ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಖರ್‌ ಧವನ್‌ ಹೆಬ್ಬೆರಳು ಮುರಿತ; ಕನಿಷ್ಠ ಎರಡು ಪಂದ್ಯಗಳಿಗೆ ಅಲಭ್ಯ

ವಿಶ್ವಕಪ್‌ ಕ್ರಿಕೆಟ್‌
Last Updated 11 ಜೂನ್ 2019, 16:49 IST
ಅಕ್ಷರ ಗಾತ್ರ

ನವದೆಹಲಿ:ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಮುಂದಿನ ಎರಡು ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.ಹೆಬ್ಬೆರಳು ಮುರಿತದಿಂದಾಗಿ ಟೀಂ ಇಂಡಿಯಾದ ಏಕೈಕ ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ತಂಡದಿಂದ ಹೊರಬಿದ್ದಂತಾಗಿದೆ.

ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ 109 ಎಸೆತಗಳಿಗೆ 117 ರನ್‌ ಗಳಿಸುವ ತಂಡ ಬೃಹತ್‌ ಮೊತ್ತ ದಾಖಲಿಸಲು ಭದ್ರ ಬುನಾದಿ ಹಾಕಿದ್ದರು. ಊತ ಬಂದಿದ್ದ ಎಡಗೈ ಹೆಬ್ಬೆರಳನ್ನು ಸ್ಕ್ಯಾನ್‌ಗೆ ಒಳಪಡಿಸಲಾಗಿತ್ತು. ಹೆಬ್ಬೆರಳಿನ ಎಲುಬಿನಲ್ಲಿ ಕೂದಲೆಳೆಯಷ್ಟು ಮುರಿತ ಕಂಡು ಬಂದಿದೆ. ಗಾಯವು ವಾಸಿಯಾಗಲು ಎರಡು ವಾರಗಳ ವಿಶ್ರಾಂತಿಯ ಅಗತ್ಯವಿದೆಯೆಂದು ವೈದರು ಹೇಳಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

33 ವರ್ಷ ವಯಸ್ಸಿನ ಶಿಖರ್‌ ಧವನ್‌ ಭಾನುವಾರದ ಪಂದ್ಯದಲ್ಲಿ ಬ್ಯಾಟಿಂಗ್‌ ಮಾಡುವಾಗ ನೇಥನ್ ಕಾಲ್ಟರ್‌ನೈಲ್‌ ಎಸೆತ ಹೆಬ್ಬರಳಿಗೆ ತಾಗಿ ಗಾಯಗೊಂಡಿದ್ದರು.ಫಿಸಿಯೊ ಪ್ಯಾಟ್ರಿಕ್ ಫರ್ಹಾಟ್ ಅವರು ಪ್ರಥಮ ಚಿಕಿತ್ಸೆ ನೀಡಿದ್ದರು.ಆಟ ಮುಂದುವರಿಸಿದ್ದ ಧವನ್‌ ಭರ್ಜರಿ ಹೊಡೆತಗಳ ಮೂಲಕಶತಕ ಪೂರೈಸಿದ್ದರು. ಆದರೆ, ಭಾರತ ಫೀಲ್ಡಿಂಗ್‌ ಮಾಡುವಾಗ ಕೊನೆಯವರೆಗೂ ಮೈದಾನಕ್ಕೆ ಇಳಿಯಲೇ ಇಲ್ಲ. ಧವನ್‌ ಬದಲು ರವೀಂದ್ರ ಜಡೇಜಾ ಪೂರ್ಣ 50 ಓವರ್‌ಗಳು ಕ್ಷೇತ್ರ ರಕ್ಷಣೆ ನಡೆಸಿದರು.

‘ಗುರುವಾರ ನ್ಯೂಜಿಲೆಂಡ್ ಎದುರು ಮತ್ತು ಭಾನುವಾರ ಪಾಕಿಸ್ತಾನದ ಎದುರು ನಡೆಯುವ ಪಂದ್ಯಗಳಿಗೆ ಅವರು ಅಲಭ್ಯರಾಗಲಿದ್ದಾರೆ’ ಎಂದೂ ಮೂಲಗಳು ಹೇಳಿವೆ. ಒಂದೊಮ್ಮೆ ಅವರು ಚೇತರಿಸಿಕೊಂಡು ಫಿಟ್ ಆದರೆ ಜೂನ್ 22ರಂದು ಆಫ್ಗಾನಿಸ್ತಾನ ಎದುರು ನಡೆಯುವ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ.

ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ಕೊರತೆ ಎದುರಿಸಲಿರುವ ಭಾರತ ತಂಡ, ರೋಹಿತ್‌ ಶರ್ಮಾ ಮತ್ತು ಕೆ.ಎಲ್‌.ರಾಹುಲ್‌ ಮೂಲಕ ಇನಿಂಗ್ಸ್‌ ಆರಂಭಿಸುವುದು ಬಹುತೇಕ ನಿಚ್ಚಳವಾಗಿದೆ. ಸದ್ಯ ರಾಹುಲ್‌ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದು, ಆ ಸ್ಥಾನಕ್ಕೆ ಕೊಹ್ಲಿ ಯಾರನ್ನು ಕಣಕ್ಕೆ ಇಳಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಯಾವುದೇ ಸಮಯದಲ್ಲಿ ಬದಲಿ ಆಟಗಾರನಾಗಿ ರಿಷಬ್‌ ಪಂತ್‌ ಅಥವಾ ಅಂಬಾಟಿ ರಾಯುಡು ಅವರನ್ನು ತಂಡಕ್ಕೆ ಕರೆಸಿಕೊಳ್ಳುವ ಸಾಧ್ಯತೆಯೂ ಇದೆ. ಬ್ಯಾಟ್ಸ್‌ಮನ್‌ ಕೊರತೆ ನೀಗಿಸಿಕೊಳ್ಳಲು ಪಂತ್‌ ಅಥವಾ ರಾಯುಡು ಆಯ್ಕೆಗೆ ತಂಡ ಮುಂದಾಗಬಹುದಾಗಿದೆ. ಕೆಲವು ವರದಿಗಳ ಪ್ರಕಾರ, ಮುಂಬೈ ಆಟಗಾರ ಮತ್ತು ಭಾರತ ಎ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಅವರನ್ನು ಕರೆಸಿಕೊಳ್ಳಲು ತಂಡದ ಮ್ಯಾನೇಜರ್‌ ಮುಂದಾಗಿದ್ದಾರೆ ಎನ್ನಲಾಗಿದೆ. ಶ್ರೇಯಸ್‌ ಪ್ರಸ್ತುತ ಇಂಗ್ಲೆಂಡ್‌ನಲ್ಲಿಯೇ ಇದ್ದಾರೆ.

ಶಿಖರ್ ಬದಲಿಗೆ ಪಂತ್: ಗಾವಸ್ಕರ್
ನವದೆಹಲಿ (ಪಿಟಿಐ):
ಗಾಯಗೊಂಡಿರುವ ಶಿಖರ್ ಧವನ್ ಅವರು ಇಡೀ ಟೂರ್ನಿಗೆ ಅಲಭ್ಯರಾದರೆ, ರಿಷಭ್ ಪಂತ್ ಅವರಿಗೆ ಅವಕಾಶ ನೀಡಬೇಕು ಎಂದು ಭಾರತದ ಹಿರಿಯಕ್ರಿಕೆಟಿಗ ಸುನಿಲ್ ಗಾವಸ್ಕರ್ಮತ್ತು ಇಂಗ್ಲೆಂಡ್ ಆಟಗಾರ ಕೆವಿನ್ ಪೀಟರ್ಸನ್ಹೇಳಿದ್ದಾರೆ.

ಆದರೆ, ಭಾರತದ ಇನ್ನೊಬ್ಬ ಹಿರಿಯ ಆಟಗಾರ ಗೌತಮ್ ಗಂಭೀರ್ ಅವರು, ಅಂಬಟಿ ರಾಯುಡುಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

‘ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಟೂರ್ನಿಯಲ್ಲಿ ರಿಷಭ್ ಪಂತ್ ಅವರು ಅಮೋಘವಾಗಿ ಆಡಿದ್ದರು. ಅವರಿಗೆ ಮೊದಲ ಆದ್ಯತೆ ಕೊಡಬೇಕು’ ಎಂದು ಗಾವಸ್ಕರ್ ಅವರು ‘ಇಂಡಿಯಾ ಟುಡೆ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ವೈದ್ಯರು ಹೇಳುವಂತೆ ಶಿಖರ್ ಅವರು ಮುಂದಿನ 18 ದಿನಗಳಲ್ಲಿ ಫಿಟ್ ಆಗುವುದು ಬಹುತೇಕ ಖಚಿತವಾಗಿದೆ. ಜೂನ್ 30ರಂದು ಭಾರತವು ಇಂಗ್ಲೆಂಡ್ ಎದುರು ಆಡಲಿದೆ. ಅ ಪಂದ್ಯಕ್ಕೂ ಅವರು ಫಿಟ್‌ ಆಗುವರೇ ಎಂಬ ಅನುಮಾನ ಇದೆ’ ಎಂದು ಗಾವಸ್ಕರ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪೀಟರ್ಸನ್, ‘ಶಿಖರ್ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅದರಿಂದ ಕೆ.ಎಲ್. ರಾಹುಲ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುವರು. ಆದ್ದರಿಂದ ನಾಲ್ಕನೇ ಕ್ರಮಾಂಕಕ್ಕೆ ರಿಷಭ್ ಪಂತ್ ಸೂಕ್ತವಾಗಲಿದ್ದಾರೆ’ ಎಂದಿದ್ದಾರೆ.

ಆದರೆ, ಗೌತಮ್ ಗಂಭೀರ್ ಅವರು,ಅನುಭವಿ ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಅವರಿಗೆ ಅವಕಾಶ ಕೊಡಬೇಕು ಎಂದು ಪ್ರತಿಪಾದಿಸಿದ್ದಾರೆ.

‘ಏಕದಿನ ಕ್ರಿಕೆಟ್‌ನಲ್ಲಿ 45ರ ಸರಾಸರಿ ಹೊಂದಿದ್ದಾರೆ. ಅವರು ವಿಶ್ವಕಪ್ ತಂಡದಲ್ಲಿ ಆಡಲು ಸೂಕ್ತ ಮತ್ತು ಅರ್ಹ ಆಟಗಾರನಾಗಿದ್ದಾರೆ. ಅವರನ್ನು ಆಯ್ಕೆ ಮಾಡದಿರುವುದು ಬೇಸರ ಮೂಡಿಸಿದೆ’ ಎಂದು ಗಂಭೀರ್ ‘ಸ್ಟಾರ್ ಸ್ಪೋರ್ಟ್ಸ್‌’ ಗೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT