ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ಸಭೆ: ಮುಖ್ಯಸ್ಥರ ನಾಮನಿರ್ದೇಶನ ಚರ್ಚೆ ಸಾಧ್ಯತೆ

Last Updated 24 ಜೂನ್ 2020, 13:24 IST
ಅಕ್ಷರ ಗಾತ್ರ

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ವಿಡಿಯೊ ಕಾನ್ಫರೆನ್ಸ್‌ ಸಭೆಯು ಗುರುವಾರ ನಡೆಯಲಿದೆ. ಇದರಲ್ಲಿ ಐಸಿಸಿಯ ನೂತನ ಮುಖ್ಯಸ್ಥರ ಹುದ್ದೆಗೆ ನಾಮನಿರ್ದೇಶನ ಪ್ರಕ್ರಿಯೆ ಕುರಿತು ಚರ್ಚೆ ನಡೆಯಲಿದೆ.

ಆಸ್ಟ್ರೇಲಿಯಾದಲ್ಲಿ ಆಯೋಜಿಸಲಾಗಿರುವ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯನ್ನು ರದ್ದು ಮಾಡುವ ಅಥವಾ ಮುಂದೂಡುವ ನಿರ್ಧಾರವನ್ನು ಮುಂದಿನ ತಿಂಗಳೂ ಪ್ರಕಟಿಸುವುದಾಗಿ ಈಗಾಗಲೇ ಐಸಿಸಿ ಹೇಳಿದೆ. ಆದ್ದರಿಂದ ಆ ವಿಷಯವು ಈ ಸಭೆಯಲ್ಲಿ ಪ್ರಸ್ತಾವವಾಗುವುದು ಅನುಮಾನ.

ಸದ್ಯ ಮುಖ್ಯಸ್ಥರಾಗಿರುವ ಶಶಾಂಕ್ ಮನೋಹರ್ ಅವರ ಕಾರ್ಯಾವಧಿಯು ಮುಕ್ತಾಯವಾಗಿದ್ದು ಹೊಸಬರ ನೇಮಕಕ್ಕೆ ಪ್ರಕ್ರಿಯೆ ನಡೆಯಬೇಕಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಸೌರವ್ ಗಂಗೂಲಿ ಅವರು ಕೂಡ ಈ ಹುದ್ದೆಗೇರುವುದಾಗಿ ಮಾತುಗಳು ಕೇಳಿಬರುತ್ತಿವೆ.

‘ಚುನಾವಣೆಯ ಅಥವಾ ಆಯ್ಕೆಯ ದಿನಾಂಕವನ್ನು ಗುರುವಾರ ಘೋಷಿಸುವ ಕುರಿತು ನನಗಿನ್ನೂ ಖಚಿತವಾಗಿ ಗೊತ್ತಿಲ್ಲ. ಆದರೆ ಈ ವಿಷಯವೇ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗುವುದು ಖಚಿತ’ ಎಂದು ಐಸಿಸಿ ಸದಸ್ಯರೊಬ್ಬರು ಹೇಳಿದ್ದಾರೆ.

‘ಐಸಿಸಿಯಲ್ಲಿ ಇ–ಮೇಲ್‌ ಗಳ ಮಾಹಿತಿ ಸೋರಿಕೆಯ ತನಿಖೆಯ ಕುರಿತು ಸಮಗ್ರ ಚರ್ಚೆ ನಡೆಯಲಿದೆ. ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸುವರು. ಆದರೆ, ಸದಸ್ಯರ ಹಾಜರಾತಿಯ ಸಂಖ್ಯೆಯ ಮೇಲೆ ನಿರ್ಧಾರಗಳು ರೂಪುಗೊಳ್ಳುತ್ತವೆ’ ಎಂದಿದ್ದಾರೆ.

ಐಸಿಸಿ ಆಡಳಿತ ಮಂಡಳಿಯಲ್ಲಿ ಮುಖ್ಯಸ್ಥರು, ಟೆಸ್ಟ್ ಆಡುವ ದೇಶಗಳ 12 ಪ್ರತಿನಿಧಿಗಳು, ಮೂರು ಸಹ ಸದಸ್ಯ ರಾಷ್ಟ್ರಗಳು (ಮಲೇಷ್ಯಾ, ಸ್ಕಾಟ್ಲೆಂಡ್ ಮತ್ತು ಸಿಂಗಪುರ), ಸ್ವತಂತ್ರ ನಿರ್ದೇಶಕಿ (ಇಂದಿರಾ ನೂಯಿ) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನು ಸವಾನಿ ಇದ್ದಾರೆ.

ಸದ್ಯ ಮುಖ್ಯಸ್ಥರ ಹುದ್ದೆಗೆ ಇಬ್ಬರು ಪ್ರಮುಖರ ಹೆಸರುಗಳು ಕೇಳಿಬರುತ್ತಿವೆ. ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಸಂಸ್ಥೆ ಮುಖ್ಯಸ್ಥ ಕಾಲಿನ್ ಗ್ರೇವ್ಸ್‌ ಮತ್ತು ಸೌರವ್ ಗಂಗೂಲಿ ಅವರು ರೇಸ್‌ನಲ್ಲಿದ್ದಾರೆನ್ನಲಾಗಿದೆ. ಆದರೆ ಕಾಲಿನ್ ಅವರಿಗೇ ಹೆಚ್ಚು ಅವಕಾಶ ಇದೆ ಎಂದೂ ಹೇಳಲಾಗುತ್ತಿದೆ.

‘ಗಂಗೂಲಿ ಐಸಿಸಿ ಮುಖ್ಯಸ್ಥರ ಹುದ್ದೆಗೆ ಸ್ಪರ್ಧಿಸುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. 2021ರಲ್ಲಿ ಅವರು ಬಂಗಾಳ ರಾಜ್ಯದ ಮುಖ್ಯಮಂತ್ರಿಯ ಚುನಾವಣೆಗೂ ಸ್ಪರ್ಧಿಸುವ ಕುರಿತೂ ಖಚಿತತೆ ಇಲ್ಲ. ಅವರ ರಾಜಕೀಯ ಆಸಕ್ತಿಯ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕು’ ಎಂದು ಬಿಸಿಸಿಐನ ಸದಸ್ಯರೊಬ್ಬರು ಹೇಳಿದ್ದಾರೆ.

ಬಿಸಿಸಿಐನ ನೂತನ ನಿಯಮಾಳಿಯ ಪ್ರಕಾರ ಗಂಗೂಲಿ ಅವರ ಅಧ್ಯಕ್ಷ ಹುದ್ದೆಯನ್ನು ಸೆಪ್ಟೆಂಬರ್‌ನಲ್ಲಿ ಬಿಟ್ಟುಕೊಡಬೇಕು. ಏಕೆಂದರೆ ಅವರು ಸತತ ಆರು ವರ್ಷ (ಎರಡು ಅವಧಿ) ಬಂಗಾಳ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಬಿಸಿಸಿಐನ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ಧಾರೆ. ಆದ್ದರಿಂದ ಅವರು ಕೂಲಿಂಗ್ ಆಫ್ ನಿಯಮಕ್ಕೆ ಒಳಪಡಲಿದ್ದಾರೆ. ಈ ನಿಯಮದ ಸಡಿಲಿಕೆಗಾಗಿ ಬಿಸಿಸಿಐ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT