ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ಸಭೆಯಲ್ಲಿ ನಿರ್ಧಾರ: ಚೆಂಡು ವಿರೂಪಕ್ಕೆ ಕಠಿಣ ಶಿಕ್ಷೆ

Last Updated 3 ಜುಲೈ 2018, 19:53 IST
ಅಕ್ಷರ ಗಾತ್ರ

ದುಬೈ: ಚೆಂಡು ವಿರೂಪಗೊಳಿಸುವ ಆಟಗಾರರಿಗೆ ಇನ್ನು ಮೇಲೆ ಆರು ಟೆಸ್ಟ್‌ಗಳು ಅಥವಾ 12 ಏಕದಿನ ಪಂದ್ಯಗಳಿಗೆ ಅಮಾನತು ಮಾಡುವ ನಿರ್ಧಾರವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತೆಗೆದುಕೊಂಡಿದೆ.

ಡಬ್ಲಿನ್‌ನಲ್ಲಿ ಸೋಮವಾರ ರಾತ್ರಿ ನಡೆದ ಐಸಿಸಿ ವಾರ್ಷಿಕ ಸಭೆಯಲ್ಲಿ ಈ ನಿರ್ಣಯವನ್ನು ಪ್ರಕಟಿಸಲಾಯಿತು.

ಈಚೆಗೆ ಆಸ್ಟ್ರೇಲಿಯಾ ತಂಡದ ಡೇವಿಡ್ ವಾರ್ನರ್, ಸ್ಟಿವನ್ ಸ್ಮಿತ್ ಮತ್ತು ಬೆನ್‌ಕ್ರಾಫ್ಟ್‌ ಅವರು ಚೆಂಡು ವಿರೂಪ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. ಇತ್ತೀಚೆಗೆ ಶ್ರೀಲಂಕಾ ತಂಡದ ಆಟಗಾರ ಚಾಂಡಿಮಲ್ ಅವರ ಮೇಲೂ ಚೆಂಡು ವಿರೂಪಗೊಳಿಸಿದ ಆರೋಪ ದೊಡ್ಡ ಸುದ್ದಿಯಾಗಿತ್ತು.

‘ಕ್ರಿಕೆಟ್ ಸಭ್ಯರ ಆಟವಾಗಿ ಉಳಿಯಬೇಕು. ಅದಕ್ಕಾಗಿ ಕೆಲವು ಕೆಟ್ಟ ಕೆಲಸಗಳಿಗೆ ಕಡಿವಾಣ ಹಾಕುವುದು ಅವಶ್ಯಕವಾಗಿದೆ. ಐಸಿಸಿ ನಿಯಮಾವಳಿಯ ಪ್ರಕಾರ ಚೆಂಡು ವಿರೂಪವು ಎರಡನೇ ದರ್ಜೆಯದ್ದಾಗಿದೆ. ಅದನ್ನು ಮೂರನೇ ದರ್ಜೆಗೆ ಏರಿಸಲಾಗುವುದು. ಇದಕ್ಕೆ ಐಸಿಸಿಯ ಎಲ್ಲ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾ ಸಮಿತಿ (ಸಿಇಸಿ)ಯ ಸದಸ್ಯರು ನೀಡಿದ್ದಾರೆ‘ ಎಂದು ಐಸಿಸಿ ಮುಖ್ಯಸ್ಥ ಶಶಾಂಕ್ ಮನೋಹರ್ ತಿಳಿಸಿದ್ದಾರೆ.

‘ಆಟಗಾರರು ಮೈದಾನದಲ್ಲಿ ತೋರಿಸುವ ಕೆಟ್ಟ ವರ್ತನೆಗಳಿಗೆ ಕಡಿವಾಣ ಹಾಕಲು ಸಿಇಸಿಯು ಮಾಡಿರುವ ಶಿಫಾರಸುಗಳು ಉತ್ತಮವಾಗಿವೆ. 21ನೇ ಶತಮಾನದಲ್ಲಿಯೂ ಕ್ರೀಡಾ ಸ್ಫೂರ್ತಿಯನ್ನು ಉಳಿಸುವಲ್ಲಿ ಈ ಕ್ರಮ ನೆರವಾಗಲಿದೆ’ ಎಂದು ಶಶಾಂಕ್ ಹೇಳಿದ್ದಾರೆ.

ಉತ್ತಮ ಸೌಲಭ್ಯ ನೀಡಲು ಸೂಚನೆ: ಕ್ರಿಕೆಟ್ ಸರಣಿಗಳ ಆತಿಥ್ಯ ವಹಿಸುವ ದೇಶಗಳ ಕ್ರಿಕೆಟ್ ಸಂಸ್ಥೆಗಳು ತಮ್ಮ ತವರು ಮತ್ತು ಪ್ರವಾಸಿ ತಂಡಗಳಿಗೆ ಸರಿಸಮಾನವಾದ ಸೌಲಭ್ಯಗಳನ್ನು ನೀಡಬೇಕು ಎಂದು ಐಸಿಸಿ ಸೂಚನೆ ನೀಡಿದೆ.

‘ತವರಿನ ತಂಡಗಳಿಗೆ ನೀಡುವಂತಹದೇ ಪೂರ್ವಭಾವಿ ಅಭ್ಯಾಸದ ಕ್ರೀಡಾಂಗಣಗಳು, ಬೌಲಿಂಗ್, ಬ್ಯಾಟಿಂಗ್‌ಗೆ ನೆಟ್ಸ್‌ ಸೌಲಭ್ಯಗಳನ್ನು ಪ್ರವಾಸಿ ತಂಡಗಳಿಗೂ ಒದಗಿಸಬೇಕು. ಉಭಯ ತಂಡಗಳ ಆಟಗಾರರು ಪರಸ್ಪರ ಬೆರೆಯಲೂ ಅವಕಾಶ ಕೊಡಬೇಕು’ ಎಂದು ಸಮಿತಿ ಹೇಳಿದೆ.

‘ಟೂರ್ನಿಯಲ್ಲಿ ಆಡಲು ತೆರಳುವ ಪ್ರವಾಸಿ ತಂಡಗಳ ಆಟಗಾರರು ಮತ್ತು ಆಡಳಿತ ಸಿಬ್ಬಂದಿಯನ್ನು ದೇಶದ ಗಣ್ಯ ಅತಿಥಿಗಳು ಎಂದು ಪರಿಗಣಿಸಬೇಕು. ಅವರಿಗೆ ಉತ್ತಮ ವಸತಿ, ಪ್ರಯಾಣ ಸೌಲಭ್ಯ ಮತ್ತು ಶ್ರೇಷ್ಠ ಗುಣಮಟ್ಟದ ಆಹಾರದ ವ್ಯವಸ್ಥೆ ಮಾಡಬೇಕು. ತವರಿನ ತಂಡಕ್ಕೊಂದು, ಪ್ರವಾಸಿ ತಂಡಕ್ಕೊಂದು ರೀತಿಯ ವ್ಯವಸ್ಥೆ ನೀಡಬಾರದು. ಇಬ್ಬರನ್ನೂ ಸಮವಾಗಿ ಪರಿಗಣಿಸಬೇಕು’ ಎಂದು ತಿಳಿಸಿದೆ.

‘ಮುಂದಿನ ವರ್ಷದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಮರುದಿನವನ್ನು ಕಾಯ್ದಿಟ್ಟ ದಿನವನ್ನಾಗಿ ನಿಗದಿಪಡಿಸಬೇಕು. ಒಂದೊಮ್ಮೆ ಮಳೆ, ಕೆಟ್ಟ ಹವಾಮಾನದ ಫಲವಾಗಿ ಪಂದ್ಯ ನಡೆಯದಿದ್ದರೆ ಕಾಯ್ದಿಟ್ಟ ದಿನದಲ್ಲಿ ಆಡಿಸಬೇಕು’ ಎಂದು ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT