟ್ ಎಂದು ಕರೆಯುತ್ತಾರೆ. ಏಕೆಂದರೆ ಇದು ಆಟಗಾರನ ಮನಸ್ಸು ಮತ್ತು ದೈಹಿಕ ಶಕ್ತಿಯ ಪರೀಕ್ಷೆಯಾಗಿದೆ. ಚೆಂಡು ಹೆಚ್ಚು ಸ್ಪಿನ್ ಆಗುತ್ತಿದೆ ಎಂದೆಲ್ಲಾ ದೂರುವುದು ಇದ್ದೇ ಇದೆ. ಈ ರೀತಿಯು ನಾಣ್ಯದ ಇನ್ನೊಂದು ಮುಖವಷ್ಟೇ‘ ಎಂದಿದ್ದಾರೆ.

’ಭಾರತದಲ್ಲಿ ಆಡಲು ತೆರಳುವಾಗ ಈ ರೀತಿಯ ಸ್ಪಿನ್ ಸ್ನೇಹಿ ಪಿಚ್‌ಗಳು ನಿರೀಕ್ಷಿತವಾಗಿರುತ್ತವೆ. ಭಾರತವೆಂದರೆ ಸ್ಪಿನ್ ಭೂಮಿ. ಅದಕ್ಕೆ ತಕ್ಕಂತೆ ಪೂರ್ವಸಿದ್ಧತೆ ಇರಬೇಕು. ಯಾವ ಪರಿಸ್ಥಿತಿ ಮತ್ತು ತಂತ್ರಗಳನ್ನು ಎದುರಿಸುತ್ತೇವೆ ಎಂಬುದರ ಕುರಿತು ಆಳವಾದ ಅಧ್ಯಯನ ಮತ್ತು ಅಭ್ಯಾಸ ಮಾಡಿಕೊಂಡೇ ಭಾರತಕ್ಕೆ ಹೋಗಬೇಕು‘ ಎಂದರು.

’ಸರಣಿಯ ಮೊದಲ ಪಂದ್ಯದಲ್ಲಿ ಗೆದ್ದ ನಂತರ ಇಂಗ್ಲೆಂಡ್ ತಂಡವು ನಿರಾಳ ವಲಯದಲ್ಲಿತ್ತು. ಇದೀಗ ಭಾರತವು ಎರಡು ಟೆಸ್ಟ್‌ಗಳಲ್ಲಿ ಸೋಲಿಸಿದ ನಂತರ ಪ್ರವಾಸಿ ಬಳಗವು ತನ್ನ ನಿರಾಳ ವಲಯದಿಂದ ಹೊರಬಿದ್ದಿದೆ. ಸ್ಪಿನ್ ಬೌಲಿಂಗ್‌ ಎಂಬುವುದು ಕ್ರಿಕೆ್ಟ್‌ನ ಅವಿಭಾಜ್ಯ ಅಂಗ. ಪ್ರಸ್ತುತ ಭಾರತದ ಮಧ್ಯಮವೇಗಿಗಳೂ ಅಮೋಘವಾಗಿ ಆಡುತ್ತಿದ್ದಾರೆ. ಎಲ್ಲ ಪಿಚ್‌ಗಳಲ್ಲಿಯೂ ವಿಕೆಟ್ ಗಳಿಕೆಯ ಸಾಮರ್ಥ್ಯ ಹೊಂದಿದ್ದಾರೆ‘ ಎಂದು ಹೇಳಿದರು.

’ಭಾರತದಲ್ಲಿರುವ ಇಂಗ್ಲೆಂಡ್ ತಂಡವು ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧತೆ ನಡೆಸಬೇಕು. ಅದಕ್ಕಾಗಿ ಕಠಿಣ ಪರಿಶ್ರಮ ಅಗತ್ಯ. ಪಂದ್ಯದಲ್ಲಿ ಹೀಗೆ ಇರಬೇಕು ಎಂಬ ನಿಯಮ ಯಾವ ಪುಸ್ತಕದಲ್ಲಿಯೂ ಇಲ್ಲ. ಸೊಗಸಾದ ಮತ್ತು ಸಾಂಪ್ರದಾಯಿಕ ಶೈಲಿಯಲ್ಲಿಯೇ ರನ್‌ ಗಳಿಸುವತ್ತ ಬ್ಯಾಟ್ಸ್‌ಮನ್‌ಗಳು ಚಿತ್ತ ಹರಿಸಬೇಕು‘ ಎಂದು ರಿಚರ್ಡ್ಸ್‌ ಸಲಹೆ ನೀಡಿದ್ದಾರೆ.

ಭಾರತ ತಂಡವು ಹೋದ ವಾರ ಮೊಟೇರಾದಲ್ಲಿ ಇಂಗ್ಲೆಂಡ್ ತಂಡದ ಎದುರಿನ ಮೂರನೇ ಟೆಸ್ಟ್‌ನಲ್ಲಿ ಎರಡೇ ದಿನಗಳಲ್ಲಿ ಜಯಿಸಿತ್ತು. ನಾಲ್ಕು ಪಂದ್ಯಗಳ ಸರಣಿಯಲ್ಲಿ 2–1ರ ಮುನ್ನಡೆ ಸಾಧಿಸಿದೆ. ಆ ಸಂದರ್ಭದಲ್ಲಿ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ ಸೇರಿದಂತೆ ಕೆಲವು ಮಾಜಿ ಕ್ರಿಕೆಟಿಗರು ಪಿಚ್ ಕುರಿತು ಟೀಕೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT