ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಚೆಂಡಿನ ಹೊಳಪಿಗೆ ಎಂಜಲು ಬಳಕೆ ಶಾಶ್ವತ ನಿಷೇಧ

ಅಕ್ಟೋಬರ್ 1ರಿಂದ ಐಸಿಸಿ ಪರಿಷ್ಕೃತ ನಿಯಮ ಜಾರಿ: ಇನ್ನು ಮುಂದೆ ಮಂಕಡಿಂಗ್ ಅಲ್ಲ ರನೌಟ್
Last Updated 20 ಸೆಪ್ಟೆಂಬರ್ 2022, 17:20 IST
ಅಕ್ಷರ ಗಾತ್ರ

ನವದೆಹಲಿ: ಕ್ರಿಕೆಟ್ ಪಂದ್ಯಗಳಲ್ಲಿ ಚೆಂಡಿನ ಹೊಳಪು ನಿರ್ವಹಿಸಲು ಎಂಜಲು ಬಳಸುವುದನ್ನು ಶಾಶ್ವತವಾಗಿ ನಿಷೇಧಿಸಲಾಗಿದೆ.

ಅಕ್ಟೋಬರ್‌ 1ರಿಂದ ಜಾರಿಯಾಗಲಿರುವ ಪರಿಷ್ಕೃತ ನಿಯಮಗಳ ಅಂತಿಮ ಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಂಗಳವಾರ ಪ್ರಕಟಿಸಿದೆ.

ಕೋವಿಡ್ ಕಾಲಘಟ್ಟದಲ್ಲಿ ಚೆಂಡಿಗೆ ಎಂಜಲು ಬಳಸುವುದನ್ನು ತಾತ್ಕಾಲಿಕವಾಗಿ ತಡೆ ನೀಡಲಾಗಿತ್ತು. ಈಗ ಆ ನಿಯಮವನ್ನು ಶಾಶ್ವತವಾಗಿ ಜಾರಿ ಮಾಡಲಾಯಿತು. ಕೊನೆಯ ಹಂತದ ಓವರ್‌ಗಳಲ್ಲಿ ಚೆಂಡಿನ ಹೊಳಪು ಕುಂದುವುದರಿಂದ ಬೌಲರ್‌ಗಳಿಗೆ ರಿವರ್ಸ್ ಸ್ವಿಂಗ್ ಮಾಡುವುದು ಕಠಿಣವಾಗಲಿದೆ ಎನ್ನಲಾಗಿದೆ. ಇದರಿಂದಾಗಿ ರಿವರ್ಸ್ ಸ್ವಿಂಗ್ ಎಸೆತಗಳು ನೇಪಥ್ಯಕ್ಕೆ ಸರಿಯಬಹುದು.

ಉಳಿದಂತೆ ಇನ್ನೂ ಕೆಲವು ಪ್ರಮುಖ ನಿಯಮಗಳನ್ನು ಪರಿಷ್ಕರಣೆ ಮಾಡಲಾಗಿದೆ.

ನಾನ್‌ಸ್ಟ್ರೈಕರ್‌ ಬ್ಯಾಟರ್‌ಗಳು ಎಸೆತ ಹಾಕುವ ಮುನ್ನವೇ ಕ್ರೀಸ್‌ನಿಂದ ಹೊರಗಡಿಯಿಟ್ಟಿದ್ದರೆ ರನೌಟ್ ಮಾಡಲು ಬೌಲರ್‌ಗೆ ಈಗ ಅವಕಾಶ ಇದೆ. ಇನ್ನು ಮುಂದೆ ಇದನ್ನು ಮಂಕಡಿಂಗ್ ಎಂದೂ ಕರೆಯಲಾಗುವುದಿಲ್ಲ. ಆದರೆ ರನ್‌ಔಟ್ ಎಂದು ಪರಿಗಣಿಸಲಾಗುವುದು.

ಐಪಿಎಲ್‌ ಟೂರ್ನಿಯಲ್ಲಿ ಸ್ಪಿನ್ನರ್ ಆರ್. ಅಶ್ವಿನ್ ಹಾಗೂ ಇಂಗ್ಲೆಂಡ್‌ನ ಜೋಸ್ ಬಟ್ಲರ್ ಅವರನ್ನು ’ಮಂಕಡಿಂಗ್’ ರೀತಿಯಲ್ಲಿ ಔಟ್ ಮಾಡಿದಾಗ ಬಹಳಷ್ಟು ಪರ–ವಿರೋಧ ಚರ್ಚೆಗಳು ನಡೆದಿದ್ದವು. ಈ ರೀತಿ ಔಟ್ ಮಾಡುವುದು ಬ್ಯಾಟರ್‌ಗಳಿಗೆ ಮಾಡುವ ಅವಮಾನ ಎಂದೂ ಹೇಳಲಾಗಿತ್ತು.

ಪ್ರಮುಖ ನಿಯಮಗಳ ಪರಿಷ್ಕರಣೆ

* ಚೆಂಡನ್ನು ಹೊಳಪುಗೊಳಿಸಲು ಮಾಡುತ್ತಿದ್ದ ಎಂಜಲು ಬಳಕೆಗೆ ಶಾಶ್ವತ ನಿಷೇಧ

* ಏಕದಿನ ಹಾಗೂ ಟೆಸ್ಟ್‌ ಪಂದ್ಯಗಳಲ್ಲಿ ಬ್ಯಾಟರ್‌ಗಳು ಕ್ರೀಸ್‌ಗೆ ಎರಡು ನಿಮಿಷಗಳಲ್ಲಿ ಬರಬೇಕು. ಈ ಮೊದಲು ಮೂರು ನಿಮಿಷದ ನಿಯಮ ಇತ್ತು. ಟಿ20 ಮಾದರಿಯಲ್ಲಿ ಮೊದಲಿನಂತೆ 90 ಸೆಕೆಂಡುಗಳ ಅವಧಿಯೇ ಮುಂದುವರಿಯುವುದು.

* ಪಿಚ್‌ನಲ್ಲಿ ಬೌಲರ್‌ಗಳು ನಿಯಮಬಾಹಿರ ಹಾಗೂ ದುರುದ್ದೇಶಪೂರ್ವಕವಾಗಿ ಓಡಿದರೆ ತಂಡಕ್ಕೆ ಐದು ರನ್‌ಗಳ ದಂಡ ಹಾಕಲಾಗುವುದು. ಅಲ್ಲದೇ ಆ ಎಸೆತವನ್ನು ಡೆಡ್ ಬಾಲ್ ಎಂದು ಘೋಷಿಸಲಾಗುವುದು.

* ಮಂಕಡಿಂಗ್‌ ಕೈಬಿಡಲಾಗಿದ್ದು. ಇನ್ನು ಮುಂದೆ ಇದನ್ನು ರನೌಟ್ ಎಂದು ಪರಿಗಣಿಸಲಾಗುವುದು. ಬೌಲರ್‌ಗಳು ಎಸೆತ ಹಾಕುವ ಮುನ್ನವೇ ನಾನ್‌ಸ್ಟ್ರೈಕರ್ ಬ್ಯಾಟರ್‌ಗಳು ಕ್ರೀಸ್‌ ಬಿಟ್ಟಾಗ, ಬೌಲರ್ ರನ್‌ಔಟ್ ಮಾಡಲು ಇದರಿಂದ ಅವಕಾಶ ದೊರೆತಿದೆ.

* ಫೀಲ್ಡಿಂಗ್ ಮಾಡುವ ತಂಡವು ನಿಗದಿತ ಸಮಯದೊಳಗೆ ತಮ್ಮ ಪಾಲಿನ ಓವರ್‌ಗಳನ್ನು ಮುಗಿಸದಿದ್ದರೆ ಇನಿಂಗ್ಸ್‌ನ ಬಾಕಿ ಓವರ್‌ಗಳಲ್ಲಿ ಒಬ್ಬ ಫೀಲ್ಡರ್‌ ಮೂವತ್ತು ಯಾರ್ಡ್ ವೃತ್ತದೊಳಗೆ ನಿಲ್ಲಬೇಕು. ಅಲ್ಲದೇ ಈಚೆಗೆ ಟಿ20 ಕ್ರಿಕೆಟ್‌ನಲ್ಲಿ ಆರಂಭಿಸಲಾಗಿರುವು ದಂಡದ ನಿಯಮವೂ ಉಳಿದ ಮಾದರಿಗಳಿಗೆ ಅನ್ವಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT