ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC Womens T20 WC: ಸ್ಮೃತಿ ಮಿಂಚು: ಸೆಮಿಗೆ ಭಾರತ

Last Updated 20 ಫೆಬ್ರವರಿ 2023, 22:31 IST
ಅಕ್ಷರ ಗಾತ್ರ

ಗೆಬೆಹಾ, ದಕ್ಷಿಣ ಆಫ್ರಿಕಾ: ಸ್ಮೃತಿ ಮಂದಾನ ಅವರ ಬಿರುಸಿನ ಅರ್ಧಶತಕದ ನೆರವಿನಿಂದ ಭಾರತ ತಂಡ, ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು.

ಸೇಂಟ್‌ ಜಾರ್ಜ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ‘ಗುಂಪು 2’ರ ಕೊನೆಯ ಲೀಗ್‌ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ ಡಕ್ವರ್ಥ್‌ ಲೂಯಿಸ್‌ ನಿಯಮದಂತೆ ಐರ್ಲೆಂಡ್ ತಂಡವನ್ನು ಐದು ರನ್‌ಗಳಿಂದ ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 155 ರನ್‌ ಪೇರಿಸಿದರೆ, ಐರ್ಲೆಂಡ್‌ 8.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 54 ರನ್‌ ಗಳಿಸಿದ್ದಾಗ ಮಳೆ ಸುರಿದು ಆಟ ನಿಲ್ಲಿಸಲಾಯಿತು. ಡಕ್ವರ್ಥ್‌ ಲೂಯಿಸ್‌ ನಿಯಮದಂತೆ ಭಾರತ ಈ ವೇಳೆ ಐದು ರನ್‌ಗಳಿಂದ ಮುಂದಿತ್ತು.

ಆರಂಭಿಕ ಬ್ಯಾಟರ್‌ ಸ್ಮೃತಿ 56 ಎಸೆತಗಳಲ್ಲಿ 87 ರನ್‌ ಗಳಿಸಿ ಮಿಂಚಿದರು. ಐರ್ಲೆಂಡ್‌ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರು 9 ಬೌಂಡರಿ ಮತ್ತು 3 ಸಿಕ್ಸರ್‌ ಹೊಡೆದರು.

ಸೆಮಿಫೈನಲ್‌ ಪ್ರವೇಶಿಸಲು ಭಾರತ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು. ತಲಾ ಆರು ಪಾಯಿಂಟ್ಸ್‌ ಗಳಿಸಿದ ಇಂಗ್ಲೆಂಡ್‌ ಮತ್ತು ಭಾರತ ತಂಡಗಳು ‘ಗುಂಪು 2’ ರಿಂದ ನಾಲ್ಕರಘಟ್ಟ ಪ್ರವೇಶಿಸಿದವು.

ಉತ್ತಮ ಆರಂಭ: ಟಾಸ್‌ ಗೆದ್ದ ಹರ್ಮನ್‌ ಅವರು ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿದರು. ಸ್ಮೃತಿ ಹಾಗೂ ಶಫಾಲಿ ವರ್ಮಾ (24 ರನ್‌, 29 ಎ.) ಮೊದಲ ವಿಕೆಟ್‌ಗೆ 9.3 ಓವರ್‌ಗಳಲ್ಲಿ 62 ರನ್‌ ಸೇರಿಸಿ ಉತ್ತಮ ಆರಂಭ ನೀಡಿದರು. ಶಫಾಲಿ ವಿಕೆಟ್‌ ಪಡೆದ ಲಾರಾ ಡೆಲಾನಿ ಈ ಜತೆಯಾಟ ಮುರಿದರು.

ಬಳಿಕ ಬಂದ ಹರ್ಮನ್‌ಪ್ರೀತ್‌ ಕೌರ್‌ ಅವರು ಸ್ಮೃತಿಗೆ ತಕ್ಕ ಸಾಥ್‌ ನೀಡಿದರು. ಎರಡನೇ ವಿಕೆಟ್‌ಗೆ 52 ರನ್‌ಗಳು ಬಂದವು. ಆದರೆ ಇದರಲ್ಲಿ ಹರ್ಮನ್‌ ಕೊಡುಗೆ 13 ರನ್‌ಗಳು (20 ಎ.) ಮಾತ್ರ.

ಹರ್ಮನ್‌ ಮತ್ತು ರಿಚಾ ಘೋಷ್‌ (0) ಅವರನ್ನು ಬೆನ್ನುಬೆನ್ನಿಗೆ ಔಟ್‌ ಮಾಡಿದ ಐರ್ಲೆಂಡ್‌ ಬೌಲರ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದರೂ, ಸ್ಮೃತಿ ಅದಕ್ಕೆ ಅವಕಾಶ ನೀಡಲಿಲ್ಲ. ಲೆಗ್‌ ಸ್ಪಿನ್ನರ್‌ ಕಾರಾ ಮರೆ ಅವರ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ಅರ್ಧಶತಕ ಪೂರೈಸಿದರು. ಆ ಬಳಿಕ ಅವರು ಬಿರುಸಿನ ಆಟಕ್ಕಿಳಿದರು. ಜಾರ್ಜಿಯಾ ಡೆಂಪ್ಸೆ ಓವರ್‌ನಲ್ಲಿ ಸತತ ಎರಡು ಬೌಂಡರಿ ಹೊಡೆದರಲ್ಲದೆ, ಡೆಲಾನಿ ಓವರ್‌ನಲ್ಲಿ ಸಿಕ್ಸರ್‌ ಹೊಡೆದರು.

ಕಳೆದ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಅರ್ಧಶತಕ ಗಳಿಸಿದ್ದ ಸ್ಮೃತಿಗೆ ಶತಕ ಗಳಿಸುವ ಅದೃಷ್ಟ ಇರಲಿಲ್ಲ. ಭರ್ಜರಿ ಹೊಡೆತಕ್ಕೆ ಮುಂದಾಗಿ ವಿಕೆಟ್‌ ಒಪ್ಪಿಸಿದರು. ಅರ್ಧಶತಕ ಪೂರೈಸುವ ಮುನ್ನ ಅವರಿಗೆ ಜೀವದಾನ ಲಭಿಸಿತ್ತು. ಕೊನೆಯಲ್ಲಿ ಜೆಮಿಮಾ ರಾಡ್ರಿಗಸ್‌ 12 ಎಸೆತಗಳಲ್ಲಿ 19 ರನ್ ಕಲೆಹಾಕಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 155 (ಶಫಾಲಿ ವರ್ಮಾ 24, ಸ್ಮೃತಿ ಮಂದಾನ 87, ಹರ್ಮನ್‌ಪ್ರೀತ್‌ ಕೌರ್‌ 13, ಜೆಮಿಮಾ ರಾಡ್ರಿಗಸ್‌ 19, ಲಾರಾ ಡೆಲಾನಿ 33ಕ್ಕೆ 3, ಓರ್ಲಾ ಪ್ರಿಂಡರ್‌ಗಾಸ್ಟ್‌ 22ಕ್ಕೆ 2, ಅರ್ಲಿನ್‌ ಕೆಲಿ 28ಕ್ಕೆ 1)

ಐರ್ಲೆಂಡ್‌ 8.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 54 (ಗಾಬಿ ಲೆವಿಸ್‌ ಔಟಾಗದೆ 32, ಲಾರಾ ಡೆಲಾನಿ ಔಟಾಗದೆ 17) ಫಲಿತಾಂಶ: ಡಕ್ವರ್ಥ್‌ ಲೂಯಿಸ್‌ ನಿಯಮದಂತೆ ಭಾರತಕ್ಕೆ 5 ರನ್ ಗೆಲುವು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT