ಸೋಮವಾರ, ಆಗಸ್ಟ್ 2, 2021
24 °C

2011ರ ವಿಶ್ವಕಪ್ ಫೈನಲ್‌ ಪಂದ್ಯದ ಬಗ್ಗೆ ಸಂದೇಹ ಬೇಡ ಎಂದ ಐಸಿಸಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಭಾರತದಲ್ಲಿ 2011ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ಕುರಿತು ಸಂದೇಹಪಡುವುದಕ್ಕೆ ಯಾವುದೇ ಕಾರಣ ಇಲ್ಲ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ  (ಐಸಿಸಿ) ಭ್ರಷ್ಟಾಚಾರ ತಡೆ ಘಟಕ ಶುಕ್ರವಾರ ಹೇಳಿದೆ.

ಮುಂಬೈನಲ್ಲಿ ಶ್ರೀಲಂಕಾ ಎದುರು ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಮೋಸದಾಟ ನಡೆದಿದ್ದು ಶ್ರೀಲಂಕಾ ಆಟಗಾರರು ಭಾರತಕ್ಕೆ ಪಂದ್ಯವನ್ನು ‘ಮಾರಿದ್ದರು’ ಎಂದು ಅಂದಿನ ಲಂಕಾ ಕ್ರೀಡಾ ಸಚಿವ ಮಹಿಂದಾನಂದ ಅಲುತ್‌ಗಮಗೆ ದೂರಿದ್ದರು. ಈ ಸಂಬಂಧ ಲಂಕಾ ಸರ್ಕಾರ ತನಿಖೆಗೆ ಆದೇಶ ನೀಡಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ತನಿಖೆಯನ್ನು ಕೈಬಿಡಲು ಶುಕ್ರವಾರ ನಿರ್ಧರಿಸಿದೆ. ಈ ನಿರ್ಧಾರ ಪ್ರಕಟಿಸಿದ ಕೆಲವೇ ತಾಸುಗಳಲ್ಲಿ ಐಸಿಸಿ ತನ್ನ ನಿರ್ಧಾರ ತಿಳಿಸಿದೆ.

‘ಆರೋಪದ ಕುರಿತು ಕೂಲಂಕಷ ಪರಿಶೀಲನೆ ನಡೆಸಲಾಯಿತು. ಆ ಪಂದ್ಯದ ಸಮಗ್ರತೆಯ ಬಗ್ಗೆ ಸಂದೇಹಪಡಲು ಕಾರಣಗಳೇ ಇಲ್ಲ ಎಂಬುದು ಮನವರಿಕೆಯಾಗಿದೆ. ತನಿಖೆಗೆ ಪೂರಕವಾದ ಮಾಹಿತಿಗಳನ್ನು ನಮಗೆ ಯಾರೂ ಒದಗಿಸಲಿಲ್ಲ’ ಎಂದು ಘಟಕದ ಪ್ರಧಾನ ವ್ಯವಸ್ಥಾಪಕ ಅಲೆಕ್ಸ್ ಮಾರ್ಷಲ್ ಹೇಳಿದ್ದಾರೆ.

ತನಿಖೆ ನಡೆಸುವಂತೆ ಭ್ರಷ್ಟಾಚಾರ ತಡೆ ಘಟಕಕ್ಕೆ ಐಸಿಸಿ ಸೂಚಿಸಿತ್ತು. ಆದರೆ ಅದನ್ನು ಅಲೆಕ್ಸ್ ಮಾರ್ಷಲ್ ಕಸದ ಬುಟ್ಟಿಗೆ ಎಸೆದಿದ್ದರು ಎಂದು ಮಹಿಂದಾನಂದ ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಮಾರ್ಷಲ್ ತಮ್ಮ ಬಳಿಗೆ ಯಾವುದೇ ಪತ್ರ ಬಂದಿಲ್ಲ, ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳನ್ನು ಐಸಿಸಿ ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂಬುದನ್ನು ಮರೆಯಬಾರದು ಎಂದು ಹೇಳಿದ್ದಾರೆ.

ಮಹಿಂದಾನಂದ ಅವರ ಆರೋಪಕ್ಕೆ ಸಂಬಂಧಿಸಿ ಅಂದಿನ ಆಯ್ಕೆ ಸಮಿತಿ ಮುಖ್ಯಸ್ಥ ಅರವಿಂದ ಡಿ’ಸಿಲ್ವಾ, ನಾಯಕ ಕುಮಾರ ಸಂಗಕ್ಕಾರ ಮತ್ತು ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ್ದ ಮಾಹೇಲ ಜಯವರ್ಧನೆ ಅವರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು