ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ತಂಡಕ್ಕೆ ಮರಳುವೆ: ರಹಾನೆ ವಿಶ್ವಾಸದ ಮಾತು

ಭಾರತದ ಕ್ರಿಕೆಟಿಗ ಅಜಿಂಕ್ಯ ರಹಾನೆ ವಿಶ್ವಾಸ
Last Updated 11 ಜುಲೈ 2020, 15:03 IST
ಅಕ್ಷರ ಗಾತ್ರ

ನವದೆಹಲಿ: ‘ನಾನು ಮತ್ತೆ ಏಕದಿನ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆಯುತ್ತೇನೆ. ಯಾವುದೇ ಕ್ರಮಾಂಕದಲ್ಲಾದರೂ ಬ್ಯಾಟಿಂಗ್‌ ಮಾಡಲು ಸಿದ್ಧನಿದ್ದೇನೆ’ ಎಂದು ಭಾರತದ ಕ್ರಿಕೆಟಿಗ ಅಜಿಂಕ್ಯ ರಹಾನೆ ಹೇಳಿದ್ದಾರೆ.

32 ವರ್ಷ ವಯಸ್ಸಿನ ಅಜಿಂಕ್ಯ ಅವರಿಗೆ 2018ರ ಫೆಬ್ರುವರಿ ಬಳಿಕ ಏಕದಿನ ತಂಡದಲ್ಲಿ ಅವಕಾಶ ಸಿಕ್ಕಿಲ್ಲ.

ಭಾರತದ ಹಿರಿಯ ಕ್ರಿಕೆಟಿಗ ದೀಪ್‌ ದಾಸ್‌ಗುಪ್ತಾ ನಡೆಸಿಕೊಡುವ ಇಎಸ್‌ಪಿಎನ್‌ ಕ್ರಿಕ್‌ ಇನ್ಫೊ ಸಂವಾದ ಕಾರ್ಯಕ್ರಮದಲ್ಲಿ ಶನಿವಾರ ರಹಾನೆ ಭಾಗವಹಿಸಿದ್ದರು.

‘ಆರಂಭಿಕ, ನಾಲ್ಕನೇ ಅಥವಾ ಇನ್ಯಾವುದೇ ಕ್ರಮಾಂಕದಲ್ಲಾದರೂ ಆಡಲು ನಾನು ತಯಾರಿದ್ದೇನೆ. ಅವಕಾಶ ಯಾವಾಗ ಸಿಗುತ್ತದೆಯೋ ಗೊತ್ತಿಲ್ಲ. ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ಆಡಬೇಕೆಂಬುದು ನನ್ನ ಗುರಿ. ಇದಕ್ಕಾಗಿ ಮಾನಸಿಕವಾಗಿ ಸಿದ್ಧನಾಗುತ್ತಿದ್ದೇನೆ. ವೈಯಕ್ತಿಕ ಸಾಮರ್ಥ್ಯದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ’ ಎಂದು ರಹಾನೆ ತಿಳಿಸಿದ್ದಾರೆ.

‘ಈ ಹಿಂದೆ ಹಲವು ಪಂದ್ಯಗಳಲ್ಲಿ ಇನಿಂಗ್ಸ್‌ ಆರಂಭಿಸಿದ್ದೇನೆ. ಅದು ನನಗೆ ತುಂಬಾ ಖುಷಿ ಕೊಟ್ಟಿದೆ. ತಂಡದ ಆಡಳಿತ ಮಂಡಳಿಯು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವಂತೆ ಸೂಚಿಸಿದರೆ ಅದಕ್ಕೂ ಸಿದ್ಧ’ ಎಂದಿದ್ದಾರೆ.

‘ಟ್ವೆಂಟಿ–20 ಮಾದರಿಯಲ್ಲಿ ನಾನು ಯಾರ ಬ್ಯಾಟಿಂಗ್‌ ಶೈಲಿಯನ್ನೂ ಅನುಕರಿಸಲು ಇಷ್ಟಪಡುವುದಿಲ್ಲ. ನನ್ನದೇ ಆದ ಶೈಲಿಯೊಂದಿದೆ. ಅದನ್ನು ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದೂ ಹೇಳಿದ್ದಾರೆ.

‘ಟ್ವೆಂಟಿ–20 ಮಾದರಿಯಲ್ಲಿ ಆಡುವಾಗ ಚೆಂಡಿನ ಮೇಲೆ ಸದಾ ನಿಗಾ ಇಟ್ಟಿರಬೇಕು. ಅವಕಾಶ ಸಿಕ್ಕಾಗಲೆಲ್ಲಾ ಅದನ್ನು ಬೌಂಡರಿ ಗೆರೆ ದಾಟಿಸುವುದಕ್ಕೆ ಪ್ರಯತ್ನಿಸಬೇಕು. ಕೆಟ್ಟ ಹೊಡೆತ, ಒಳ್ಳೆಯ ಹೊಡೆತ ಅಂತೆಲ್ಲಾ ಯೋಚಿಸುತ್ತಾ ಕೂರಬಾರದೆಂದು ರಾಹುಲ್‌ ದ್ರಾವಿಡ್‌ ಅವರು ಹೇಳಿದ್ದು ನನಗೆ ಇನ್ನೂ ನೆನಪಿದೆ. ಅವರ ಸಲಹೆ ಸರಿ ಎನ್ನುವುದು ನನ್ನ ಭಾವನೆ’ ಎಂದೂ ಅವರು ನುಡಿದಿದ್ದಾರೆ.

ಏಕದಿನ ಮಾದರಿಯಲ್ಲಿ 90 ಪಂದ್ಯಗಳನ್ನು ಆಡಿರುವ ರಹಾನೆ, 35.26ರ ಸರಾಸರಿಯಲ್ಲಿ 2,962ರನ್‌ಗಳನ್ನು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT